ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದು, ಶ್ರೀಕ್ಷೇತ್ರದಲ್ಲಿ ಭರದ ಸಿದ್ಧತೆ ನಡೆದಿವೆ.

ಕನ್ನಡಪ್ರಭ ವಾರ್ತೆ ತುಮಕೂರುತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನಾದ್ಯಂತ ಪ್ರಖ್ಯಾತರಾದ ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದು, ಶ್ರೀಕ್ಷೇತ್ರದಲ್ಲಿ ಭರದ ಸಿದ್ಧತೆ ನಡೆದಿವೆ.

ನಗರದಲ್ಲಿ ಬುಧವಾರ ಗುರುವಂದನಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಕಳೆದ 4-5 ದಿನಗಳಿಂದ ಶ್ರೀಕ್ಷೇತ್ರದಲ್ಲಿ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಶ್ರೀಗಳ ಜಯಂತಿ ಪ್ರಯುಕ್ತ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಅತ್ಯಂತ ವೈಭವೋಪೇತವಾಗಿ ಕಾರ್ಯಕ್ರಮಗಳು ನಡೆಯಲಿವೆ. ಶ್ರೀಗಳ ಗದ್ದುಗೆ ದರ್ಶನ ಮಾಡಲು ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರೀಗಳ ಗದ್ದುಗೆ, ದೇವಸ್ಥಾನ ಸೇರಿದಂತೆ ಮಠವನ್ನು ಬಗೆಬಗೆಯ ಹೂವುಗಳಿಂದ ಸಿಂಗರಿಸಲಾಗಿದೆ.

ರಾಷ್ಟ್ರಪತಿ ಅವರು ಶ್ರೀಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರದಲ್ಲಿ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಭದ್ರತಾ ದೃಷ್ಠಿಯಿಂದ ಮಂಗಳವಾರವೂ ಕೇಂದ್ರ ಮೀಸಲು ಪಡೆಯಿಂದ ತಪಾಸಣೆ ನಡೆಸಲಾಯಿತು.

6 ಕಡೆ ದಾಸೋಹ ವ್ಯವಸ್ಥೆ:ಶ್ರೀಕ್ಷೇತ್ರಕ್ಕೆ ಏ.1ರಂದು ಆಗಮಿಸುವ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರಿಗಾಗಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮಹಾಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ. ಶ್ರೀಮಠದ ಪ್ರಾರ್ಥನಾ ಮಂದಿರ, ಡಾ.ಶ್ರೀ ಶಿವಕುಮಾರ ಸ್ವಾಮೀಜಿ ದಾಸೋಹ ಮಂಟಪ, ಲಿಂಗಾಯತರ ಕೊಪ್ಪಲು, ಸಾದರ ಕೊಪ್ಪಲು, ಮಠದ ಸಮುದಾಯದ ಭವನ, ಅತಿಥಿ ಗೃಹಗಳು ಸೇರಿದಂತೆ ಶ್ರೀಕ್ಷೇತ್ರದ 6 ಕಡೆಗಳಲ್ಲಿ ಪ್ರಸಾದ ನಿಲಯಗಳನ್ನು ನಿರ್ಮಿಸಲಾಗಿದ್ದು, ಬೆಳಗ್ಗೆಯಿಂದ ರಾತ್ರಿವರೆಗೂ ನಿರಂತರವಾಗಿ ದಾಸೋಹ ನಡೆಯಲಿದೆ. ಭಕ್ತಾದಿಗಳು ಪ್ರಸಾದ ಸೇವಿಸಲು ಟೇಬಲ್ ಮತ್ತು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಸಿಹಿಬೂಂದಿ ತಯಾರಿ:

ಈಗಾಗಲೇ ಕಳೆದ 4-5 ದಿನಗಳಿಂದ ನೂರಾರು ಬಾಣಸಿಗರು ಸಿಹಿಬೂಂದಿ ಸೇರಿದಂತೆ ಸಿಹಿ ಖಾದ್ಯ ಹಾಗೂ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ. ಏ.1ರಂದು ಉಪ್ಪಿನಕಾಯಿ, ಕೋಸಂಬರಿ, ಪಾಯಸ, ಬೂಂದಿ, ಚಿತ್ರಾನ್ನ, ಅನ್ನ, ಸಾರು, ಮಜ್ಜಿಗೆ, ಕೇಸರಿ ಬಾತ್, ಖಾರಾಬಾತ್, ಖಾರಾಬೂಂದಿ ಸೇರಿದಂತೆ ವಿಶೇಷ ದಾಸೋಹ ಇರಲಿದೆ.