ಇಂದು ಕಾರ್ಕಳ, ಹೆಬ್ರಿ ತಾಲೂಕಲ್ಲಿ ರಾಮೋತ್ಸವ

| Published : Jan 22 2024, 02:15 AM IST

ಸಾರಾಂಶ

ವಾಹನಗಳು ಬೈಕ್‌ಗಳಲ್ಲಿ ಕೇಸರಿ ಧ್ವಜವನ್ನಿಟ್ಟು ಅಭಿಮಾನ ಮೆರೆಯುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕ್ಷಣವನ್ನು ತುಂಬಿಕೊಳ್ಳುವ ಸಲುವಾಗಿ ದೇವಾಲಯಗಳು, ಭಜನಾ ಮಂದಿರಗಳು, ಎಲ್‌ಸಿಡಿ ಸ್ಕ್ರೀನ್‌ಗಳಲ್ಲಿ ನೇರಪ್ರಸಾರ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಜ.22ರಂದು ರಾಮೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ಕಾರ್ಕಳ, ಹೆಬ್ರಿ ತಾಲೂಕುಗಳ ಪ್ರಮುಖ ಪೇಟೆಗಳಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದು ಶೃಂಗರಿಸಲಾಗಿದೆ.ವಾಹನಗಳು ಬೈಕ್‌ಗಳಲ್ಲಿ ಕೇಸರಿ ಧ್ವಜವನ್ನಿಟ್ಟು ಅಭಿಮಾನ ಮೆರೆಯುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕ್ಷಣವನ್ನು ತುಂಬಿಕೊಳ್ಳುವ ಸಲುವಾಗಿ ದೇವಾಲಯಗಳು, ಭಜನಾ ಮಂದಿರಗಳು, ಎಲ್‌ಸಿಡಿ ಸ್ಕ್ರೀನ್‌ಗಳಲ್ಲಿ ನೇರಪ್ರಸಾರ ಮಾಡಲಿದ್ದಾರೆ.* ಎಲ್ಲೆಡೆ ಜೈಶ್ರೀರಾಂ

ಅವಿಭಜಿತ ಕಾರ್ಕಳ, ಹೆಬ್ರಿ ತಾಲೂಕುಗಳಲ್ಲಿ ಭಜರಂಗದಳ ಹಿಂದೂ ಜಾಗರಣ ವೇದಿಕೆ ಸೇರಿದಂತೆ ಹಿಂದೂ ಕಾರ್ಯಕರ್ತರು ಪ್ರಮುಖ ಸ್ಥಳಗಳಲ್ಲಿ ಕಟೌಟ್‌ಗಳನ್ನು ನಿಲ್ಲಿಸಿ ಶುಭಾಶಯ ಕೋರುತ್ತಿದ್ದಾರೆ. ಎಲ್ಲೆಡೆ ಹಬ್ಬದ ವಾತಾವರಣವಿದೆ.ಕಾರ್ಕಳ ತಾಲೂಕಿನಿಂದ ಅಯೋಧ್ಯೆಗೆ ಕೊಂಡೊಯ್ದ ನೆಲ್ಲಿಕಾರು ಶಿಲೆಯನ್ನು ಪೂಜಿಸಿದ ಕಾರ್ಕಳ ಬಜಗೋಳಿ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಪುರೋಹಿತ ಸಂಘ ಕಾರ್ಕಳ ಪ್ರಾಯೋಜಕತ್ವದಲ್ಲಿ ಶ್ರೀರಾಮ ತಾರಕ ಮಂತ್ರಯಾಗ, ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗವಹಿಸಿದ ತಾಲೂಕಿನ ಹಿರಿಯರಿಗೆ ಪ್ರಸಾದ ನೀಡಿ ಸನ್ಮಾನ ಕಾರ್ಯಕ್ರಮ, ಸೂರ್ಯಕಿರಣ್ ಚಾರಿಟೇಬಲ್ ಟ್ರಸ್ಟ್‌ ಅಧಿಕೃತ ಉದ್ಘಾಟನೆ, ಹಿಂದೂ ಧರ್ಮ ಶಿಕ್ಷಣ ಅಭಿಯಾನಕ್ಕೆ ಚಾಲನೆ ಹಾಗೂ ೧೦೦೮ ರಾಮ ಭಕ್ತರಿಂದ ಹನುಮಾನ್ ಚಾಲೀಸ್ ಪಠಣ, ಭಕ್ತಿಗೀತೆ, ಭಜನೆ, ಧಾರ್ಮಿಕ ನೃತ್ಯ ಸಂಗಮ ಹಾಗೂ ಕುಣಿತ ಭಜನೆಯೂ ನಡೆಯಲಿದೆ.ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಟ್ರಸ್ಟನ್ನು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದು, ಹಿಂದೂ ಧರ್ಮ ಶಿಕ್ಷಣ ಅಭಿಯಾನಕ್ಕೆ ಉದ್ಯಮಿ ಬಿ.ನಾಗರಾಜ ಶೆಟ್ಟಿ ಚಾಲನೆ ನೀಡಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಉದ್ಯಮಿ ಗಣೇಶ್ ಕಾಮತ್ ಉದ್ಘಾಟಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಡಾ. ರವೀಂದ್ರ ಶೆಟ್ಟಿ ಬಜಗೋಳಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಆಚಾರ್, ಸುನೀಲ್ ಕೆ.ಆರ್., ಮಹಾವೀರ್ ಜೈನ್, ಉಮೇಶ್ ರಾವ್, ಸುನೀಲ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.