ಸಾರಾಂಶ
ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ 200ನೇ ವಿಜಯೋತ್ಸವದ 2ನೇ ದಿನವಾದ ಗುರುವಾರ ಜನಾಕರ್ಷಣಿಯ ವಿವಿಧ ವೇದಿಕೆ ಕಾರ್ಯಕ್ರಮಗಳ ಜೊತೆ ಜೊತೆಗೆ ಕ್ರೀಡಾ ಚಟುವಟಿಗಳು ನಡೆಯಲಿವೆ.
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ 200ನೇ ವಿಜಯೋತ್ಸವದ 2ನೇ ದಿನವಾದ ಗುರುವಾರ ಜನಾಕರ್ಷಣಿಯ ವಿವಿಧ ವೇದಿಕೆ ಕಾರ್ಯಕ್ರಮಗಳ ಜೊತೆ ಜೊತೆಗೆ ಕ್ರೀಡಾ ಚಟುವಟಿಗಳು ನಡೆಯಲಿವೆ.ಬೆಳಗ್ಗೆ 10 ಕ್ಕೆ ಚನ್ನಮ್ಮಾಜಿ ವೇದಿಕೆಯಲ್ಲಿ ಕಿತ್ತೂರು ರಾಣಿ ಸಂಸ್ಥಾನದ ಕುರಿತು ರಾಜ್ಯ ಮಟ್ಟದ ಮಹಿಳಾ ವಿಚಾರ ಗೋಷ್ಠಿ ನಡೆಯಲಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಲಿದ್ದಾರೆ. ಲೋಕಸಭಾ ಸದಸ್ಯೆ ಪ್ರಿಯಾಂಕ ಜಾರಕಿಹೊಳಿ ಈ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಭಾಗವಹಿಸಲಿದ್ದಾರೆ.ರಾಯಚೂರಿನ ಲೋಕಾಯುಕ್ತ ಎಸ್ಪಿ ಪಿ.ವಿ.ಸ್ನೇಹಾ ಆಶಯ ನುಡಿಗಳನ್ನಾಡಲಿದ್ದಾರೆ. ಸಂಪದಾ ಕೇರಿಮನಿ ಅವರು ಕಿತ್ತೂರು ರಾಣಿ ಚನ್ನಮ್ಮಳ ಹೋರಾಟದಿಂದ ಯುವ ಪೀಳಿಗೆಯ ಮೇಲೆ ಪರಿಣಾಮಗಳು, ಅಮೃತಾ ಶೆಟ್ಟಿಯವರು 200ನೇ ವಿಜಯೋತ್ಸವದ ಪೂರ್ವದಲ್ಲಿ ಚನ್ನಮ್ಮನ ಕುರಿತು ಬಂದಿರುವ ಸಾಹಿತ್ಯ, ಕವಿತಾ ಕುಸುಗಲ್ಲ ಅವರಿಂದ ಕಿತ್ತೂರು ಹಾಗೂ ಸಮಕಾಲಿನ ಪ್ರಭುತ್ವಗಳ ಸಂಬಂಧಗಳು ಸವಿತಾ ದೇಶಮುಖ ಅವರಿಂದ ಕಿತ್ತೂರು ಅಂದು - ಇಂದು, ಸರಸ್ವತಿ ಭಗವತಿಯವರಿಂದ ಕಿತ್ತೂರು 200 ರ ಸಂಭ್ರಮಾಚರಣೆಯ ಕುರಿತು ಗೋಷ್ಠಿ ನೀಡಲಿದ್ದಾರೆ.ಬೆಳಗ್ಗೆ 10 ಕ್ಕೆ ಕಲ್ಮಠದ ಶಾಲೆ ಮೈದಾನದಲ್ಲಿ ಕಬಡ್ಡಿ, ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಕ್ರೀಡೆಗಳು ನಡೆಯಲಿವೆ. ಮಧ್ಯಾಹ್ನ 3 ರಿಂದ ಮುಖ್ಯ ವೇದಿಕೆಯಾಗಿರುವ ಚನ್ನಮ್ಮಾಜಿಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ. ಸಂಜೆ 7.30ಕ್ಕೆ ಪ್ರವೀಣ ಗೋಡ್ಕಿಂಡಿಯವರಿಂದ ಕೊಳಲು ವಾದನ ನಡೆಯಲಿದೆ. ರಾತ್ರಿ 9.30ಕ್ಕೆ ವಿಜಯ ಪ್ರಕಾಶ ಅವರ ಕಾರ್ಯಕ್ರಮ ನಡೆಯಲಿದೆ.
2ನೇ ವೇದಿಕೆಯಾದ ಸರ್ದಾರ ಗುರುಶಿದ್ದಪ್ಪ ವೇದಿಕೆಯಲ್ಲಿ ಮಧ್ಯಾಹ್ನ 3 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಭಜನೆ, ಕ್ಲಾರಿಯೋನಿಟ್, ನೃತ್ಯ ರೂಪಕ, ಭರತ ನಾಟ್ಯ, ಭಕ್ತಿ ಗೀತೆಗಳು, ಶ್ರೀಕೃಷ್ಣ ಪಾರಿಜಾತ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಜರುಗಲಿವೆ.