ಸಾರಾಂಶ
ಬಿ. ಶೇಖರ್ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರು
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಮೊದಲ ಅತಿಥಿಯಾದ ಗಜಪಡೆಯು ಬುಧವಾರ ಕಾಡಿನಿಂದ ಹೊರಟು ನಾಡು ಬಂದು ತಲುಪಿದೆ. ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿವೆ.ಮೊದಲ ತಂಡದಲ್ಲಿ 7 ಗಂಡು, 2 ಹೆಣ್ಣು ಸೇರಿದಂತೆ 9 ಆನೆಗಳು ಶುಕ್ರವಾರ (ಆ.23) ಮೈಸೂರು ಅರಮನೆಗೆ ಪ್ರವೇಶಿಸಲಿದ್ದು, ದಸರಾ ಆನೆಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲು ಜಿಲ್ಲಾಡಳಿತ ಮತ್ತು ಮೈಸೂರು ಅರಮನೆ ಮಂಡಳಿಯು ಸಜ್ಜಾಗಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಬುಧವಾರ ಪಯಣ ಆರಂಭಿಸಿದ ಮೊದಲ ತಂಡದ 9 ಆನೆಗಳು, ಲಾರಿಗಳ ಮೂಲಕ ಸಂಜೆಯ ಹೊತ್ತಿಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನ ಆವರಣಕ್ಕೆ ಸುರಕ್ಷಿತವಾಗಿ ಬಂದು ತಲುಪಿವೆ.ಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು, ಗೋಪಿ, ಧನಂಜಯ, ಭೀಮ, ರೋಹಿತ್, ಕಂಜನ್, ಏಕಲವ್ಯ, ವರಲಕ್ಷ್ಮಿ ಮತ್ತು ಲಕ್ಷ್ಮಿ ಆನೆಗಳು ಆಗಮಿಸಿವೆ. ಆನೆಗಳು ಪ್ರತ್ಯೇಕ ಲಾರಿಗಳ ಮೂಲಕ ಅರಣ್ಯ ಭವನಕ್ಕೆ ಬಂದು ತಲುಪಿದ್ದು, 2 ದಿನಗಳ ವಿಶ್ರಾಂತಿ ಬಳಿಕ ಆ.23 ರಂದು ಅರಣ್ಯ ಭವನದಿಂದ ಮೆರವಣಿಗೆ ಹೊರಟು ಮೈಸೂರು ಅರಮನೆ ಆವರಣಕ್ಕೆ ಸೇರಿಕೊಳ್ಳಲಿದ್ದು, ನಂತರ ಪ್ರತಿದಿನ ನಡಿಗೆ ತಾಲೀಮು ಆರಂಭಿಸಲಿವೆ.
--ದಸರಾ ಆನೆಗಳ ವಿವರ
ಫೋಟೋ- 22ಎಂವೈಎಸ್11. ಅಭಿಮನ್ಯು- 59 ವರ್ಷ, ಶರೀರದ ಎತ್ತರ- 2.74 ಮೀಟರ್, ಶರೀರದ ಉದ್ದ- 3.51 ಮೀಟರ್, ಅಂದಾಜು ತೂಕ- 4700 ರಿಂದ 5000 ಕೆ.ಜಿ., ಮತ್ತಿಗೋಡು ಆನೆ ಶಿಬಿರ, ಮಾವುತ- ವಸಂತ, ಕಾವಾಡಿ- ರಾಜು.
ಈ ಆನೆಯನ್ನು 1977 ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಕಾಡಾನೆಗಳನ್ನು ಹಿಡಿದು ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯ ಹೊಂದಿರುವುದು ಈ ಆನೆಯ ವಿಶೇಷ ಗುಣವಾಗಿದೆ. ಈ ಆನೆಯು ಸುಮಾರು 25 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿದ್ದು, 2015 ರವರೆಗೆ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿ ನಿರ್ವಹಿಸಿತ್ತು. ಈ ಹಿಂದೆ ಸುಮಾರು 150 ಕಾಡಾನೆಗಳನ್ನು, ಸುಮಾರು 50 ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಕಳೆದ 4 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಅರಮನೆ ಆವರಣದಲ್ಲಿ ಹೊತ್ತು ಯಶಸ್ವಿಯಾಗಿದ್ದು, 2024ನೇ ಸಾಲಿನ ದಸರೆಯಲ್ಲೂ ಸತತ 5ನೇ ಬಾರಿಗೆ ಅಂಬಾರಿ ಹೊರಲು ಸಜ್ಜಾಗಿದೆ. ಫೋಟೋ- 22ಎಂವೈಎಸ್22. ಗೋಪಿ- 43 ವರ್ಷ, ಶರೀರದ ಎತ್ತರ- 2.86 ಮೀಟರ್, ಶರೀರದ ಉದ್ದ- 3.42 ಮೀಟರ್, ಅಂದಾಜು ತೂಕ- 4900 ರಿಂದ 5000 ಕೆ.ಜಿ, ದುಬಾರೆ ಆನೆ ಶಿಬಿರ, ಮಾವುತ- ನವೀನ್, ಕಾವಾಡಿ- ಶಿವು.
ಈ ಆನೆಯನ್ನು 1993ರಲ್ಲಿ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ದುಬಾರೆ ಆನೆ ಶಿಬಿರದಲ್ಲಿ ಸಫಾರಿ ಕೆಲಸ ನಿರ್ವಹಿಸುತ್ತಿದೆ. 13ನೇ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿದೆ. 2015 ರಿಂದ ಅರಮನೆ ಖಾಸಗಿ ದಸರಾ ದರ್ಬಾರ್ ನಲ್ಲಿ ಪಟ್ಟಣದ ಆನೆಯಾಗಿ ಅರಮನೆ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸುತ್ತಿದೆ.ಫೋಟೋ- 22ಎಂವೈಎಸ್33. ಧನಂಜಯ- 45 ವರ್ಷ, ಶರೀರದ ಎತ್ತರ- 2.80 ಮೀಟರ್, ಶರೀರದ ಉದ್ದ- 3.84 ಮೀಟರ್, ಅಂದಾಜು ತೂಕ- 4800 ರಿಂದ 4900 ಕೆ.ಜಿ. ದುಬಾರೆ ಆನೆ ಶಿಬಿರ, ಮಾವುತ- ಭಾಸ್ಕರ್, ಕಾವಾಡಿ- ರಾಜಣ್ಣ.
ಈ ಆನೆಯನ್ನು 2013ರಲ್ಲಿ ಹಾಸನ ಜಿಲ್ಲೆಯ ಯಸಳೂರು ವಲಯ ವ್ಯಾಪ್ತಿಯಲ್ಲಿ ಸೆರೆ ಹಿಡಿಯಲಾಗಿದ್ದು, ಇದು ಬಲಿಷ್ಟವಾದ ಆನೆಯಾಗಿದೆ. ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ. ಕಳೆದ 6 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿದೆ. ಅಲ್ಲದೆ, ಅರಮನೆ ಖಾಸಗಿ ದಸರಾ ದರ್ಬಾರ್ ನಲ್ಲಿ ಪಟ್ಟಣದ ಆನೆಯಾಗಿ ಪಾಲ್ಗೊಳ್ಳುತ್ತಿದೆ.ಫೋಟೋ- 22ಎಂವೈಎಸ್4
4. ಭೀಮ- 24 ವರ್ಷ, ಶರೀರದ ಎತ್ತರ- 2.85 ಮೀಟರ್, ಶರೀರದ ಉದ್ದ- 3.05 ಮೀಟರ್, ಅಂದಾಜು ತೂಕ- 4300 ರಿಂದ 4500 ಕೆ.ಜಿ., ಮತ್ತಿಗೊಡು ಆನೆ ಶಿಬಿರ, ಮಾವುತ- ಗುಂಡ, ಕಾವಾಡಿ- ನಂಜುಂಡಸ್ವಾಮಿ.2000ನೇ ಸಾಲಿನಲ್ಲಿ ಚೌಕೂರು ವಲಯದ ಭೀಮನಕಟ್ಟೆಯ ಬಳಿ ಅನಾಥವಾಗಿದ್ದ ಪತ್ತೆಯಾದ ಆನೆ ಮರಿ. ಈ ಆನೆಯು ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ. 2017ರಲ್ಲಿ ದಸರಾ ಸಾಲಾನೆಯಾಗಿ, 2022ನೇ ಸಾಲಿನಲ್ಲಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದು, ಪಟ್ಟದ ಆನೆಯಾಗಿಯೂ ಪಾಲ್ಗೊಂಡಿದ್ದೆ. ಈಗ 4ನೇ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿದೆ.ಫೋಟೋ- 22ಎಂವೈಎಸ್5
5. ರೋಹಿತ್- 22 ವರ್ಷ, ಶರೀರದ ಎತ್ತರ- 2.70 ಮೀಟರ್, ಅಂದಾಜು ತೂಕ- 3000 ರಿಂದ 3200 ಕೆ.ಜಿ., ರಾಮಪುರ ಆನೆ ಶಿಬಿರ. ಮಾವುತ- ಸೈಯದ್ ಉಸ್ಮಾನ್, ಕಾವಾಡಿ- ಮಾದು.ಈ ಆನೆಯು 2001ರಲ್ಲಿ ಹೆಡಿಯಾಲ ಅರಣ್ಯ ಪ್ರದೇಶದಲ್ಲಿ 6 ತಿಂಗಳ ಮರಿಯಾಗಿದ್ದಾಗ ಸಿಕ್ಕಿರುತ್ತದೆ. ಪ್ರಸ್ತುತ ಆರೋಗ್ಯವಾಗಿದೆ. 2019ರಲ್ಲಿ ರೋಹಿತ್ ಹೆಚ್ಚುವರಿ ಆನೆಯಾಗಿ ಆಯ್ಕೆಯಾಗಿದ್ದು, ಎರಡನೇ ತಂಡದಲ್ಲಿ ಆಗಮಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಅವಕಾಶ ವಂಚಿತವಾಗಿ ಆನೆ ಶಿಬಿರದಲ್ಲಿ ಉಳಿದುಕೊಂಡಿತ್ತು. 4 ವರ್ಷಗಳ ನಂತರ 2023ನೇ ದಸರೆಯಲ್ಲಿ ಭಾಗವಹಿಸಿದ್ದು, ಈಗ 2ನೇ ಬಾರಿಗೆ ದಸರೆಯಲ್ಲಿ ಪಾಲ್ಗೊಳ್ಳುತ್ತಿದೆ.ಫೋಟೋ- 22ಎಂವೈಎಸ್6
6. ಕಂಜನ್- 25 ವರ್ಷ, ಶರೀರದ ಎತ್ತರ- 2.62 ಮೀಟರ್, ಅಂದಾಜು ತೂಕ- 4000 ದಿಂದ 4200 ಕೆ.ಜಿ., ದುಬಾರೆ ಆನೆ ಶಿಬಿರ, ಮಾವುತ- ವಿಜಯ, ಕಾವಾಡಿ- ಕಿರಣ.ಹಾಸನದ ಆಲೂರು ಸೇರಿದಂತೆ ವಿವಿಧೆಡೆ ಉಪಟಳ ನೀಡುತ್ತಿದ್ದ ಕೆಲವು ಆನೆಗಳಲ್ಲಿ ಕಂಜನ್ ಸಹ ಒಂದಾಗಿದ್ದು, 2014ರಲ್ಲಿ ಈ ಆನೆಯನ್ನು ಹಾಸನ ಜಿಲ್ಲೆಯ ಯಸಳೂರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. 14- 15ನೇ ವಯಸ್ಸಿಗೆ ಪುಂಡಾಟಿಕೆ ಮೆರೆಯುತ್ತಿದ್ದ ಗಂಡಾನೆಯನ್ನು ಸೆರೆ ಹಿಡಿದು ದುಬಾರೆ ಕ್ಯಾಂಪ್‌ನಲ್ಲಿಟ್ಟು ಪಳಗಿಸಲಾಗಿದೆ. ಎರಡೇ ವರ್ಷದಲ್ಲಿ ಮಾವುತ, ಕಾವಾಡಿಗಳ ಹಿಡಿತಕ್ಕೆ ಬಂದ ಕಂಜನ್, ಈಗಾಗಲೇ ಕಾಡಾನೆ ಸೆರೆ ಹಾಗೂ ನಾಡಿಗೆ ಬಂದ ಕಾಡಾನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಹಾಗೂ ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಭಾಗವಹಿಸಿರುವ ಅನುಭವ ಹೊಂದಿದೆ. ಪಟಾಕಿ ಶಬ್ದ ಹಾಗೂ ವಾಹನಗಳ ಶಬ್ದಕ್ಕೆ ಹೊಂದಿಕೊಂಡಿದೆ. ಕಳೆದ ಸಲ ಮೊದಲ ಬಾರಿಗೆ ದಸರೆಗೆ ಆಗಮಿಸಿದ್ದ ಈ ಆನೆಯು, 2ನೇ ಬಾರಿಗೆ ದಸರೆಗೆ ಆಗಮಿಸಿದೆ.ಫೋಟೋ- 22ಎಂವೈಎಸ್7
7. ಏಕಲವ್ಯ- 39 ವರ್ಷ, ಶರೀರದ ಎತ್ತರ- 2.88 ಮೀಟರ್, ಅಂದಾಜು ತೂಕ- 40೦೦ ದಿಂದ 4200 ಕೆ.ಜಿ., ಮತ್ತಿಗೋಡು ಆನೆ ಶಿಬಿರ, ಮಾವುತ- ಸೃಜನ್, ಕಾವಾಡಿ- ಇದಾಯತ್.ಈ ಆನೆಯನ್ನು 2022ರಲ್ಲಿ ಮೂಡಿಗೆರೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ವಾಹನ ಹಾಗೂ ಪಟಾಕಿಗಳ ಶಬ್ದಗಳಿಗೆ ಹೆದರುವುದಿಲ್ಲ. ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.ಫೋಟೋ- 22ಎಂವೈಎಸ್8
8. ವರಲಕ್ಷ್ಮಿ- 68 ವರ್ಷ, ಶರೀರದ ಎತ್ತರ- 2.36 ಮೀಟರ್, ಶರೀರದ ಉದ್ದ- 3.34 ಮೀಟರ್, ಅಂದಾಜು ತೂಕ- 3300 ರಿಂದ 3500 ಕೆ.ಜಿ., ಭೀಮನಕಟ್ಟೆ ಆನೆ ಶಿಬಿರ, ಮಾವುತ- ರವಿ, ಕಾವಾಡಿ- ಲವ.ಈ ಆನೆಯು ತುಂಬಾ ಸಾಧು ಸ್ವಭಾವದಾಗಿದ್ದು, ಇದನ್ನು 1977 ರಲ್ಲಿ ಕಾಕನಕೋಟೆಯಲ್ಲಿ ಸೆರೆ ಹಿಡಿಯಲಾಗಿದೆ. 9 ಬಾರಿ ಅಂಬಾರಿ ಆನೆಯ ಜೊತೆ ಕುಮ್ಕಿ ಆನೆಯಾಗಿ ದಸರೆಯಲ್ಲಿ ಭಾಗವಹಿಸುತ್ತಿದೆ. ಈ ಆನೆಯು 13ನೇ ಬಾರಿ ದಸರೆಯಲ್ಲಿ ಪಾಲ್ಗೊಳ್ಳುತ್ತಿದೆ.ಫೋಟೋ- 22ಎಂವೈಎಸ್9
9. ಲಕ್ಷ್ಮಿ- 23 ವರ್ಷ, ಶರೀರದ ಎತ್ತರ- 2.32 ಮೀಟರ್, ಶರೀರದ ಉದ್ದ- 2.60 ಮೀಟರ್, ಅಂದಾಜು ತೂಕ- 2400 ರಿಂದ 2500 ಕೆ.ಜಿ., ರಾಮಪುರ ಆನೆ ಶಿಬಿರ. ಮಾವುತ- ಚಂದ್ರ, ಕಾವಾಡಿ- ಕೃಷ್ಣಮೂರ್ತಿ.ಈ ಆನೆಯು ತಾಯಿಯಿಂದ ಬೇರ್ಪಟ್ಟು 2002ನೇ ಸಾಲಿನಲ್ಲಿ ದೊರಕಿದ್ದು, ಅರಣ್ಯ ಇಲಾಖೆಯ ಆನೆ ಶಿಬಿರದಲ್ಲಿ ಆರೈಕೆ ಮಾಡಲಾಗಿದೆ. ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ. 4ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.