ಇಂದು ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ

| Published : Apr 22 2024, 02:00 AM IST

ಸಾರಾಂಶ

ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಚನ್ನಬಸವಾಶ್ರಮ ಪರಿಸರದಲ್ಲಿ ದಿನವಿಡಿ ಕಾರ್ಯಕ್ರಮಗಳು ವಿವಿಧ ಕಾರ್ಯಕ್ರಮಗಳು ಜರುಗಲಿವೆ. ದಿನವಿಡಿ ದಾಸೋಹ ವ್ಯವಸ್ಥೆ, ಮಠಾಧೀಶರು, ಸಾಹಿತಿಗಳು, ಗಣ್ಯರು ಭಾಗಿಯಾಗಲಿದ್ದಾರೆ.

ಕನ್ನಡಪ್ರಭ ವಾರ್ತೆ ಭಾಲ್ಕಿ

ಪಟ್ಟಣದ ಹಿರೇಮಠ ಸಂಸ್ಥಾನದಿಂದ ಡಾ. ಚನ್ನಬಸವ ಪಟ್ಟದ್ದೇವರ 25ನೇ ಸ್ಮರಣೋತ್ಸವ ಸೋಮವಾರ ಅರ್ಥಪೂರ್ಣವಾಗಿ ಜರುಗಲಿದೆ.

ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಚನ್ನಬಸವಾಶ್ರಮ ಪರಿಸರದಲ್ಲಿ ದಿನವಿಡಿ ಕಾರ್ಯಕ್ರಮಗಳು ಜರುಗಲಿವೆ.

ಬಸವೇಶ್ವರ ವೃತ್ತದಲ್ಲಿ ಬೆಳಗ್ಗೆ 9ಕ್ಕೆ 25 ಗ್ರಾಮಗಳಿಂದ ಬರುವ ಚನ್ನಬಸವ ಜ್ಯೋತಿಗೆ ಸ್ವಾಗತ ಕೋರಲಾಗುತ್ತದೆ. ಜೊತೆಗೆ ಕಳೆದೊಂದು ವಾರದಿಂದ ಸಾಮೂಹಿಕ ವಚನ ಪಾರಾಯಣದಲ್ಲಿ ಪಾಲ್ಗೊಂಡ ಸಾವಿರಾರೂ ಭಕ್ತರು ವಚನ ಗ್ರಂಥವನ್ನು ತಲೆಯ ಮೇಲೆ ಹೊತ್ತುಕೊಂಡು ಚನ್ನಬಸವಾಶ್ರಮದ ವರೆಗೂ ಮೆರವಣಿಗೆಯಲ್ಲಿ ಸಾಗಲಿದ್ದಾರೆ.

ಬೆಳಗ್ಗೆ 10ಕ್ಕೆ ಸಾಮೂಹಿಕ ವಚನ ಪಾರಾಯಣ ನಡೆಯಲಿದೆ. ನಂತರ 11ಕ್ಕೆ ವೇದಿಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಸಂಜೆ 4ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ನಿರಂತರ ದಾಸೋಹ ವ್ಯವಸ್ಥೆ: ಸಾಮೂಹಿಕ ವಚನ ಪಾರಾಯಣ, ಗೋಷ್ಠಿ ಹಿನ್ನೆಲೆ ಕಳೆದ 3 ದಿನಗಳಿಂದ ಅನ್ನ ದಾಸೋಹ ನಡೆಯುತ್ತಿದೆ. ವಿಶೇಷವಾಗಿ ಸೋಮವಾರ ದಿನವಿಡಿ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಬೆಳಗ್ಗೆ 11ರಿಂದ ಮಧ್ಯರಾತ್ರಿ 12 ಗಂಟೆವರೆಗೂ ಪ್ರಸಾದ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ವೇದಿಕೆಯ ಬಲ ಭಾಗದಲ್ಲಿ ಡಾ. ಚನ್ನಬಸವ ಪಟ್ಟದ್ದೇವರ ಹೆಸರಿನಲ್ಲಿ ದಾಸೋಹ ಭವನದ ಬೃಹತ್‌ ಪೆಂಡಾಲ್‌ ಹಾಕಲಾಗಿದೆ. ಸಮಾರಂಭದಲ್ಲಿ ಭಾಗವಹಿಸುವ ಭಕ್ತರು ಕುಟ್ಟಿದ ಹುಗ್ಗಿ ಸವಿಯಲಿದ್ದಾರೆ. ಜೊತೆಗೆ ಅನ್ನ, ಸಾಂಬಾರ್‌, ರೊಟ್ಟಿ, ಪಲ್ಯೆ, ಅಂಬಲಿ ವ್ಯವಸ್ಥೆ ಮಾಡಲಾಗುತ್ತಿದೆ. ಮಹಿಳೆಯರು ಹಾಗೂ ಪುರುಷರಿಗೆ ಪ್ರಸಾದ ಬಡಿಸಲು ಪ್ರತ್ಯೇಕವಾಗಿ 25 ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 300 ಸೇವಕರನ್ನು ಪ್ರಸಾದಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ದಾಸೋಹ ಸೇವಾ ಸಮಿತಿ ಅಧ್ಯಕ್ಷ ಸಿದ್ದಯ್ಯ ಕಾವಡಿಮಠ, ಶರಣಪ್ಪ ಬಿರಾದಾರ ತಿಳಿಸಿದ್ದಾರೆ.

ಇಂದು ಬೆಳಗ್ಗೆ 11ಕ್ಕೆ ಉದ್ಘಾಟನೆ: ಬೆಳಿಗ್ಗೆ 11ಕ್ಕೆ ವಿಜಯಪೂರ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಪತಿ ತುಳಸಿಮಾಲಾ ಸಮಾರಂಭ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು. ಹೊಸಪೇಟೆ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಡಾ. ಶಿವಾನಂದ ಸ್ವಾಮೀಜಿ, ಡಾ. ಬಸವಲಿಂಗ ಅವಧೂತರು, ವೀರೇಶ್ವರ ಶಿವಾಚಾರ್ಯರು, ಬಸವೇಶ್ವರಿ ತಾಯಿ, ಡಾ. ಮಹಾದೇವಮ್ಮ ತಾಯಿ, ಮಾತೆ ಮೈತ್ರಾದೇವಿ ತಾಯಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಮಾಜಿ ಶಾಸಕ ಪ್ರಕಾಶ ಖಂಡ್ರೆ ಬಸವಗುರುವಿನ ಪೂಜೆ ನೆರವೇರಿಸಲಿದ್ದಾರೆ. ನಾರಂಜಾ ಸಹಕಾರ ಸಕ್ಕರೆ ಕಾರಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಅವರು ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಖ್ಯಾತ ಚಿಂತಕ ಎಸ್‌ಜಿ ಸಿದ್ದರಾಮಯ್ಯ ಅನುಭಾವ ನೀಡಲಿದ್ದಾರೆ.

ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ: ಪಟ್ಟದ್ದೇವರ ಸ್ಮರಣೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಚನ್ನಬಸವಾಶ್ರಮದಲ್ಲಿ ವೇದಿಕೆ ಸಿದ್ಧತೆಯನ್ನು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸಿದ್ದಯ್ಯ ಕವಡಿಮಠ, ವಿಶ್ವನಾಥಪ್ಪ ಬಿರಾದಾರ, ಶಶಿಧರ ಕೋಸಂಬೆ, ಗಣಪತಿ ಬಾವುಗೆ, ಧನರಾಜ ಬಂಬುಳಗೆ, ಶರಣಪ್ಪ ಬಿರಾದಾರ, ನಾಗಶೆಟೆಪ್ಪ ಲಂಜವಾಡೆ, ಶಂಕರ ಮದರಗಾಂವೆ, ಶಾಂತಯ್ಯ ಸ್ವಾಮಿ, ರಾಜು ಜುಬರೆ, ಪ್ರಶಾಂತ ರೆಡ್ಡಿ, ಜಗನ್ನಾಥ ಚಿಟ್ಮೆ, ಚನ್ನಬಸವ ನಾಗೂರ, ಶಾಮರಾವ ಡೊಂಗರಗಿ, ವಿಜಯಕುಮಾರ ಇದ್ದರು.