ಸಾರಾಂಶ
ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ವರ್ತಮಾನದ ಸಮಸ್ಯೆಗಳ ಕುರಿತು ಚರ್ಚಿಸಲು ಮೂರುಸಾವಿರ ಮಠದ ಶಿವಾನುಭವ ಮಂಟಪದಲ್ಲಿ ಮಾ. 27ರಂದು ಮಠಾಧೀಶರ ಚಿಂತನ ಮಂಥನ ಸಭೆ ನಡೆಯಲಿದೆ.
ಹುಬ್ಬಳ್ಳಿ:
ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ವರ್ತಮಾನದ ಸಮಸ್ಯೆಗಳ ಕುರಿತು ಚರ್ಚಿಸಲು ಮೂರುಸಾವಿರ ಮಠದ ಶಿವಾನುಭವ ಮಂಟಪದಲ್ಲಿ ಮಾ. 27ರಂದು ಮಠಾಧೀಶರ ಚಿಂತನ ಮಂಥನ ಸಭೆ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲವಾರು ಮಠಾಧಿಪತಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಿರಹಟ್ಟಿಯ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಇದೇ ವೇಳೆ ಚುನಾವಣೆಯ ವಿಷಯ ತಮ್ಮ ಮುಂದಿಲ್ಲ. ಆದರೂ ಈ ವಿಷಯವೂ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯುಂಟು ಎಂದು ಕೂಡ ಹೇಳಿದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.30ಕ್ಕೆ ನಡೆಯಲಿರುವ ನಾಡಿನ ವಿವಿಧ ಮಠಾಧಿಪತಿಗಳ ಸಭೆಯಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಇತಿಹಾಸದಿಂದಲೂ ಸಮಾಜದಲ್ಲಿ ಸಮಸ್ಯೆಗಳು ಎದುರಾದಾಗ ಮಠಾಧೀಶರು, ಸನ್ಯಾಸಿಗಳು ಧ್ವನಿ ಎತ್ತಿದ್ದಾರೆ. ಅದೇ ರೀತಿ ವರ್ತಮಾನದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿದ್ದು, ಈ ಕುರಿತು ಚರ್ಚಿಸಲು ಈ ಸಭೆ ಎಂದು ಸ್ಪಷ್ಟಪಡಿಸಿದರು.ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಧ್ಯಕ್ಷತೆಯನ್ನು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ವಹಿಸಲಿದ್ದಾರೆ. ರಾಜ್ಯದ ಎಲ್ಲ ಮಠಾಧೀಶರಿಗೆ ಮುಕ್ತ ಆಹ್ವಾನ ನೀಡಿದರು.ಊಹಾಪೋಹ:ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ ಎಂಬ ವಿಷಯ ಕೇವಲ ಊಹಾಪೋಹ. ಇದಕ್ಕೆ ನಾನು ಉತ್ತರಿಸುವುದಿಲ್ಲ. ಒಬ್ಬ ಮಠಾಧೀಶನಾಗಿ ವೈಯಕ್ತಿಕ ತೀರ್ಮಾನ ಮಾಡುವ ಶಕ್ತಿ, ಸ್ವಾತಂತ್ರ್ಯ ನನಗೆ ಇಲ್ಲ ಎಂದ ಅವರು, ಚಿಂತನ- ಮಂಥನ ಸಭೆಯಲ್ಲಿ ಈ ವಿಷಯವೂ ಚರ್ಚೆಗೆ ಬರಬಹುದು. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಣಯ ಪ್ರಕಟಿಸುವುದಾಗಿ ತಿಳಿಸಿದರು.
ಒಂದೇ ಸಮಾಜಕ್ಕೆ ಸೀಮಿತವಾದ ಸಭೆಯಲ್ಲ. ಎಲ್ಲ ಸಮುದಾಯಗಳ ಮಠಾಧೀಶರು ಇದರಲ್ಲಿ ಭಾಗವಹಿಸಿ ಸಮಸ್ಯೆಗಳ ಪರಿಹಾರಕ್ಕೆ ಸಲಹೆ, ಸೂಚನೆ ನೀಡಲಿದ್ದು, ಈ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ಚುನಾವಣೆಗೆ ಸ್ಪರ್ಧಿಸುವ ಬೆದರಿಕೆಯೊಡ್ಡಿ ಜನಪ್ರತಿನಿಧಿಗಳಿಂದ ಹಣ ಪಡೆಯುವ ಆರೋಪದ ಕುರಿತು, ಸ್ವಾಮೀಜಿಗಳಿಗೆ ಆರೋಪ ಹತ್ತಿರ ಇರುತ್ತದೆ. ಅದರಲ್ಲಿಯೂ ನನ್ನ ಮೇಲೆ ಬಹಳ ಆರೋಪಗಳು ಬರುತ್ತಿರುತ್ತವೆ. ಆದರೆ, ಯಾವುದೇ ಆಮಿಷಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ನನಗೆ ಯಾವುದೇ ಕುಟುಂಬವಿಲ್ಲ. ಮಠಾಧೀಶರು ಸಮಾಜದ ಮಕ್ಕಳು. ಎಲ್ಲ ಆರೋಪ ಎದುರಿಸುವ ಶಕ್ತಿ ಇದೆ ಎಂದು ಶ್ರೀಗಳು ಹೇಳಿದರು.
ರಾಜಕಾರಣಿಗಳು ಅಧಿಕಾರದ ಮದದಿಂದ ದಾರಿ ತಪ್ಪುತ್ತಿದ್ದಾರೆ. ಅವರನ್ನು ಸರಿದಾರಿಗೆ ತರುವ ಕೆಲಸ ಮಠಾಧೀಶರು ಮಾಡಲಿದ್ದಾರೆ ಎಂದ ಅವರು, ಮಠಾಧಿಪತಿ ಆದವರು ಕೇವಲ ಒಂದೇ ಜಾತಿ, ಧರ್ಮಕ್ಕೆ ಸೀಮಿತವಾಗಿರುವುದಿಲ್ಲ. ಹೀಗಾಗಿ ನಾಡಿನ ಎಲ್ಲ ಸ್ವಾಮೀಜಿಗಳಿಗೂ ಸಭೆಗೆ ಆಹ್ವಾನ ನೀಡಿದ್ದೇನೆ. ರಾಜ ಮಹಾರಾಜರ ಕಾಲದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಾಗ ಅನೇಕ ಸ್ವಾಮಿಗಳು, ಮಠಾಧೀಶರು ರಾಜನ ಕಿವಿಹಿಂಡಿ ಸರಿದಾರಿಗೆ ತಂದ ಉದಾಹರಣೆಗಳಿವೆ ಎಂದರು. ಅದೇ ತರನಾಗಿ ವೀರಶೈವ ಲಿಂಗಾಯತ ಹೋರಾಟ, ಕಳಸಾ ಬಂಡೂರಿ ಹೋರಾಟ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಸಂದರ್ಭದಲ್ಲೂ ಮಠಾಧೀಶರು ಚಿಂತನ ಮಂಥನ ಸಭೆ ನಡೆಸಿ ಒಳ್ಳೆಯ ಸಂದೇಶ ರವಾನಿಸಿದ್ದರು. ಅದರಂತೆಯೇ ನಾಡು, ಸಮಾಜದ ಮೇಲೆ ಕಾಳಜಿಯುಳ್ಳ ಅನೇಕ ಮಠಾಧೀಶರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸವಣೂರು ಕಲ್ಮಠದ ಚನ್ನಬಸವ ಸ್ವಾಮೀಜಿ, ಮಂಟೂರಿನ ಶಿವಲಿಂಗೇಶ್ವರ ಸ್ವಾಮೀಜಿ, ಸದಾಶಿವ ಪೇಟೆಯ ಗದಿಗೇಶ್ವರ ಸ್ವಾಮೀಜಿ, ವಿಜಯಪುರದ ಸಿದ್ಧಲಿಂಗ ದೇವರು, ಬೊಮ್ಮನಳ್ಳಿಯ ಶಿವಯೋಗೇಶ್ವರ ಸ್ವಾಮೀಜಿ ಹಾಗೂ ವಿರೇಶ ಸೊಬರದಮಠ ಇದ್ದರು.ಮಹತ್ವ ಪಡೆದ ಸಭೆದಿಂಗಾಲೇಶ್ವರ ಶ್ರೀಗಳು ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಗುಸು ಗುಸು ಕ್ಷೇತ್ರದಲ್ಲಿ ಹಬ್ಬಿದೆ. ಹೀಗಾಗಿ ಈ ಸಭೆ ಮಹತ್ವ ಪಡೆದಂತಾಗಿದೆ. ಸಭೆಯಲ್ಲಿ ದಿಂಗಾಲೇಶ್ವರ ಶ್ರೀಗಳ ಮುಂದಿನ ನಡೆಯ ಬಗ್ಗೆ ಗೊತ್ತಾಗಲಿದೆ.