ಎಸ್.ಜಿ. ತೆಗ್ಗಿನಮನಿ

ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ಮಠದ ಶಾಂತಲಿಂಗ ಶ್ರೀಗಳ 17ನೇ ವರ್ಷದ ಮೌನಲಿಂಗಾನುಷ್ಠಾನ ಮಂಗಲೋತ್ಸವ ಪವಿತ್ರ ಕ್ಷೇತ್ರ ರಾಮದುರ್ಗ ತಾಲೂಕಿನ ಕಲ್ಲೂರಿನ ಸಿದ್ದೇಶ್ವರ ದೇವಸ್ಥಾನದಲ್ಲಿ ಜೂ. 16ರಂದು ನೆರವೇರಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಗದುಗಿನ ಡಾ. ತೋಂಟದ ಸಿದ್ಧರಾಮ ಶ್ರೀಗಳು, ಮುಳ್ಳೂರು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಚಿಪ್ಪಲಕಟ್ಟಿಯ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಹಾಗೂ ರಾಮದುರ್ಗದ ಶಾಂತವೀರ ಶ್ರೀಗಳು ವಹಿಸಲಿದ್ದಾರೆ.

ಸಿದ್ದೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂದ್ರಶೇಖರ ಮಟ್ಟಿ ಅಧ್ಯಕ್ಷತೆ ವಹಿಸುವರು. ಖ್ಯಾತ ಉದ್ಯಮಿ ಬಸವರಾಜ ಸಿಂಧನೂರ, ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರೊ. ಶಶಿಧರ ತೋಡಕರ, ಕಮಿಟಿ ಉಪಾಧ್ಯಕ್ಷ ಬಸವರಾಜ ಚಿಕ್ಕಮಠ ಹಾಗೂ ಶ್ರೀ ಸಿದ್ದೇಶ್ವರ ಸ್ವೀಟ್ಸ್ ಮಾಲೀಕರಾದ ಸುರೇಶ ಪೂಜಾರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪುಣ್ಯಭೂಮಿ: ಸುಕ್ಷೇತ್ರ ಭೈರನಹಟ್ಟಿ ಗ್ರಾಮವು ಬ್ರಹ್ಮಾನಂದ ಸ್ವಾಮಿಗಳು, ದೊರೆಸ್ವಾಮಿಗಳು ಹಾಗೂ ಅಜ್ಜೇಶ್ವರ ಶಿವಯೋಗಿಗಳು ತಪೋನುಷ್ಠಾನಗೈದ ಪುಣ್ಯಭೂಮಿ. ಅಂತಹ ಶ್ರೇಷ್ಠ ಪರಂಪರೆ ಹೊಂದಿರುವ ದೊರೆಸ್ವಾಮಿ ಮಠ ನೂರಾರು ವರ್ಷಗಳಿಂದ ಈ ಭಾಗದಲ್ಲಿ ಆಧ್ಯಾತ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕೈಂಕರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಗದುಗಿನ ತೋಂಟದ ಸಿದ್ಧರಾಮ ಸ್ವಾಮಿಗಳು ಶ್ರೀಗಳ ಕ್ರಿಯಾಶೀಲತೆಯನ್ನು ಗಮನಿಸಿ, 2025ರಲ್ಲಿ ಶಿರೋಳದ ತೋಂಟದಾರ್ಯ ಶಾಖಾಮಠಕ್ಕೆ ಇವರನ್ನು ಪೀಠಾಧಿಪತಿಗಳನ್ನಾಗಿ ಮಾಡಿದರು. ಸದ್ಯ ಪೂಜ್ಯರು ಭೈರನಹಟ್ಟಿ ಹಾಗೂ ಶಿರೋಳ ಮಠಗಳನ್ನು ಎರಡು ಕಣ್ಣುಗಳಂತೆ ಮುನ್ನಡೆಸುತ್ತಿದ್ದಾರೆ.

ರಾಜ್ಯದ ಪ್ರಥಮ ಕನ್ನಡದ ತೇರು: ಶಾಂತಲಿಂಗ ಸ್ವಾಮಿಗಳ ಕನ್ನಡ ಕೈಂಕರ್ಯದ ಫಲವಾಗಿ ಭೈರನಹಟ್ಟಿ ಗ್ರಾಮ ಹಾಗೂ ಬಂಡಾಯ ನಾಡು ನರಗುಂದ ನೆಲದಲ್ಲಿ ಪ್ರತಿ ವರ್ಷ ನ. 1ರಂದು ಕನ್ನಡದ ರಥೋತ್ಸವ ಜರುಗುತ್ತದೆ. ಇದು ರಾಜ್ಯದಲ್ಲಿಯೇ ಪ್ರಥಮ ಪ್ರಯೋಗವಾಗಿದ್ದು, ಕನ್ನಡದ ಕಹಳೆಯೂದುವಲ್ಲಿ ಮಠವು ದಾಪುಗಾಲು ಇಟ್ಟಿದೆ. ಶ್ರಾವಣ ಮಾಸದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಒಂದು ತಿಂಗಳ ಕಾಲ ಸ್ವಾತಂತ್ರ್ಯಕ್ಕೆ ಸಿಹಿ ನೀರೆರೆದವರು ಎಂಬ ಶೀರ್ಷಿಕೆಯಡಿ ಐತಿಹಾಸಿಕ ಪ್ರವಚನ ಮಾಲಿಕೆಯನ್ನು ಆಯೋಜಿಸಲಾಗುತ್ತದೆ.


ರಾಜ್ಯದಲ್ಲಿಯೇ ಮೊಟ್ಟಮೊದಲು ಕಿತ್ತೂರಿನ ಕೋಟೆಯಿಂದ ನಂದಗಡದವರೆಗೆ ಸ್ವರಾಜ್ಯಕ್ಕೆ ಮುಕ್ಕಾಲ್ನೂರು ಸಂಭ್ರಮಕ್ಕೆ ಸಂತರ ನಡಿಗೆ ಪಾದಯಾತ್ರೆ ಹಾಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಭೈರನಹಟ್ಟಿಯಿಂದ ನರಗುಂದವರೆಗೆ ಮಠಾಧೀಶರ ಪಾದಯಾತ್ರೆ ನಡೆಸಿ, ಶ್ರೀಮಠವು ಕನ್ನಡದ ಮಠವಾಗಿ ಗುರುತಿಸಿಕೊಂಡಿದೆ.

ನಾಡಿನಲ್ಲಿಯೇ ಪ್ರಪ್ರಥಮ ಬಾರಿಗೆ 2022ರಲ್ಲಿ ಅಖಿಲ ಭಾರತ ಗಜಲ್ ಸಾಹಿತ್ಯ ಸಮ್ಮೇಳನ ಏರ್ಪಡಿಸಿ, ಕವಿ ಅಲ್ಲಾಗಿರಿರಾಜ ಅವರ ಅಧ್ಯಕ್ಷತೆಯಲ್ಲಿ ಗಜಲ್ ಸಾಹಿತ್ಯಕ್ಕೆ ಅಭೂತಪೂರ್ವ ಪ್ರೋತ್ಸಾಹ ನೀಡಿದ್ದಾರೆ. ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆ ಪ್ರಯುಕ್ತ ಹುತಾತ್ಮ ವೀರಯೋಧ ಶಿವಬಸಯ್ಯ ಕುಲಕರ್ಣಿ ಅವರ ವೀರಗಲ್ಲಿನಿಂದ(ಬಾದಾಮಿ ತಾಲೂಕಿನ ಚೊಳಚಗುಡ್ಡ) ಭೈರನಹಟ್ಟಿ ದೊರೆಸ್ವಾಮಿ ಮಠದವರೆಗೆ ಸುಮಾರು 47 ಕಿಲೋ ಮೀಟರ್ ಉದ್ದದ ಕಾರ್ಗಿಲ್ ಜ್ಯೋತಿ ರಥಯಾತ್ರೆ ನಡೆಸಿ ಇತಿಹಾಸ ಸೃಷ್ಟಿಸಿ, ಕಾರ್ಯಕ್ರಮದಲ್ಲಿ 50 ಕಾರ್ಗಿಲ್ ಯೋಧರನ್ನು ಸನ್ಮಾನಿಸಿ ಮಕ್ಕಳಲ್ಲಿ ದೇಶಾಭಿಮಾನ ಹೆಚ್ಚಿಸಿದ್ದಾರೆ.

35 ವರ್ಷಗಳಿಂದ ಕುಮಾರೇಶ್ವರ ದೇಶಿ ಗೋತಳಿ ಸಂರಕ್ಷಣೆ ಮತ್ತು ಗೋಸಂವರ್ಧನಾ ಕೇಂದ್ರ ಸ್ಥಾಪಿಸಿ, ಗೋವುಗಳನ್ನು ವ್ಯವಸ್ಥಿತವಾಗಿ ಪೋಷಿಸಲಾಗುತ್ತಿದೆ. 2004ರಲ್ಲಿ ಸ್ಥಾಪನೆಯಾದ ಸಿಂದಗಿ ಶಾಂತವೀರೇಶ್ವರ ಗ್ರಂಥಾಲಯದಲ್ಲಿ 10 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಹಾಗೂ 12ನೇ ಶತಮಾನದ ವಚನಗಳ ತಾಡೋಲೆಗಳಿವೆ. ದೊರೆಸ್ವಾಮಿ ಸಾಹಿತ್ಯ ಪ್ರಕಾಶನದಿಂದ 21ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲಾಗಿದೆ.

ಸ್ವತಃ ಕವಿಗಳಾದ ಶ್ರೀಗಳು ನಮ್ಮೂರು ಭೈರನಹಟ್ಟಿ, ಗೋವನಕೊಪ್ಪ ಹಾಗೂ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಕುರಿತು ನನ್ನ ಗುರು ನನ್ನ ತಾಯಿ ಎಂಬ ಕೃತಿ ರಚನೆಯಲ್ಲಿ ತೊಡಗಿದ್ದಾರೆ. 1997ರಲ್ಲಿ ಆರಂಭವಾದ ಉಚಿತ ಪ್ರಸಾದನಿಲಯದ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಅರಿವು ಹಾಗೂ ಸಂಸ್ಕಾರ ನೀಡುತ್ತಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ವಿವಿಧ ಉನ್ನತ ಹುದ್ದೆಗಳಲ್ಲಿದ್ದಾರೆ.

ಮಂಗಲೋತ್ಸವ: ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳ ಆಶೀರ್ವಾದದಂತೆ ಶ್ರೀಗಳು 2010ರ ಮಾ. 12ರಂದು ಯಡೆಯೂರು ಸಿದ್ಧಲಿಂಗೇಶ್ವರ ಸನ್ನಿಧಿಯಲ್ಲಿ 101 ದಿನಗಳ ಕಾಲ ಮೊದಲ ಮೌನಲಿಂಗಾನುಷ್ಠಾನ ಪೂರೈಸಿದರು. ಅಂದಿನಿಂದ ಪ್ರತಿವರ್ಷ ಈ ವ್ರತ ಮುಂದುವರಿದಿದೆ. ಭೈರನಹಟ್ಟಿಯಲ್ಲಿ 7 ವರ್ಷ, ಗೋವನಕೊಪ್ಪದಲ್ಲಿ 3 ವರ್ಷ, ಕಗ್ಗೇರಿ, ಯಡೆಯೂರು, ಶಿರೋಳ ಹಾಗೂ ರಾಮದುರ್ಗದ ಕಲ್ಲೂರು ಸಿದ್ದೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನುಷ್ಠಾನಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಲೋಕ ಕಲ್ಯಾಣ: ಗದುಗಿನ ತೋಂಟದಾರ್ಯ ಮಠದ ಲಿಂ. ಸಿದ್ಧಲಿಂಗ ಶ್ರೀಗಳ ಮಾರ್ಗದರ್ಶನದಂತೆ ಭಕ್ತರ ಉದ್ಧಾರಕ್ಕಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ಮೌನಲಿಂಗಾನುಷ್ಠಾನವನ್ನು ಮುಂದುವರಿಸಿಕೊಂಡು ಬರಲಾಗಿದೆ ಎಂದು ಶಾಂತಲಿಂಗ ಸ್ವಾಮೀಜಿ ತಿಳಿಸಿದರು.

ಜನಸಾಮಾನ್ಯರ ಸ್ವಾಮೀಜಿ: ಸಮಾಜದಲ್ಲಿ ಜಾತಿ ಭೇದವೆಣಿಸದೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಕನ್ನಡ ರಥೋತ್ಸವವನ್ನು ನಡೆಸಿಕೊಂಡು ಬಂದಿರುವ ಶಾಂತಲಿಂಗ ಶ್ರೀಗಳು ಈ ಭಾಗದ ಜನಸಾಮಾನ್ಯರ ಸ್ವಾಮಿಗಳಾಗಿದ್ದಾರೆ. ಅವರ ಮೌನಲಿಂಗಾನುಷ್ಠಾನದಿಂದ ಲೋಕಕ್ಕೆ ಸಾಕಷ್ಟು ಒಳ್ಳೆಯದಾಗಲಿ ಎಂದು ನರಗುಂದ ಟಿಎಪಿಸಿಎಂಎಸ್ ನಿರ್ದೇಶಕ ಚಂದ್ರಶೇಖರ ದಂಡಿನ ತಿಳಿಸಿದರು.