ಲೋಕಸಭಾ ಚುನಾವಣೆ: ನಾಮಪತ್ರ ವಾಪಸ್‌ಗೆ ಇಂದು ಕಡೆಯ ದಿನ

| Published : Apr 08 2024, 01:11 AM IST / Updated: Apr 08 2024, 12:37 PM IST

ಸಾರಾಂಶ

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ 14 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕಡೆಯ ದಿನವಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ 14 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕಡೆಯ ದಿನವಾಗಿದೆ. ರಾಜ್ಯದಲ್ಲಿ ಒಟ್ಟು 358 ಅಭ್ಯರ್ಥಿಗಳು 492 ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ಪೈಕಿ 300 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಉಳಿದವು ಅಮಾನ್ಯಗೊಂಡಿವೆ. 

ಸೋಮವಾರ ಸಂಜೆ ವೇಳೆಗೆ 14 ಕ್ಷೇತ್ರಗಳಲ್ಲಿ ಕಣದಲ್ಲಿ ಉಳಿಯಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಈಗಾಗಲೇ ಪ್ರಮುಖ ಪಕ್ಷಗಳ ಪ್ರಚಾರ, ರೋಡ್‌ ಶೋ ಇತ್ಯಾದಿ ಆರಂಭವಾಗಿದ್ದರೂ ಮಂಗಳವಾರದಿಂದ ಪ್ರಚಾರದ ಅಬ್ಬರ ಇನ್ನಷ್ಟು ಬಿರುಸಾಗಲಿದೆ. 

ವಿವಿಧ ಪಕ್ಷಗಳ ರಾಷ್ಟ್ರೀಯ ನಾಯಕರು, ಸ್ಟಾರ್‌ ಪ್ರಚಾರಕರ ಸಭೆಗಳನ್ನು ಏರ್ಪಡಿಸಲು ಸಜ್ಜಾಗುತ್ತಿವೆ.ಮತದಾರರಿಗೆ ಹಂಚುತ್ತಿದ್ದ ಗೀರೈಸ್, ಚಿಕನ್‌ ಚಾಪ್ಸ್‌ ವಶಹೊಳೆನರಸೀಪುರ: ತಾಲೂಕಿನ ಅಗ್ರಹಾರ ಗೇಟಿನ ರೈಸ್‌ಮಿಲ್ ಹತ್ತಿರ ಶನಿವಾರ ರಾತ್ರಿ ಅಕ್ರಮವಾಗಿ ಗೀ ರೈಸ್ ಹಾಗೂ ಚಿಕನ್ ಚಾಪ್ಸ್ ವಿತರಿಸುತ್ತಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಶನಿವಾರ ರಾತ್ರಿ ಎಫ್‌ಎಸ್‌ಟಿ ತಂಡ ಗಸ್ತಿನಲ್ಲಿರುವಾಗ ಸಾರ್ವಜನಿಕರು ದೂರವಾಣಿ ಮೂಲಕ ಕರೆ ಮಾಡಿ ಅಗ್ರಹಾರ ಗೇಟಿನ ರೈಸ್ ಮಿಲ್ ಹತ್ತಿರ ಗೀರೈಸ್ ಹಾಗೂ ಚಿಕನ್ ಚಾಪ್ಸ್ ವಿತರಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎಫ್‌ಎಸ್‌ಟಿ ತಂಡ ಹಾಗೂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಮಾಡಿದಾಗ ಎರಡು ಪಾತ್ರೆಯಲ್ಲಿ 500 ಜನರಿಗೆ ಆಗುವುಷ್ಟು ಗೀ ರೈಸ್ ಸಂಗ್ರಹ ಮಾಡಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಆಹಾರವನ್ನು ನಾಶ ಮಾಡಿ, ೨ ದೊಡ್ಡ ಪಾತ್ರೆಗಳು ಹಾಗೂ ಟ್ರ್ಯಾಕ್ಟರ್ ವಶಕ್ಕೆ ಪಡೆದು, ಎಫ್‌ಎಸ್‌ಟಿ ತಂಡದ ಮುಖ್ಯಸ್ಥರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಡೂರಿನಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ಧ ಪೋಸ್ಟರ್‌ ಅಭಿಯಾನ

 ಚಿಕ್ಕಮಗಳೂರು ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಪೋಸ್ಟರ್‌ ಅಭಿಯಾನ ಆರಂಭವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಪೋಸ್ಟರ್‌ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಸಂಸದರೇ ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಿ, ತಾವು ಯಾರ ಬಲದಿಂದ ಸಂಸದರಾಗಿದ್ದು?, ಕಡೂರು ಕ್ಷೇತ್ರಕ್ಕೆ ಎಷ್ಟು ಬಾರಿ ಭೇಟಿ ನೀಡಿದ್ದೀರಿ?, ಸದಾ ಬರಕ್ಕೆ ತುತ್ತಾಗುವ ಕಡೂರಿಗೆ ನಿಮ್ಮ ಮಹತ್ತರ ಕೊಡುಗೆ ಏನು?, ತಮ್ಮ ಸ್ವಾರ್ಥದ ಅಡ್ಜೆಸ್ಟ್‌ಮೆಂಟ್‌ ಕುಟುಂಬ ರಾಜಕಾರಣಕ್ಕೆ ಇಲ್ಲಿನ ಕಾರ್ಯಕರ್ತರು ಬಲಿ ಪಶುಗಳಾಗಬೇಕೆ?. ಕೋವಿಡ್‌ ಸಂದರ್ಭದಲ್ಲಿ ಕಡೂರಿನ ಎಷ್ಟು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೀರಿ?. ಸಂಸದರಾದ ನಂತರ ಕಡೂರಿಗೆ ಎಷ್ಟು ಬಾರಿ ಬಂದಿದ್ದೀರಿ? ಉತ್ತರಿಸಿ ಎಂದು ಪ್ರಶ್ನೆಗಳನ್ನು ಕೇಳಲಾಗಿದೆ.