ತಂಬಾಕು ಸೇವನೆ: ವರ್ಷಕ್ಕೆ 1.35ಮಿಲಿಯನ್ ಜನರು ಸಾವು

| Published : Nov 07 2024, 11:56 PM IST

ಸಾರಾಂಶ

ತಂಬಾಕು ಸೇವೆಯಿಂದ ವರ್ಷಕ್ಕೆ 1.35 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ. ಮಕ್ಕಳು ಹದಿಹರೆಯದರಲ್ಲೇ ಸೇವನೆ ಮಾಡುವ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ್ ನಾಯಕ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತಂಬಾಕು ಸೇವೆಯಿಂದ ವರ್ಷಕ್ಕೆ 1.35 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ. ಮಕ್ಕಳು ಹದಿಹರೆಯದರಲ್ಲೇ ಸೇವನೆ ಮಾಡುವ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ್ ನಾಯಕ್ ಹೇಳಿದರು.

ತಂಬಾಕು ಮುಕ್ತ ಯುವ ಅಭಿಯಾನ 2.0 ಜಾಗೃತಿ ಅಂಗವಾಗಿ ನಗರದ ನೆಹರು ಕೀಡಾಂಗಣದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತದಲ್ಲಿ ತಡೆಗಟ್ಟಬಹುದಾದದ ರೋಗಗಳು ಮತ್ತು ಸಾವಿಗೆ ತಂಬಾಕು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕಳೆದ ವರ್ಷದ ತಂಬಾಕು ಮುಕ್ತ ಯುವ ಅಭಿಯಾನದ ಯಶಸ್ಸಿನ ಆಧಾರದ ಮೇಲೆ ಈ ವರ್ಷವೂ ಕೂಡ ‘ತಂಬಾಕು ಮುಕ್ತ ಯುವ ಅಭಿಯಾನ 2.0’ ಎನ್ನುವ ರಾಷ್ಟ್ರೀಯ ಅಭಿಯಾನಕ್ಕೆ ಸೆ.24 ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಚಾಲನೆ ನೀಡಿದ್ದು, ಜಿಲ್ಲೆಯಲ್ಲಿಯೂ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಒಟ್ಟು 160 ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳೆಂದು ಘೋಷಿಸಲು ಗುರಿಯನ್ನು ನಿಗದಿಪಡಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಒಟ್ಟು 20 ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳೆಂದು ಘೋಷಿಸಲು ಗುರಿ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಡಿಎಚ್‌ಒ ಡಾ. ನಟರಾಜ್ ಮಾತನಾಡಿ, ಪೊಲೀಸ್ ಇಲಾಖೆಯಿಂದ ಜಿಲ್ಲೆಯಲ್ಲಿ ಒಟ್ಟು 16 ತಂಬಾಕು ದಾಳಿಗಳನ್ನು ಹಮ್ಮಿಕೊಂಡು, ಪ್ರಕರಣಗಳನ್ನು ದಾಖಲಿಸಿ ದಂಡವನ್ನು ವಿಧಿಸಲು ಗುರಿ ನಿಗದಿಪಡಿಸಲಾಗಿದೆ. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ತಂಬಾಕು ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಜಾಥಾಗಳನ್ನು ಹಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಆರೋಗ್ಯ ಇಲಾಖೆ ವತಿಯಿಂದ ತಂಬಾಕು ಮುಕ್ತ ಯುವ ಅಭಿಯಾನ 2.0 ಅನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.ನೆಹರು ಕ್ರೀಡಾಂಗಣದಿಂದ ಹೊರಟ ಜಾಥಾ, ಗೋಪಿ ವೃತ್ತ ಮತ್ತು ಜಿಲ್ಲಾ ಪಂಚಾಯಿತಿ ರಸ್ತೆ ಮೂಲಕ ನೆಹರು ಕ್ರೀಡಾಂಗಣದಲ್ಲಿ ಸಮಾಪ್ತಿಗೊಂಡಿತು.

ಹಿರಿಯ ಸಿವಿಲ್ ನ್ಯಾಯಾಧಿಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಸಂತೋಷ್ ಎಂ.ಎಸ್, ಡಿವೈಎಸ್‌ಪಿ ಬಾಬು ಅಂಜನಪ್ಪ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜ್ ನಾಯ್ಕ್ ಡಿಎಲ್‌ಓ ಡಾ.ಕಿರಣ್, ಟಿಎಚ್‌ಒ ಡಾ.ಚಂದ್ರಶೇಖರ್, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಲಹೆಗಾರರಾದ ಹೇಮಂತರಾಜ್ ಅರಸ್, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಸುಬ್ಬಯ್ಯ ದಂತ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.