ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಸಿ
ಇಲ್ಲಿನ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ನಾಡಿನ ಹೆಮ್ಮೆಯ ಕವಿ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಉತ್ತರ ಕನ್ನಡ ಘಟಕದ ಸಹಭಾಗಿತ್ವದಲ್ಲಿ ಬನವಾಸಿ ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತು ಅ.12ರಂದು ಸಂಜೆ 4 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಆಯೋಜಿಸಿದೆ. ಇದೇ ವೇಳೆ ಕವನ ಸಂಕಲನ ಬಿಡುಗಡೆ ಹಾಗೂ ಕದಂಬ ಕಲಾರಾಧಕ-2025 ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ ಕದಂಬ ರತ್ನಾಕರ ಹೇಳಿದರು.ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಗೀತ ಸಾಹಿತ್ಯದ ಮೂಲಕ ಕನ್ನಡದ ಪರಿಚಯವನ್ನು ನಾಡು, ವಿದೇಶಗಳಲ್ಲಿ ಪರಿಚಯಿಸಿದ್ದೇವೆ. ಯುವ ಪೀಳಿಗೆ ಬೇರೆಡೆ ಯೋಚಿಸದೇ ಸಾಂಸ್ಕೃತಿಕವಾಗಿ ನಮ್ಮ ನೆಲದ ಸಂಸ್ಕೃತಿ ಉಳಿಸಲು ಪ್ರೇರಣೆ ಆಗಿದೆ ಎಂದರು.
ಸುಗಮ ಸಂಗೀತ ಗೀತಗಾಯನವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದು, ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ ಕದಂಬ ರತ್ನಾಕರ ಅಧ್ಯಕ್ಷತೆ ವಹಿಸಲಿದ್ದಾರೆ. ಕದಂಬ ರತ್ನಾಕರ ಅವರ ದ್ವಿತೀಯ ಕವನ ಸಂಕಲನ ಹೊನ್ನುಡಿ ಕೃತಿಯನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಲೋಕಾರ್ಪಣೆಗೊಳಿಸುವವರು. ತಹಸೀಲ್ದಾರ ಪಟ್ಟರಾಜ ಗೌಡ, ಕವಿ ಕಾ.ವೆಂ.ಶ್ರೀ ಉಪಸ್ಥಿತರಿರಲಿದ್ದಾರೆ. ನಿವೃತ್ತ ಪ್ರಾಚಾರ್ಯ ಕೆ.ಎನ್. ಹೊಸ್ಮನಿ ಕೃತಿ ಪರಿಚಯ ಮಾಡಲಿದ್ದಾರೆ.ಅತಿಥಿಗಳಾಗಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಸ್ಕೊಡವೇಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ, ಮನುವಿಕಾಸದ ಗಣಪತಿ ಭಟ್ಟ ಉದ್ಯಮಿ ಗಣಪತಿ ನಾಯ್ಕ, ಕಲಾಪೋಷಕರಾದ ಉಮಾಕಾಂತ್ ಗೌಡ ನೆಲ್ಲೂರು ಹಾಗೂ ಭೀಮಾಶಂಕರ ಕುಲ್ಕರ್ಣಿ ಕೊಪ್ಪಳ ಭಾಗವಹಿಸಲಿದ್ದಾರೆ. ಶ್ರೀ ಮಾರಿಕಾಂಬಾ, ಎಂಇಎಸ್, ಲಯನ್ಸ್, ಡಾನ್ ಬಾಸ್ಕೊ ಪ್ರೌಢಶಾಲೆಗಳು ಹಾಗೂ ಕದಂಬ ಮ್ಯೂಸಿಕ್ ಸ್ಟುಡಿಯೋದ ಗಾಯಕರು ಹಾಗೂ ಶಿರಸಿಯ ಪ್ರತಿಭಾವಂತ ಗಾಯಕರು ಶತಕಂಠ ಗಾಯನ ಹಾಗೂ ಗೀತಗಾಯನ ಪ್ರಸ್ತುತಪಡಿಸಲಿದ್ದಾರೆ. ಶಿರಸಿಯ ಶ್ರೀ ಮಾರಿಕಾಂಬಾ ಡಿಜಿಟಲ್ ಟಿವಿಯಲ್ಲಿ ನೇರ ಪ್ರಸಾರವಾಗಲಿರುವ ಈ ಕಾರ್ಯಕ್ರಮ ಸುಗಮ ಸಂಗೀತದ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕವಿ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ, ಎರ್ರಿಸ್ವಾಮಿ, ಉಮಾಕಾಂತ ಗೌಡ, ಗಣೇಶ ನಾಯ್ಕ, ದಿವ್ಯಾ ಶೇಟ್, ಲಕ್ಷ್ಮಣ ಶೇಟ್ ಮತ್ತಿತರರು ಇದ್ದರು.ಪ್ರಶಸ್ತಿ ಪ್ರದಾನಕಲಾರಾಧಕರಾದ ಮೈಸೂರಿನ ಡಾ. ನಾಗರಾಜ್ ವಿ. ಬೈರಿ, ಚಾಮರಾಜನಗರದ ಸಿ.ಎಂ. ನರಸಿಂಹಮೂರ್ತಿ, ಮಂಡ್ಯದ ಡೇವಿಡ್ ಪ್ರತಿಭಾಂಜಲಿ, ಶಿವಮೊಗ್ಗದ ಶಾಂತಾ ಶೆಟ್ಟಿ, ದಾವಣಗೆರೆಯ ಸಾಲಿಗ್ರಾಮ ಗಣೇಶ ಶೆಣೈ ಹಾಗೂ ಬೆಂಗಳೂರಿನ ಎರ್ರಿಸ್ವಾಮಿ ಎಚ್. ಇವರಿಗೆ ಕದಂಬ ಕಲಾರಾಧಕ-2025 ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕದಂಬ ರತ್ನಾಕರ ತಿಳಿಸಿದರು.