ಹಳಿಯಾಳ: ಇಂದು ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಚುನಾವಣೆ

| Published : Jul 07 2024, 01:25 AM IST

ಹಳಿಯಾಳ: ಇಂದು ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹಳಿಯಾಳ ತಾಲೂಕು ಸರ್ಕಾರಿ ಹಾಗೂ ಅನುದಾನಿತ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸ್ಥಾನಗಳಿಗೆ ಜು. 7ರಂದು ಚುನಾವಣೆ ನಡೆಯಲಿದೆ. ಸತೀಶ ನಾಯಕ ಬಾವಿಕೇರಿ ಹಾಗೂ ಪ್ರಶಾಂತ ನಾಯಕ ಬಣಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಹಳಿಯಾಳ: ಜಿದ್ದಾಜಿದ್ದಿನ ಹಾಗೂ ಈರ್ಷೆ ರಾಜಕಾರಣಕ್ಕೆ ಹೆಸರುವಾಸಿಯಾದ ಹಳಿಯಾಳ ಕ್ಷೇತ್ರದಲ್ಲಿ ಭಾನುವಾರ ಹಳಿಯಾಳ ತಾಲೂಕು ಸರ್ಕಾರಿ ಹಾಗೂ ಅನುದಾನಿತ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸ್ಥಾನಗಳಿಗೆ ಜು. 7ರಂದು ಚುನಾವಣೆ ನಡೆಯಲಿದ್ದು, ರಾಜಕೀಯ ಚುನಾವಣೆಯನ್ನು ಮೀರಿಸುವಷ್ಟರ ಮಟ್ಟಿಗೆ ತುರುಸು ಕಂಡುಬರುತ್ತಿದೆ.

ಸ್ಪರ್ಧೆಯಲ್ಲಿ ಶಿಕ್ಷಕರ ಎರಡೂ ಗುಂಪುಗಳಿವೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ ಬಾವಿಕೇರಿ ಬೆಂಬಲಿಗರ ಒಂದು ಗುಂಪು ಕಣದಲ್ಲಿದ್ದರೆ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ ನಾಯಕ ಬೆಂಬಲಿತರ "ನಮ್ಮ ಸೊಸೈಟಿ ನಮ್ಮ ಹಕ್ಕು " ಎಂಬ ಗುಂಪು ತೀವ್ರ ಪೈಪೋಟಿ ನೀಡಿದೆ.

13 ಸ್ಥಾನಕ್ಕೆ ಚುನಾವಣೆ: ನಿರ್ದೇಶಕ ಮಂಡಳಿಯಲ್ಲಿ 13 ಸ್ಥಾನಗಳಿದ್ದು, ಇದರಲ್ಲಿ ಎಸ್.ಟಿ. ಸ್ಥಾನಕ್ಕೆ ಸತೀಶ್ ನಾಯಕ ಬಣದ ಜಯಪ್ಪ ಎಚ್.ಟಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ ಪರಿಶಿಷ್ಟ ಜಾತಿ 1, ಹಿಂದುಳಿದ ವರ್ಗ "ಅ " 1, ಹಿಂದುಳಿದ ವರ್ಗ "ಬ "1, ಮಹಿಳಾ 2 ಸೇರಿ ಸಾಮಾನ್ಯ 7 ಸೇರಿ ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಆರ್‌ಸಿ ಸಭಾಭವನದಲ್ಲಿ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ತದನಂತರ ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆಯಾಗಲಿದೆ.

ದಶಕಗಳ ಸಂಘ: 2014ರಲ್ಲಿ ಸ್ಥಾಪನೆಗೊಂಡ ಹಳಿಯಾಳ ತಾಲೂಕು ಸರ್ಕಾರಿ ಹಾಗೂ ಅನುದಾನಿತ ಶಾಲಾ ನೌಕರರ ಪತ್ತಿನ ಸಹಕಾರ ಸಂಘವು ಕಳೆದ ಹತ್ತು ವರ್ಷಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದೆ. ಪರಿಣಾಮ ಎರಡೂ ಬಾರಿ ಜಿಲ್ಲಾ ಸಹಕಾರಿ ಸಂಘದಿಂದ ಅತ್ಯುತ್ತಮ ಪತ್ತಿನ ಸಹಕಾರಿ ಸಂಘವೆಂಬ ಪ್ರಶಸ್ತಿಗೂ ಭಾಜನವಾಗಿದೆ. ಸಂಘವು ₹7 ಕೋಟಿಯಷ್ಟು ವಹಿವಾಟು ನಡೆಸುತ್ತಿದೆ. ಸಂಘವು 440 ಷೇರುದಾರರನ್ನು ಹೊಂದಿದೆ. ಇದರಲ್ಲಿ ಈ ಬಾರಿ ಸಹಕಾರಿ ನಿಯಮಾವಳಿಯಂತೆ ಚುನಾವಣೆಗೆ ಕೇವಲ 133 ಷೇರುದಾರರು ಮಾತ್ರ ಮತದಾನದ ಹಕ್ಕನ್ನು ಪಡೆದಿದ್ದಾರೆ.

ಸತೀಶ್ ಬಣ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ನಾಯಕ ಚುನಾವಣೆಗೆ ಸ್ಪರ್ಧಿಸದಿದ್ದರೂ ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸಿದ್ದಾರೆ. ಸತೀಶ್ ಬಣದಲ್ಲಿ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷ ಉದಯ ನಾಯಕ, ಕಲಗೌಡ ಪಾಟೀಲ, ಗಣಪತಿ ನಾಯ್ಕ, ಬಸವರಾಜ ಇಟಗಿ, ಬಸ್ತ್ಯಾಂವ ಡಿಸೋಜ, ರಾಮಲಿಂಗಪ್ಪ ಗಾನಗಿ, ವೆಂಕಟೇಶ ನಾಯಕ, ಪ್ರವೀಣಾ ಪಾಠಣಕರ, ಬೇಬಿ ಬೊರಕರ, ಬಾಬು ಪವಾರ, ಮಂಜುನಾಥ ಗುನಗಾ, ಅಶೋಕ ಚವಲಗಿ ಕಣದಲ್ಲಿದ್ದಾರೆ.

ಪ್ರಶಾಂತ ಬಣ: ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿರುವ ಪ್ರಶಾಂತ ನಾಯಕ ಚುನಾವಣೆಗೆ ಸ್ಪರ್ಧಿಸಿದ್ದು, ಅವರೊಂದಿಗೆ ಕೃಷ್ಣ ಘಾಟೆ, ಗಣಪತಿ ಕೇಳೋಜಿ, ಗೋಪಾಲ ತೊರ್ಲೆಕರ, ರಮೇಶ ಪಾಟೀಲ, ವಿಠ್ಠಲ ಜುಂಜವಾಡಕರ, ಶಿವರಾಯ ಕಟ್ಟಿಮನಿ, ಶೇಕಸಾಬ್‌ ಹವಾಲ್ದಾರ, ವನಶ್ರೀ ಶಿಂಧೆ, ಸುಶೀಲಾ ಪಾಟೀಲ, ಡಾರ್ವಿನ್ ಮಸ್ಕರೆನ್ಸ್, ರವಿ ಲಮಾಣಿ ಕಣದಲ್ಲಿದ್ದಾರೆ.

ಎರಡೂ ಬಣದಲ್ಲಿ ಬಾರಿ ತುರುಸಿನ ಪ್ರಚಾರ ನಡೆದಿದೆ. ನಾನು ಶಿಕ್ಷಕರ ಸಂಘದ ಅಧ್ಯಕ್ಷನಾಗಿ ಸಲ್ಲಿಸಿದ ಸೇವೆಯು ಶಿಕ್ಷಕರ ಮುಂದಿದೆ. ಮೇಲಾಗಿ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷ ಉದಯ ನಾಯಕ ಅವರು ಸಂಘದ ಆರ್ಥಿಕ ಬೆಳವಣಿಗೆಗೆ ಪಟ್ಟ ಶ್ರಮವು ಸಹ ಎಲ್ಲರ ಎದುರಿದೆ, ನಾವು ಗೆದ್ದರೆ ನೀಡಿದ ವಾಗ್ದಾನಗಳನ್ನು ಕಾರ್ಯರೂಪಕ್ಕೆ ತರುತ್ತೇವೆ. ನಮ್ಮ ಶಿಕ್ಷಕರು ನಮ್ಮನ್ನು ಆಶೀರ್ವದಿಸಲಿದ್ದಾರೆ ಎಂದು ಸತೀಶ ನಾಯಕ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಈ ಬಾರಿ ಚುನಾವಣೆಯಲ್ಲಿ ಸತ್ಯಕ್ಕೆ ಗೆಲುವಾಗಲಿದೆ. ಎಲ್ಲ ಕಡೆಯೂ ನಮಗೆ ಉತ್ತಮ ಸ್ಪಂದನೆ, ಬೆಂಬಲ ದೊರೆಯುತ್ತಿದೆ. "ನಮ್ಮ ಸೊಸೈಟಿ ನಮ್ಮ ಹಕ್ಕು ತಂಡವು " ಜಯಶಾಲಿಯಾಗಲಿದೆ. ಪಟ್ಟಭದ್ರ ಹಿತಾಸಕ್ತಿಗಳು ಮೂಲೆಗುಂಪಾಗಲಿವೆ ಎಂದು ಪ್ರಶಾಂತ ನಾಯಕ ಹೇಳುತ್ತಾರೆ.