ಕನ್ನಡಪ್ರಭ ವಾರ್ತೆ ರಾಮನಾಥಪುರಏಪ್ರಿಲ್‌ 15ರೊಳಗೆ ಸಭೆ ಕರೆದು ಸಮಸ್ಯೆಯನ್ನು ಪರಿಹರಿಸಲಾಗುವುದು ಎನ್ನುವ ಭರವಸೆಯೊಂದಿಗೆ ಇಲ್ಲಿನ ಸುಬ್ರಮಣ್ಯ ನಗರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಬೆಳೆಗಾರರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ತಾತ್ಕಾಲಿಕವಾಗಿ ಅಂತ್ಯವಾಗಿದೆ.

ಪ್ರತಿಭಟನಾ ಸ್ಥಳಕ್ಕೆ ಅರಕಲಗೂಡು ತಾಲೂಕು ತಹಸೀಲ್ದಾರ್‌ ಕೆ.ಸಿ. ಸೌಮ್ಯ ಭೇಟಿ ಮಾಡಿ ರೈತರ ಅಹವಾಲನ್ನು ಸ್ವೀಕರಿಸಿ ಈ ಕ್ಷೇತ್ರದ ಶಾಸಕರಾದ ಎ. ಮಂಜು ಅಧ್ಯಕ್ಷತೆಯಲ್ಲಿ ಹಾಸನ ಜಿಲ್ಲಾಧಿಕಾರಿಗಳು, ಕೃಷಿ ಅಧಿಕಾರಿಗಳು, ತಂಬಾಕು ಮಂಡಳಿಯ ಅಧಿಕಾರಿಗಳು, ತಂಬಾಕು ಕೊಳ್ಳುವ ಕಂಪನಿಯವರು ಎಲ್ಲಾ ಅಧಿಕಾರಿಗಳು ಸೇರಿ ಏಪ್ರಿಲ್ 15ರ ಒಳಗೆ ಸಭೆ ಮಾಡಲಾಗುವುದು ಎಂದು ತಹಸೀಲ್ದಾರ್‌ ಕೆ.ಸಿ. ಸೌಮ್ಯ ತಿಳಿಸಿದರು.

ಇದೇ ಸಂದರ್ಭದಲ್ಲಿ ರೈತ ಸಂಘದವರು ಹಾಗೂ ಬೆಳೆಗಾರರ ಬೇಡಿಕೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರಕ್ಕೆ ನೀಡುವಂತೆ ತಹಸೀಲ್ದಾರ್‌ ಸೌಮ್ಯ ಅವರಿಗೆ ಮನವಿ ಪತ್ರ ನೀಡಿ ರೈತ ಸಂಘದ ಗೌರಾವಧ್ಯಕ್ಷ ಸೀಬಹಳ್ಳಿ ಯೋಗಣ್ಣ ಮಾತನಾಡಿದರು. ಕಷ್ಟಪಟ್ಟು ಬೆಳೆದ ತಂಬಾಕನ್ನು ಕಂಪನಿಯವರು ಪ್ರಾರಂಭದಲ್ಲಿ ಪ್ರತಿ ಕೆ.ಜಿ. ಕನಿಷ್ಠ - 300 ರು. ನಿಂದ 340 ರು. ಗಳನ್ನು ನೀಡುತ್ತಿದ್ದರು. ಅದರೇ ಅದೇ ತಂಬಾಕು ಈಗ 250 ರು. ನಿಂದ 300 ರು. ವರೆಗೆ ಬೆಲೆ ನೀಡುತ್ತಿದ್ದಾರೆ. ಈ ತಂಬಾಕು ಬೆಳೆಯಲು ಬ್ಯಾಂಕ್ ಸಾಲ ಮನೆ ಒಡವೆ ಇಟ್ಟು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ತಂಬಾಕು ಬೆಳೆದಿದ್ದೇವೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ ತಂಬಾಕು ಬೆಳೆಗಾರರಿಗೆ ಉತ್ತಮ ಬೆಲೆ ಮತ್ತು ನಷ್ಟ ಭರಿಸಲು ವ್ಯವಸ್ಥೆ ಮಾಡುವಂತೆ ರೈತರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಭಾರತೀಯ ರೈತ ಸಂಘದ ಅಧ್ಯಕ್ಷರಾದ ಬಂಡಿಗನಹಳ್ಳಿ ರವಿ, ಭಾರತೀಯ ರೈತ ಸಂಘದ ಉಪಾಧ್ಯಕ್ಷ ಮಂಜೇಗೌಡ, ಹರಳಹಳ್ಳಿ ತಮ್ಮೇಗೌಡ, ಸಂಜು, ಜಗದೀಶ್, ರಮೇಶ್, ದೋರೆ, ವೇದಾನಂದ, ವೀರೇಂದ್ರ, ತಾಂಬಾಕು ಮಂಡಳಿ ಹರಾಜು ಅಧೀಕ್ಷಕರು ಸವಿತಾ ಮುಂತಾದವರು ಇದ್ದರು. ಅರಕಲಗೂಡು ವೃತ್ತ ನಿರೀಕ್ಷಕರಾದ ವಸಂತ್ ಕುಮಾರ್‌, ಕೊಣನೂರು ಠಾಣೆ ಪಿಎಸ್‌ಐ ಮರಿಯಪ್ಪ ಬ್ಯಾಳಿ ಹಾಗೂ ತಂಡದವರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.