ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದಿಂದ ಫೆ.12 ರಂದು ಪ್ರಸ್ತುತ ಕೃಷಿ ಬಿಕ್ಕಟ್ಟುಗಳು ಹಾಗೂ ಪರಿಹಾರಗಳು ಕುರಿತ ಒಂದು ದಿನದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಗೂಡೇಹೊಸಹಳ್ಳಿ ಜವರಾಯಿಗೌಡ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತಾಪ ಕುಟುಂಬದಲ್ಲಿ ಜನಿಸಿದ್ದ ಮಾಜಿ ಸ್ಪೀಕರ್ ದಿ.ಕೃಷ್ಣ ಕೃಷಿ ಮತ್ತು ರೈತರ ಬಗ್ಗೆ ಸದಾ ಚಿಂತಿಸುತ್ತಿದ್ದರು. ಅವರ ಅಶಯದಂತೆ ಪ್ರತಿಷ್ಟಾನದ ವತಿಯಿಂದ ಪಟ್ಟಣದ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ಕೃಷಿ ಕ್ರೇತ್ರದ ಬಿಕ್ಕಟ್ಟುಗಳು ಮತ್ತು ಪರಿಹಾರಗಳನ್ನು ಕುರಿತು ವಿಚಾರಗೋಷ್ಠಿ ನಡೆಸಲಾಗುತ್ತಿದೆ ಎಂದರು.
ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ನಿವೃತ್ತ ಪ್ರಾಂಶುಪಾಲ ಬಾಳೆಕಾಯಿ ಶಿವನಂಜಯ್ಯ ಪ್ರಸ್ತುತ ಕೃಷಿ ಬಿಕ್ಕಟ್ಟುಗಳು ಹಾಗೂ ಪರಿಹಾರಗಳನ್ನು ಕುರಿತು ವಿಷಯ ಮಂಡಿಸಲಿದ್ದಾರೆ ಎಂದರು.ಮದ್ದೂರು ತಾಲೂಕು ಗೊಳೊರುದೊಡ್ಡಿ ಸಾವಯವ ಕೃಷಿಕ ಸಿ.ಪಿ.ಕೃಷ್ಣ ನೀರಾವರಿ ಪ್ರದೇಶದಲ್ಲಿ ಸಾವಯವ ಕೃಷಿ ಕುರಿತು, ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಸರ್ಕಾರದಿಂದ ರೈತರಿಗೆ ಸಿಗುವ ಸವಲತ್ತುಗಳು ಬಗ್ಗೆ ವಿವರಿಸುವರು. ಬ್ಯಾಂಕುಗಳಿಂದ ಸಿಗುವ ಸಾಲ ಸವಲತ್ತುಗಳ ಬಗ್ಗೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಎಂ.ನಾಗರಾಜೇಗೌಡ ತಿಳಿಸಿಕೊಡಲಿದ್ದಾರೆ ಎಂದು ಹೇಳಿದರು.
ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಎನ್.ಕೇಶವಮೂರ್ತಿ , ಕೃಷ್ಣ ಪ್ರತಿಷ್ಟಾನದ ಗೌರವಾಧ್ಯಕ್ಷೆ ಇಂದಿರಾ ಕೃಷ್ಣ ಉಪಸ್ಥಿತರಿರುವರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕೃಷ್ಣ ಪ್ರತಿಷ್ಟಾನದ ಕಾರ್ಯದರ್ಶಿ ಕತ್ತರಘಟ್ಟ ಕೆ.ಎಂ.ವಾಸು, ನಿದೇರ್ಶಕ ಟ್ರಸ್ಟಿ ಅಂಚನಹಳ್ಳಿ ಸುಬ್ಬಣ್ಣ ಇದ್ದರು.