ಇಂದು ಬಿಜೆಪಿಯಿಂದ ಕಲಬುರಗಿ ಚಲೋ, ಪ್ರಿಯಾಂಕ್‌ ಹಟಾವೋ ಹೋರಾಟ

| Published : May 24 2025, 12:34 AM IST / Updated: May 24 2025, 12:35 AM IST

ಇಂದು ಬಿಜೆಪಿಯಿಂದ ಕಲಬುರಗಿ ಚಲೋ, ಪ್ರಿಯಾಂಕ್‌ ಹಟಾವೋ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

Today, BJP is campaigning for Kalaburagi Chalo, Priyank Hatao.

-ಖರ್ಗೆ ಕೋಟೆಗಿಂದು ಬಿಜೆಪಿ ಮುಖಂಡರ ಲಗ್ಗೆ । ಡಿಸಿ ಕಚೇರಿ ಮುಂದೆ ಪ್ರತಿಭಟನೆ । ಸಚಿವ ಸ್ಥಾನದಿಂದ ಪ್ರಿಯಾಂಕ್‌ ಕಿತ್ತೆಸೆಯೋವರೆಗೂ ಹೋರಾಟ ಸಂಕಲ್ಪ

------

ಕನ್ನಡಪ್ರಭ ವಾರ್ತೆ ಕಲಬುರಗಿ

ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಗೆ ಜಿಲ್ಲೆಯ ಚಿತ್ತಾಪುರದ ಗೆಸ್ಟ್‌ಹೌಸ್‌ನಲ್ಲೇ 5 ಗಂಟೆ ಕೂಡಿಹಾಕಿದ ಸಚಿವ ಪ್ರಿಯಾಂಕ್‌ ಖರ್ಗೆ ಬೆಂಬಲಿಗರು, ಕಾಂಗ್ರೆಸ್‌ ಕಾರ್ಯಕರ್ತರ ವರ್ತನೆಯಿಂದ ಕೆರಳಿರುವ ರಾಜ್ಯ ಬಿಜೆಪಿ ಮುಖಂಡರು ಖರ್ಗೆ ಹಟಾವೋ ಕರೆ ನೀಡೋದರೊಂದಿಗೆ ಮೇ 24ರ ಕಲಬುರಗಿ ಚಲೋಗೆ ಮುಂದಾಗಿದ್ದಾರೆ.

ಈಗಾಗಲೇ ಚಿತ್ತಾಪುರ ವಿದ್ಯಮಾನದ ಕುರಿತಂತೆ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಕಛೇರಿ ಮುಂದೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ.

ಸಿಎಂ ಗೆ ಪ್ರಜಾಪ್ರಭುತ್ವ ಸಂವಿಧಾನದ ಬಗ್ಗೆ ನಂಬಿಕೆ ಇದ್ರೆ, ಪ್ರತಿಪಕ್ಷ ನಾಯಕರು ಬೇಕು ಎನ್ನುವುದು ಇದ್ದರೆ ಸರ್ವಾಧಿಕಾರದ ಪೆಡಂಭೂತ ಪ್ರಿಯಾಂಕ್ ಖರ್ಗೆರನ್ನು ಸಂಪುಟದಿಂದ ಕೈ ಬಿಡಿ. ಪ್ರೀಯಾಂಕ್ ಖರ್ಗೆರನ್ನು ಕೂಡಲೇ ಸಿಎಂ ಸಂಪುಟದಿಂದ ಕೈ ಬಿಡಬೇಕು ಎಂದೂ ಬಿಜೆಪಿ ಆಗ್ರಹಿಸಿದೆ.

ಕಲಬುರಗಿ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡಿ ಅವರನ್ನು ಸಸ್ಪೆಂಡ್ ಮಾಡಬೇಕು, ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಬಿಜೆಪಿ ಖರ್ಗೆ ತವರು ಜಿಲ್ಲೆ ಕಲಬುರಗಿಯಿಂದಲೇ ಬಿಜೆಪಿ ರಾಜ್ಯಮಟ್ಟದ ಹೋರಾಟಕ್ಕೆ ಮುಂದಾಗಿದೆ.

ಪ್ರಿಯಾಂಕ್‌ರನ್ನ ಸಚಿವ ಸ್ಥಾನದಿಂದ ಕೈಬಿಡೋವರೆಗೂ ಹೋರಾಟ ರಾಜ್ಯ ಮಟ್ಟದಲ್ಲಿ ನಡೆಯಲಿದೆ ಎಂದು ಬಿಜೆಪಿ ಮುಖಂಡ, ಮೇಲ್ಮನೆಯಲ್ಲಿ ಬಿಜೆಪಿಯ ಮುಖ್ಯ ಸಚೇತಕ ಎನ್‌. ರವಿ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಕಾನೂನು- ಸುವ್ಯವಸ್ಥೆ ಕುಸಿದಿದೆ, ಜಿಲ್ಲಾಡಳಿತ, ಪೊಲೀಸ್‌ನವರು ಪ್ರಿಯಾಂಕ್‌ ಕೈಗೊಂಬೆಯಾಗಿದ್ದಾರೆಂದು ದೂರಿದರು

------

...ಬಾಕ್ಸ್‌...

ಕಲಬುರಗಿ ಅಂದ್ರೆ ಪ್ರಿಯಾಂಕ್‌ ಸಾಮ್ರಾಜ್ಯವೆ?

ಕಾಂಗ್ರೆಸ್ಸಿಗರು, ಖರ್ಗೆ ಬೆಂಬಲಿಗರು ಸೇರಿಕೊಂಡು 5 ಗಂಟೆಗೂ ಅಧಿಕ ಕಾಲ ವಿಪಕ್ಷ ನಾಯಕನಿಗೆ ಘೇರಾವ್‌ ಹಾಕಿ ಸರ್ಕಾರಿ ಗೆಸ್ಟ್‌ಹೌಸ್‌ನಲ್ಲೇ ಕೂಡಿ ಹಾಕುತ್ತಾರೆಂದರೆ ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೋ? ಕಲಬುರಗಿ ಅಂದ್ರೆ ಪ್ರಿಯಾಂಕ್‌ ಸಾಮ್ರಾಜ್ಯವೇ? ಇಲ್ಲಿ ಯಾರೂ ಬರಬಾರದೆ? ಪ್ರಶ್ನೆ ಮಾಡಬಾರದೆ? ಕಾನೂನು- ಸುವ್ಯವಸ್ಥೆ ಇದೆಯೋ? ಎಂಬ ಅನುಮಾನ ಕಾಡುತ್ತಿವೆ. ಇದಕ್ಕೆಲ್ಲ ಪ್ರಿಯಾಂಕ್‌ ಖರ್ಗೆ ಸರ್ವಾಧಿಕಾರಿ ಧೋರಣೆ ಕಾರಣ ಎಂದು ರವಿಕುಮಾರ್‌ ಗುಡುಗಿದರು.

ಚಿತ್ತಾಪುರಕ್ಕೆ ಯಾರೂ ಬರಬಾರದೆ? ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬಂದ ನಾರಾಯಣಸ್ವಾಮಿಯವರಿಗೆ ನಿಂದಿಸಿದರೆಂದು ಘೇರಾವ್‌ ಹಾಕಿ 5 ಗಂಟೆ ಕೂಡಿ ಹಾಕುತ್ತಾರೆ. ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳದಂತೆ ತಡೆಯಲಾಗಿದೆ. ಸಂವಿಧಾನಾತ್ಮಕ ಹುದ್ದೆಗೆ ಅಗೌರವ ತೋರಿದಂತಾಗಿದೆ.

ಇದನ್ನೆಲ್ಲ ನೋಡುತ್ತ ಮೂಖ ಪ್ರೇಕ್ಷಕರಂತಿದ್ದ ಪೊಲೀಸ್‌ ಅಧಿಕಾರಿಗಳಾದ ಎಎಸ್ಪಿ ಮಹೇಶ ಮೇಘಣ್ಣನವರ್‌, ಡಿವೈಎಸ್ಪಿ ಶಂಕರಗೌಡ ಪಾಟೀಲ್‌, ಸಿಪಿಐ ಚಂದ್ರಶೇಖರ ತಿಗಡಿ ಇವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿದ ರವಿಕುಮಾರ್‌ ಕಲಬುರಗಿ ನಗರ ಜಿಲ್ಲೆಯ ಪೊಲೀಸ್‌ ಪಡೆ ಸಚಿವ ಖರ್ಗೆ ಕಾಲಾಳುಗಳಂತೆ ವರ್ತಿಸಿದ್ದಾರೆಂದು ದೂರಿದರು.

----------

ಪ್ರಿಯಾಂಕ್‌ ಖರ್ಗೆ ಸರ್ವಾಧಿಕಾರಿ ಧೋರಣೆ

ಕಲಬುರಗಿಯಲ್ಲಿ ಸರ್ವಾಧಿಕಾರಿಯಂತೆ ಪ್ರಿಯಾಂಕ್‌ ಮೆರೆಯುತ್ತಿದ್ದಾರೆ. ಎಲ್ಲವೂ ತಮ್ಮ ಅಣತಿಯಂತೆಯೇ ನಡೆಯಬೇಕೆಂಬ ಅವರ ದುಂಡಾವರ್ತನೆ ಸಹಿಸಲಾಗದು. ನಾರಾಯಣಸ್ವಾಮಿ ದಲಿತ ಸಮುದಾಯದ ಮುಖಂಡರಾದರೂ ಅವರಿಗೆ ಈ ರೀತಿ ಅಪಮಾನ ಮಾಡಿದ್ದಾರೆ.

ಸಚಿವ ಖರ್ಗೆಗೆ ನಾಯಿಗೆ ಹೋಲಿಸಿ ಹೇಳಿಕೆ ನೀಡಿದ್ದಾರೆಂದು ಕಾಂಗ್ರೆಸ್‌ ಕಾರ್ಯಕರ್ತರು ಸೇರಿಕೊಂಡು ಛಲವಾದಿಯವರ ಕಾರ್‌ಗೆ ಬಣ್ಣ ಬಳಿದರು, ಹೋರಾಟ ಮಾಡುತ್ತ ಕೂಡಿ ಹಾಕಿದ್ದಾರೆ. ಪ್ರಿಯಾಂಕ್‌ ಖರ್ಗೆ, ಅವರ ತಂದೆ ಡಾ. ಖರ್ಗೆ ಇವರಿಬ್ಬರೂ ಪ್ರಧಾನಿ ಮೋದಿ ಸೇರಿದಂತೆ ಮುಖಂಡರನೇಕರಿಗೆ ನಿಂದಿಸಿದ್ದಾರೆ, ರಾಜಕೀಯದಲ್ಲಿ ನಿಂದನೆ ಇದ್ದದ್ದೆ. ಹಾಗಂತ ಕಾನೂನು ಕೈಯಲ್ಲಿ ತೆಗೆದುಕೊಳ್ಳೋದು ಯಾರಿಗೂ ಶೋಭೆ ತಾರದು ಎಂದರು.

ಬಿಜೆಪಿ ಮುಖಂಡರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ್‌, ಶಶಿಲ್‌ ನಮೋಶಿ, ಬಿಜಿ ಪಾಟೀಲ್‌, ಅಶೋಕ ಬಗಲಿ, ಚಂದು ಪಾಟೀಲ್‌, ಮಾಜಿ ಶಾಸಕರಾದ ರಾಜಕುಮಾರ್‌ ತೇಲ್ಕೂರ್‌, ದತ್ತಾತ್ರೇಯ ಪಾಟೀಲ್‌ ರೇವೂರ್‌, ಅಮರನಾಥ ಪಾಟೀಲ್‌, ಸುಭಾಸ ಗುತ್ತೇದಾರ್‌, ಯುವ ಮುಖಂಡ ನಿತೀನ್‌ ಗುತ್ತೇದಾರ್‌ ಇದ್ದರು.

--------------

....ಕೋಟ್‌.....

ಅಂಬೇಡ್ಕರ ಹೆಸರು ಹೇಳಿಕೊಂಡು ದೇಶದೆಲ್ಲೆಡೆ ಸುತ್ತಾಡುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರದಲ್ಲಿ ಈ ಘಟನೆ ಶೋಭೆ ತರುವಂತದ್ದಲ್ಲ. ರಾಜ್ಯವೇ ತಲೆ ತಗ್ಗಿಸುವ ಘಟನೆ ನಡೆದಿದೆ. ಏನು ತಪ್ಪು ಮಾಡಿದ್ರು ನಮ್ಮ ನಾರಾಯಣಸ್ವಾಮಿ ಅವರು ? ತಿರಂಗಾ ಜಾಥಾ ಅಟೆಂಡ್ ಆಗಬಾರದು. ಭಾಷಣ ಮಾಡಬಾರದು ಅಂತ ಹೇಳಿ ಈ ಕೆಲಸ ಮಾಡಲಾಗಿದೆ. ಕಲಬುರಗಿ ಚಲೋ- ಪ್ರಿಯಾಂಕ್‌ ಹಟಾವೋ ಹೋರಾಟ ಅವರನ್ನ ಸಚಿವ ಸ್ಥಾನದಿಂದ ಕೆಳಗಿಳಿಸೋವರೆಗೂ ನಡೆಯುತ್ತದೆ.

ಎನ್‌. ರವಿಕುಮಾರ್‌, ಬಿಜೆಪಿ ಎಂಎಲ್‌ಸಿ,

ಮೇಲ್ಮನೆ ವಿರೋಧ ಪಕ್ಷ ಮುಖ್ಯ ಸಚೇತಕರು

---------------

ಫೋಟೋ- ರವಿ 1, ರವಿ 2 ಮತ್ತು ರವಿ 3

ಕಲಬುರಗಿಯಲ್ಲಿ ಗುರುವಾರ ಬಿಜೆಪಿ ಎಂಎಲ್‌ಸಿ ಎನ್‌ ರವಿಕುಮಾರ್‌ ಸುದ್ದಿಗೋಷ್ಠಿ ನಡೆಸಿದರು. ಕಲಬುರಗಿ ಜಿಲ್ಲೆಯ ಬಿಜೆಪಿ ಶಾಸಕರು, ಮುಖಂಡರು ಇದ್ದರು.