ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) 26ನೇ ಘಟಿಕೋತ್ಸವ ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ಮಂಗಳವಾರ (ಫೆ.27) ನಡೆಯಲಿದ್ದು, 88 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಸೇರಿದಂತೆ ಒಟ್ಟು 52,650 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರದಾನ ನಡೆಯಲಿದೆ.ವಿದ್ಯಾರ್ಥಿನಿಯರೇ ಚಿನ್ನದ ಪದಕ ಹೆಚ್ಚು ಪಡೆದಿದ್ದು, 70 ವಿದ್ಯಾರ್ಥಿನಿಯರು, 18 ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಒಟ್ಟಾರೆ ಈ ಬಾರಿ 100 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಆರೋಗ್ಯ ವಿವಿಯ ಕುಲಪತಿ ಡಾ। ಎಂ.ಕೆ.ರಮೇಶ್, ವಿವಿಯ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11.45ಕ್ಕೆ ಘಟಿಕೋತ್ಸವ ಆರಂಭಗೊಳ್ಳಲಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ। ಬಿ.ಎನ್.ಗಂಗಾಧರ್ ಮುಖ್ಯ ಅತಿಥಿಯಾಗಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣಪ್ರಕಾಶ್ ಪಾಟೀಲ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದರು.ಈ ಬಾರಿ 44,525 ವಿದ್ಯಾರ್ಥಿಗಳು ಎಂಬಿಬಿಎಸ್ ಸೇರಿದಂತೆ ವಿವಿಧ ವೈದ್ಯಕೀಯ ಪದವಿ, 7,185 ಮಂದಿ ಸ್ನಾತಕೋತ್ತರ ಪದವಿ, 156 ಸೂಪರ್ ಸ್ಪೆಷಾಲಿಟಿ, 7 ಸ್ನಾತಕೋತ್ತರ ಡಿಪ್ಲೊಮಾ, 122 ಫೆಲೋಶಿಪ್, 8 ಸರ್ಟಿಫಿಕೇಟ್ ಕೋರ್ಸ್, 17 ಪಿಎಚ್‌ಡಿ ಸೇರಿದಂತೆ ಒಟ್ಟು 52,650 ಮಂದಿ ಪದವಿ ಪ್ರದಾನಕ್ಕೆ ಅರ್ಹರಾಗಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ(ಆಡಳಿತ) ಸಿ.ಆರ್. ಶಿವಪ್ರಸಾದ್ ಮತ್ತು ಮೌಲ್ಯಮಾಪನ ಕುಲಸಚಿವ ರಿಯಾಜ್ ಬಾಷಾ ಉಪಸ್ಥಿತರಿದ್ದರು.ಮೂವರಿಗೆ ‘ಡಾಕ್ಟರ್ ಆಫ್ ಸೈನ್ಸ್’ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೆಪ್ರೋ ಯುರಾಲಜಿ ಸ್ಥಾಪಿಸಿದ ನಿವೃತ್ತ ವೈದ್ಯ ಜಿ.ಕೆ.ವೆಂಕಟೇಶ್, ಕಲಬುರಗಿ ವಿಶ್ವವಿದ್ಯಾಲಯದ ಚರ್ಮರೋಗ ತಜ್ಞ ಡಾ। ಪಿ.ಎಂ.ಬಿರಾದರ್ ಮತ್ತು ಮಧ್ಯಪ್ರದೇಶದ ಪಿಜಿಯೋಥೆರಪಿಸ್ಟ್ ಡಾ। ಪಿಂಕಿ ಭಾಟಿಯಾ ಟೋಪಿವಾಲಾ ಅವರಿಗೆ ವಿವಿಯು ಈ ಬಾರಿಯ ‘ಡಾಕ್ಟರ್ ಆಫ್ ಸೈನ್ಸ್’ ಪ್ರದಾನ ಮಾಡಲಾಗುತ್ತಿದೆ ಎಂದು ಕುಲಪತಿ ತಿಳಿಸಿದರು.
ಹೆಚ್ಚು ಚಿನ್ನದ ಪದಕ ಪಡೆದವರುಹುಬ್ಬಳ್ಳಿಯ ಕೆಎಲ್‌ಇ ಸೊಸೈಟಿ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್‌ನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಫೆಲೆಂಟಿನಾ ಜೇಮ್ಸ್ ಅತಿ ಹೆಚ್ಚು 5 ಚಿನ್ನದ ಪದಕ ಪಡೆದಿದ್ದಾರೆ. ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಡಾ। ಪ್ರಜ್ಞಾ ಎನ್. (ಆಯುಷ್) 4 ಚಿನ್ನದ ಪದಕ ಮತ್ತು 2 ನಗದು ಬಹುಮಾನ, ಧಾರವಾಡದ ಸೋನಿಯಾ ಎಜುಕೇಷನಲ್ ಟ್ರಸ್ಟ್ ಕಾಲೇಜ್ ಆಫ್ ಫಾರ್ಮಸಿಯ ಅನರ್ಘ್ಯ ವಿ.ಕುಲಕರ್ಣಿ (ಬಿ.ಫಾರ್ಮ) 3 ಚಿನ್ನದ ಪದಕ, ಮಂಗಳೂರಿನ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ। ಕೆ.ಐ.ಮಧುರಾ ಮೂರೂ ವರ್ಷದ ಎಂಬಿಬಿಎಸ್ ವ್ಯಾಸಂಗದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವ ಜೊತೆಗೆ 2 ಚಿನ್ನ ಮತ್ತು ಒಂದು ನಗದು ಬಹುಮಾನ ಪಡೆದಿದ್ದಾರೆ.
ಬೆಂಗಳೂರಿನ ಈಸ್ಟ್ ವೆಸ್ಟ್ ಕಾಲೇಜ್ ಆಫ್ ಫಾರ್ಮಸಿಯ ಡಾ। ಸ್ನೇಹಾ ಸುಹಾನ್ ಸನ್ನಿ (ಫಾರ್ಮ ಡಿ.) 2 ಚಿನ್ನದ ಪದಕ, ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಪ್ರಿಯಾ ಕುಮಾರಿ 2 ಚಿನ್ನದ ಪದಕ ಪಡೆದಿದ್ದಾರೆ.5 ಗ್ರಾಂ. ಚಿನ್ನದ ಪದಕಎಲ್ಲ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿಗಳಿಗೂ ವಿಶ್ವವಿದ್ಯಾಲಯದಿಂದ 22 ಕ್ಯಾರೆಟ್ ಬಂಗಾರವುಳ್ಳ 5 ಗ್ರಾಂ. ಚಿನ್ನದ ಪದಕ ಪ್ರದಾನ ಮಾಡಲಾಗುತ್ತಿದೆ ಎಂದು ಕುಲಪತಿ ರಮೇಶ್ ತಿಳಿಸಿದರು.