೧೯೫೧ರಲ್ಲಿ ಆರಂಭಗೊಂಡ ಹುಸೂರಿನ ಶಾಲೆ ೭೫ ವರ್ಷ ಪೂರೈಸಿದ್ದು, ಈ ಪ್ರಯುಕ್ತ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಫೆ. ೪ರಂದು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
75 ವರ್ಷ ಪೂರೈಸಿದ ಹಿನ್ನೆಲೆ ವಿವಿಧ ಕಾರ್ಯಕ್ರಮ, ಸ್ಮಾರ್ಟ್‌ಕ್ಲಾಸ್ ಉದ್ಘಾಟನೆ: ಎಂ.ಕೆ. ನಾಯ್ಕ
ಕನ್ನಡಪ್ರಭ ವಾರ್ತೆ ಸಿದ್ದಾಪುರ೧೯೫೧ರಲ್ಲಿ ಆರಂಭಗೊಂಡ ಹುಸೂರಿನ ಶಾಲೆ ೭೫ ವರ್ಷ ಪೂರೈಸಿದ್ದು, ಈ ಪ್ರಯುಕ್ತ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಫೆ. ೪ರಂದು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಮುಖ್ಯಾಧ್ಯಾಪಕ ಎಂ.ಕೆ. ನಾಯ್ಕ ಕಡಕೇರಿ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಮೃತ ಮಹೋತ್ಸವದ ಸಭಾ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸುವರು. ೭೫ರ ಸಂಭ್ರಮದ ಸವಿನೆನಪಿಗಾಗಿ ಹೊರ ತರುತ್ತಿರುವ ಅಮೃತಂಗಮಯ ಎಂಬ ಸ್ಮರಣ ಸಂಚಿಕೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್. ವೈದ್ಯ ಉಪಸ್ಥಿತರಿರುತ್ತಾರೆ. ಹಲಗೇರಿ ಗ್ರಾಪಂ ಅಧ್ಯಕ್ಷೆ ಮೋಹಿನಿ ಅಣ್ಣಪ್ಪ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ೨ ಗಂಟೆಯಿಂದ ಹಳೆಯ ವಿದ್ಯಾರ್ಥಿಗಳ ಸಂವಾದ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ಬ್ಯಾಡಗಿ ತಹಸೀಲ್ದಾರ್ ಚಂದ್ರಶೇಖರ್ ಕೆ. ನಾಯ್ಕ ಹುಸೂರು ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಈ ವರೆಗೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು, ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಸಂಜೆ ೪ರಿಂದ ಸಮಾರೋಪ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ಶಾಸಕ ಭೀಮಣ್ಣ ನಾಯ್ಕ ಸ್ಮಾರ್ಟ್ ಕ್ಲಾಸ್ ಅನಾವರಣಗೊಳಿಸುವರು. ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ದಿಲೀಪ್ ಕುಮಾರ್ ಎಂ. ನಾಯ್ಕ ಅಧ್ಯಕ್ಷತೆ ವಹಿಸುವರು. ಸಂಜೆ ೭.೩೦ರಿಂದ ಶಾಲಾ ಮಕ್ಕಳಿಂದ ಹಾಗೂ ಹಳೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಕಾರ್ಯಕ್ರಮಗಳಿಗೆ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮದವರು ಸಂಪೂರ್ಣ ಸಹಕಾರ ನೀಡುತ್ತಿದ್ದು, ಗ್ರಾಮ ಕಮಿಟಿಯಿಂದ ₹೨ ಲಕ್ಷ ದೇಣಿಗೆ ನೀಡಿ ಸಹಕರಿಸಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ದಿಲೀಪ್ ಕುಮಾರ್ ಎಂ. ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ಆರ್. ನಾಯ್ಕ, ಗ್ರಾಮಾಡಳಿತ ಕಮಿಟಿಯ ಅಧ್ಯಕ್ಷ ಬಲೀಂದ್ರ ನಾಯ್ಕ, ಅಮೃತ ಮಹೋತ್ಸವ ಸಮಿತಿಯ ಖಜಾಂಚಿ ಮೋಹನ ನಾಯ್ಕ ಇದ್ದರು.