ಕನ್ನಡಪ್ರಭ ವಾರ್ತೆ ಹುಣಸೂರು ತಂಬಾಕು ದರದಲ್ಲಿ ದಿಢೀರ್ ಕುಸಿತವು ಸೇರಿದಂತೆ ತಂಬಾಕು ಮಾರುಕಟ್ಟೆಯಲ್ಲಿ ಪದೇ ಪದೇ ಉದ್ಭವಿಸುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ರೈತ ಮುಖಂಡರ ನಿಯೋಗದೊಂದಿಗೆ ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಶೀಘ್ರ ಸಭೆ ಆಯೋಜಿಲಾಗುವುದು ಎಂದು ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ ನೀಡಿದರು.ಕಳದ 5 ದಿನಗಳಿಂದ ತಾಲೂಕಿನ ಕಟ್ಟೆಮಳಲವಾಡಿ ಡಿ. ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯಲ್ಲಿ ರೈತರು ತಂಬಾಕು ಮಾರಾಟ ಬಂದ್ ಮಾಡಿ ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆ ಶನಿವಾರ ಮಾರುಕಟ್ಟೆಗೆ ಭೇಟಿ ನೀಡಿ ರೈತರೊಂದಿಗೆ ಅವರು ಮಾತನಾಡಿದರು.ಕಳೆದ 5 ದಿನಗಳಿಂದ ರೈತರು ಹೋರಾಟ ನಡೆಸಿರುವುದು ನನ್ನ ಗಮನಕ್ಕೆ ಬಂದಿದೆ. ಇದ್ದಕ್ಕಿದ್ದಂತೆ ತಂಬಾಕು ದರದಲ್ಲಿ ಕೆಜಿಗೆ 50-60 ರು.ಗಳ ಇಳಿಕೆ ರೈತರನ್ನು ಆತಂಕಕ್ಕೆ ಈಡು ಮಾಡಿದೆ. ಪ್ರತಿವರ್ಷ ಇಂತಹ ಘಟನೆಗಳು ಮರುಕಳಿಸುತ್ತಲೇ ಇದ್ದು, ತಾತ್ಕಾಲಿಕ ಪರಿಹಾರದಿಂದ ಸಮಸ್ಯೆ ಶಾಶ್ವತ ಪರಿಹಾರ ಕಾಣುತ್ತಿಲ್ಲ. ಕೇಂದ್ರ ಸರ್ಕಾರ ತಿಂಗಳ ಹಿಂದೆ ಖರೀದಿ ಕಂಪನಿಗಳ ಮೇಲೆ ವಿಧಿಸಿದ್ದ ಅಬಕಾರಿ ಶುಲ್ಕವನ್ನು ಹಿಂಪಡೆದಿದೆ. ಜಿಎಸ್‌ಟಿಯಲ್ಲಿನ ಶೇ. 18ರ ತೆರಿಗೆ ವಿಧಿಸಿರುವುದು ತಂಬಾಕಿನ ದರದಲ್ಲಿ ಇಳಿಕೆ ಉಂಟಾಗಲು ಕಾರಣ ಎನ್ನುವುದು ಕಂಪನಿಗಳ ವಾದವಾಗಿದೆ ಎಂದರು.ಪದೇ ಪದೇ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್‌ ಅವರನ್ನು ರೈತ ನಿಯೋಗದೊಂದಿಗೆ ಆದಷ್ಟು ಶೀಘ್ರ ಭೇಟಿಗೆ ಕ್ರಮ ವಹಿಸುತ್ತೇನೆ.ಫೆ. 23ರಂದು ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಬಾಕು ಬೆಳೆಗಾರರ ಸಭೆ ಆಯೋಜನೆಗೊಂಡಿದ್ದು, ಎಲ್ಲ ರೈತ ಮುಖಂಡರು ಸಭೆಯಲ್ಲಿ ಹಾಜರಾಗಬೇಕು. ನಾನು ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದೀಗ ಕಟ್ಟೆಮಳಲವಾಡಿ ಮಾರುಕಟ್ಟೆಯಲ್ಲಿ ರೈತರು ಮಾರಾಟಕ್ಕೆಂದು 2 ಸಾವಿರ ಬೇಲ್‌ಗಳನ್ನು ತಂದು ಇಟ್ಟಿದ್ದು, ಮಾರುಕಟ್ಟೆ ಬಂದ್ ಆದಂದಿನಿಂದ ಅದು ಅಲ್ಲೇ ಇದೆ. ಹಾಗಾಗಿ ಸೋಮವಾರದಿಂದ ಕಂಪನಿಗಳು ಮಾರುಕಟ್ಟೆ ಪ್ರಾಂಗಣದಲ್ಲಿರುವ ಬೇಲ್‌ಗಳನ್ನು ಖರೀದಿಸಬೇಕು. ಯಾವುದೇ ಬೇಲ್‌ಗೆ ಸಿಆರ್, ಅಥವಾ ರಿಜೆಕ್ಟ್ ಮಾಡಬಾರದೆಂದು ಮಂಡಳಿ ಅಧಿಕಾರಿಗಳ ಮೂಲಕ ಖರೀದಿ ಕಂಪನಿಗಳಿಗೆ ತಾಕೀತು ಮಾಡಲಿದ್ದೇನೆ. ರೈತರು ಪ್ರಾಂಗಣದಲ್ಲಿರುವ ಬೇಲ್‌ ಗಳನ್ನು ಶೀಘ್ರ ಮಾರಾಟ ಮಾಡಬೇಕೆಂದು ಅವರು ಮನವಿ ಮಾಡಿದರು.ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ರಾಮೇಗೌಡ ಮಾತನಾಡಿ, ಐಟಿಸಿಯಂತಹ ದೊಡ್ಡಕಂಪನಿಗಳು ಉತ್ತಮ ಬೆಲೆ ಕೊಡುತ್ತೇವೆಂದು ರೈತರನ್ನು ನಂಬಿಸಿ ಇದೀಗ ರೈತರನ್ನು ಬೀದಿ ಪಾಲು ಮಾಡುತ್ತಿವೆ. ರೈತರ ಪರವಾಗಿ ಮಂಡಳಿ ಮತ್ತು ಜನಪ್ರತಿನಿಧಿಗಳು ನಿಲ್ಲಬೇಕು. ಇದೀಗ ಉಳಿದಿರುವ ತಂಬಾಕನ್ನು ಸಂಪೂರ್ಣವಾಗಿ ಉತ್ತಮ ಬೆಲೆಗೆ ಖರೀದಿಸಲು ಸೂಕ್ತ ಕ್ರಮವಹಿಸಬೇಕೆಂದು ಒತ್ತಾಯಿಸಿದರು. ರೈತ ಮುಖಂಡರಾದ ಮಹೇಶ್, ಶಿವಣ್ಣ, ನಾಗರಾಜ ಮಲ್ಲಾಡಿ, ಪ್ರಭಾಕರ್, ಗಣೇಶ್ ಕುಮಾರಸ್ವಾಮಿ, ಶಿವಶಂಕರ್, ಹರಾಜು ಅಧೀಕ್ಷಕ ಸಿದ್ದರಾಜು, ರೈತ ಮುಖಂಡರು, ಡಿವೈಎಸ್‌ಪಿ ರವಿ, ಸಿಬ್ಬಂದಿ ಇದ್ದರು. ಸಂಸದರ ಮನವಿ ಮೇರೆಗೆ ರೈತರು ಪ್ರತಿಭಟನೆ ಹಿಂಪಡೆದರು.