ಕನ್ನಡಪ್ರಭ ವಾರ್ತೆ ಮದ್ದೂರು
ತಂಬಾಕು ಸೇವನೆ ಮನುಷ್ಯನ ಆದಾಯದ ಬಹುಭಾಗವನ್ನು ಕಸಿದು ಇಡೀ ಕುಟುಂಬವನ್ನು ಆರ್ಥಿಕ ದಿವಾಳಿತನಕ್ಕೆ ದೂಡುತ್ತದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಿ.ಎಂ.ಪಾರ್ವತಿ ಬುಧವಾರ ಎಚ್ಚರಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಂಬಾಕು ನಿಯಂತ್ರಣ ಕೋಶ, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಸಹಯೋಗದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ವಿದ್ಯಾರ್ಥಿಗಳ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ತಂಬಾಕಿನಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಹಾನಿಕಾರಕ ರಾಸಾಯನಿಕಗಳಿದ್ದು, ಇವುಗಳಲ್ಲಿ ಅನೇಕ ವಸ್ತುಗಳು ಕ್ಯಾನ್ಸರ್ ಕಾಯಿಲೆಗಳಿಗೆ ಮಾರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಹಣದ ಆಮಿಷಕ್ಕೆ ಜನರು ಗಾಂಜಾ, ಕೊಕೇನ್, ಬ್ರೌನ್ ಶುಗರ್ ಮತ್ತು ಅಫೀಮುನಂತಹ ಮಾದಕ ವಸ್ತುಗಳನ್ನು ಬೆಳೆಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಇವುಗಳ ಸೇವನೆಯಿಂದ ಕ್ಯಾನ್ಸರ್, ಹೃದಯಘಾತ ಮತ್ತು ಶ್ವಾಸಕೋಶದ ಮೇಲೆ ದುಷ್ಪರಿಣಾಮ ಉಂಟಾಗುವುದರೊಂದಿಗೆ ಅಕಾಲಿಕ ಮರಣಕ್ಕು ಕಾರಣವಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರು ಗೆಳೆಯರ ಒತ್ತಡದಿಂದ ಮಾದಕ ವಸ್ತುಗಳ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯುವಕರುಗಳು ತಮಗೆ ಗೊತ್ತಿಲ್ಲದಂತೆ ಅಪರಾಧ ಜಗತ್ತಿಗೆ ಕಾಲಿಡುತ್ತಿದ್ದಾರೆ. ಈ ಬಗ್ಗೆ ಪೋಷಕರು ಆದಷ್ಟು ತಮ್ಮ ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ತಾಲೂಕು ಆರೋಗ್ಯ ಅಧಿಕಾರಿ ಡಾ.ರವಿಶಂಕರ್, ದಂತ ವೈದ್ಯರಾದ ಡಾ.ವೆಂಕಟೇಶ್, ಆರೋಗ್ಯ ಇಲಾಖೆಯ ಎಸ್.ಕೆ.ತಮ್ಮೇಗೌಡ, ಮರಿಸ್ವಾಮಿ, ಎಚ್.ಎಂ.ಮಣಿ, ಉಷಾ ಮತ್ತು ಸಿಬ್ಬಂದಿ, ಆಶಾ ಕಾರ್ಯಕರ್ತರು ಮತ್ತು ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಗಾಂಜಾ ಮಿಶ್ರಿತ ಸಿಗರೇಟ್ ಸೇವನೆ: ಯುವಕನಿಗೆ 10 ಸಾವಿರ ರು. ದಂಡಮದ್ದೂರು:ಗಾಂಜಾ ಮಿಶ್ರಿತ ಸಿಗರೇಟ್ ಸೇವನೆ ಮಾಡುತ್ತಿದ್ದ ಯುವಕನಿಗೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ 10 ಸಾವಿರ ರು. ದಂಡ ವಿಧಿಸಿ ಆದೇಶ ಹೊರಡಿಸಿದೆ.
ತಾಲೂಕಿನ ಚಾಪುರದೊಡ್ಡಿ ಗ್ರಾಮದ ಮಹೇಶನ ಪುತ್ರ ಸಿ.ಎಂ.ಮನೋಜ್ ಹದಿನೆಂಟುವರೆ ವರ್ಷದ ಯುವಕನಿಗೆ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಿ.ಎಂ.ಪಾರ್ವತಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಆರೋಪಿ ಮನೋಜ್ ಏಕಾಂಗಿಯಾಗಿ ಗ್ರಾಮದ ನಾಲೆ ಬಳಿ ಗಾಂಜಾ ಮಿಶ್ರಿತ ಸಿಗರೇಟ್ ಸೇವನೆ ಮಾಡುತ್ತಿದ್ದನು. ಈ ವೇಳೆ ಗಸ್ತು ಕಾರ್ಯದಲ್ಲಿ ತೊಡಗಿದ್ದ ಬೆಸಗರಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಪ್ರಕಾಶ್ ಆತನನ್ನು ಹಿಡಿದು ಪ್ರಶ್ನಿಸಲು ಹೋದಾಗ ಮನೋಜ್ ಸಿಗರೇಟನ್ನು ನಾಲೆಗೆ ಎಸೆದು ಪರಾರಿ ಯಾಗುತ್ತಿದ್ದಾಗ ಸಿಗರೇಟ್ ಸಮೇತ ಹಿಡಿದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿದೆ.ಮನೋಜ್ ವಿರುದ್ಧ ರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಕಾಯ್ದೆ ಅಡಿ ಪ್ರಕರಣದಾಖಲಿಸಿದ ನಂತರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ನಂತರ ನ್ಯಾಯಾಧೀಶರು ವಿಚಾರಣೆ ನಡೆಸಿ ದಂಡ ವಿಧಿಸಿದ್ದಾರೆ.