ಜಮೀನುಗಳಲ್ಲಿ ಕಂದಕ ಬದು ರಚಿಸಿ ಮಳೆ ನೀರು ಸಂರಕ್ಷಿಸಿ

| Published : Feb 24 2024, 02:31 AM IST

ಸಾರಾಂಶ

ತಂಬಾಕು ಬೆಳೆಗೆ ಪರ್ಯಾಯ ಬೆಳೆಯಾಗಿ ರೇಷ್ಮೆ ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯಬಹುದು. ತಂಬಾಕು ಬೆಳೆಯಲ್ಲಿ ಪೋಷಕಾಂಶ ನಿರ್ವಹಣೆ ಮತ್ತು ಸುಧಾರಿತ ಬೇಸಾಯ ಪದ್ಧತಿಗಳ ಮಾಹಿತಿ ನೀಡಿ ರೈತರು ಕ್ಷೇತ್ರ ಮಟ್ಟದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತರಿಸಿದರು

ಕನ್ನಡಪ್ರಭ ವಾರ್ತೆ ಮೈಸೂರು

ರೈತರು ಜಮೀನುಗಳಲ್ಲಿ ಕಂದಕ ಬದು ರಚಿಸಿಕೊಂಡು ಮಳೆ ನೀರು ಸಂರಕ್ಷಣೆ ಮಾಡಿಕೊಂಡರೆ ಬೆಳೆ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ ಬೇಸಾಯ ತಜ್ಞ ಡಾ. ಮಹದೇವಸ್ವಾಮಿ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ಮೇಲೂರು ಗ್ರಾಮದಲ್ಲಿ ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ರಾಗಿ ಬೆಳೆಯ ಉತ್ತಮ ಬೇಸಾಯ ಪದ್ಧತಿಗಳು, ತಂಬಾಕಿಗೆ ಪರ್ಯಾಯ ಬೆಳೆ ಯೋಜನೆ ಮತ್ತು ಮಣ್ಣಿನ ಫಲವತ್ತತೆ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂಬಾಕು ಬೆಳೆಗೆ ಪರ್ಯಾಯ ಬೆಳೆಯಾಗಿ ರೇಷ್ಮೆ ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯಬಹುದು. ತಂಬಾಕು ಬೆಳೆಯಲ್ಲಿ ಪೋಷಕಾಂಶ ನಿರ್ವಹಣೆ ಮತ್ತು ಸುಧಾರಿತ ಬೇಸಾಯ ಪದ್ಧತಿಗಳ ಮಾಹಿತಿ ನೀಡಿ ರೈತರು ಕ್ಷೇತ್ರ ಮಟ್ಟದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತರಿಸಿದರು.

ಪಿರಿಯಾಪಟ್ಟಣ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ವೈ. ಪ್ರಸಾದ್‍ ಮಾತನಾಡಿ, ರಾಗಿಯಲ್ಲಿ ಸಾಲು ಬಿತ್ತನೆ ಜೊತೆಗೆ ಉತ್ತಮ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡರೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಖರೀದಿ ಕೇಂದ್ರದ ಮೂಲಕ ಮಾರಾಟ ಮಾಡಿದಲ್ಲಿ ಉತ್ತಮ ಆದಾಯಗಳಿಸಬಹುದು ಎಂದರು.

ಕೃಷಿ ತಂತ್ರಜ್ಞ ಡಾ. ವಸಂತಕುಮಾರ್ ತಿಮಕಾಪುರ ಮಾತನಾಡಿ, ಜ್ಞಾನವನ್ನು ಸಂಪಾದಿಸಿಕೊಂಡು ವೈಜ್ಞಾನಿಕವಾಗಿ ಕೃಷಿ ಕೈಗೊಂಡಲ್ಲಿ ಬೆಳೆ ನಷ್ಟವಾಗದಂತೆ ಕಾಪಾಡಿಕೊಳ್ಳಬಹುದಾಗಿದೆ. ಹಾಗೂ ತಂಬಾಕು ಬೆಳೆಯ ಕೀಟ ಮತ್ತು ರೋಗಗಳ ಲಕ್ಷಣಗಳು ಹಾಗೂ ನಿರ್ವಹಣಾ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಪಿರಿಯಾಪಟ್ಟಣ ತಾಲೂಕಿನ ಸಹಾಯಕ ತೋಟಗಾರಿಕಾ ಅಧಿಕಾರಿ ಕರೀಗೌಡ ಮಾತನಾಡಿ, ತಂಬಾಕು ಬೆಳೆಗೆ ಪರ್ಯಾಯ ಬೆಳೆಯಾಗಿ ತೆಂಗು, ಅಡಿಕೆ, ಬಾಳೆ ಮತ್ತು ಹಣ್ಣಿನ ಗಿಡಗಳನ್ನು ಬೆಳೆಯಬಹುದಾಗಿದೆ ಎಂದರು.

ಚಿಕ್ಕಮಳಲಿ ಗ್ರಾಮದ ಪ್ರಗತಿಪರ ರೈತ ಮಹದೇವ ಮಾತನಾಡಿ, ತಮ್ಮ ಜಮೀನಿನಲ್ಲಿ ಒಂದೇ ಬೆಳೆ ಬೆಳೆಯದೆ ಹಲವು ರೀತಿಯ ಬೇರೆ ಬೇರೆ ಎತ್ತರ ಇರುವ ಮರಗಿಡ, ಹಣ್ಣಿನ ಬೆಳೆಗಳು ಮತ್ತು ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದು ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸಿಕೊಂಡಿರುತ್ತೇನೆ ಎಂದು ಅನುಭವ ಹಂಚಿಕೊಂಡರು.

ಪಶುವೈದ್ಯಾಧಿಕಾರಿ ಡಾ. ಸಂದೇಶ್, ಸಹಾಯಕ ಕೃಷಿ ನಿರ್ದೇಶಕಿ ಎಸ್.ಬಿ. ಮಮತಾ, ಬೆಟ್ಟದಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನವ್ಯ ಇದ್ದರು.