ಸಾರಾಂಶ
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಐತಿಹಾಸಿಕ ಹಿನ್ನೆಲೆ ಹೊಂದಿರುವ, ಹಿಂದೂ- ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ನಿಜಗಲ್ ಸಿದ್ಧರಬೆಟ್ಟದಲ್ಲಿ ಡಿ.13ರಂದು ಅದ್ಧೂರಿ ಹನುಮ ಜಯಂತಿ ಹಾಗೂ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಎರಡು ಸಾವಿರಕ್ಕೂ ಅಧಿಕ ಹನುಮ ಮಾಲಾಧಾರಿಗಳು ಬೆಟ್ಟಕ್ಕೆ ಭೇಟಿ ನೀಡಿ ಹನುಮನ ದರ್ಶನ ಪಡೆಯುವ ನಿರೀಕ್ಷೆಯಿದೆ.ಇಡೀ ಬೆಟ್ಟಕ್ಕೆ ಸಿಂಗಾರ:
ಪ್ರತಿ ವರ್ಷದಂತೆ ಈ ವರ್ಷವೂ ಸಹ ಹನುಮ ಜಯಂತಿಯನ್ನು ನಿಜಗಲ್ ಸಿದ್ಧರ ಬೆಟ್ಟದಲ್ಲಿ ಆಚರಿಸಲಿದ್ದು ಅತ್ಯಾಧುನಿಕ ವಿದ್ಯುತ್ ಲೇಸರ್ ಕಿರಣಗಳು ಮತ್ತು ಬಣ್ಣ ಬಣ್ಣದ ವಿದ್ಯುತ್ ದೀಪಗಳ ಬೆಳಕಿನಿಂದ ಸುಮಾರು 3562 ಅಡಿ ಎತ್ತರವಿರುವ ಇಡೀ ಬೆಟ್ಟವನ್ನು ಸಿಂಗಾರ ಮಾಡಲಾಗಿದೆ.ಬೆಟ್ಟಕ್ಕೆ ಬರುವ ಭಕ್ತರಿಗೆ ಊಟದ ವ್ಯವಸ್ಥೆಯಿದ್ದು, ಕನ್ನಡ ಸಂಸೃತಿ ಇಲಾಖೆಯ ಸಾಂಸ್ಕತಿಕ ಕಲಾ ತಂಡಗಳಿಂದ ಜಾನಪದ ನೃತ್ಯಗಳು, ವೀರಗಾಸೆ, ಡೊಳ್ಳು ಕುಣಿತ ಕಾರ್ಯಕ್ರಮಗಳು ನಡೆಯಲಿವೆ.
ಇಡೀ ಪಟ್ಟಣಕ್ಕೆ ಶೃಂಗಾರ:ವಿಶ್ವಹಿಂದೂ ಪರಿಷತ್- ಬಜರಂಗದಳದ ಕಾರ್ಯಕರ್ತರು ಇಡೀ ಪಟ್ಟಣವನ್ನು ಕೇಸರಿ ಧ್ವಜಗಳಿಂದ ಸಿಂಗರಿಸಿದ್ದು, ದಾಬಸ್‍ಪೇಟೆ ಮಹಿಳಾ ಸಂಘದಿಂದ ಶಿವಗಂಗೆ ವೃತ್ತದಿಂದ ಸಿದ್ಧರ ಬೆಟ್ಟದವರೆಗೂ ಪೂರ್ಣಕುಂಭ ಸ್ವಾಗತ ಕೋರಲಿದ್ದಾರೆ.
ಪೌರಾಣಿಕ ನಾಟಕ ಪ್ರದರ್ಶನ:ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಶ್ರೀ ಸಿದ್ಧೇಶ್ವರ ಸ್ವಾಮಿಯ ಉತ್ಸವ ಮೆರವಣಿಗೆ ಹಾಗೂ ಮಧ್ಯಾಹ್ನ 1 ಗಂಟೆಗೆ ಶ್ರೀ ರಾಮಾಂಜನೇಯ ಕೃಪಾಪೋಷಿತ ನಾಟಕ ಮಂಡಳಿಯಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಿದ್ದು, ಸಂಜೆ 5 ಗಂಟೆಗೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ.
ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ:ನೆಲಮಂಗಲ ತಾಲೂಕಿನಾದ್ಯಂತ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳ ಪಾದಯಾತ್ರೆ ಬರುವುದರಿಂದ ಹಾಗೂ ಪಟ್ಟಣದಲ್ಲಿ ಸಂಚರಿಸುವುದರಿಂದ ರಾಷ್ಟ್ರೀಯ ಹೆದ್ದಾರಿ48ರ ಉದ್ದಕ್ಕೂ ಮತ್ತು ಬೆಟ್ಟದ ಮೇಲಿರುವ ದರ್ಗಾಕ್ಕೂ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮುಖ್ಯವಾಗಿ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭದ್ರತೆಗಾಗಿ ಒಬ್ಬರು ಡಿವೈಎಸ್‍ಪಿ, ಇಬ್ಬರು ಇನ್ಸ್ ಪೆಕ್ಟರ್, 5 ಜನ ಪಿಎಸ್‍ಐಗಳು, 9 ಎಎಸ್ ಐ ಗಳು, 12 ಪೊಲೀಸ್ ಪೇದೆಗಳು, 24 ಹೋಮ್ ಗಾಡ್ ಗಳನ್ನು ನಿಯೋಜಿಸಲಾಗಿದೆ.