ಕುಕ್ಕೆ ಸುಬ್ರಹ್ಮಣ್ಯ: ಇಂದು ಸಂಭ್ರಮದ ಲಕ್ಷದೀಪೋತ್ಸವ

| Published : Nov 30 2024, 12:48 AM IST

ಸಾರಾಂಶ

ಲಕ್ಷದೀಪೋತ್ಸವದ ದಿನದ ಚಂದ್ರಮಂಡಲ ರಥೋತ್ಸವದ ಬಳಿಕ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರೀಯವಾದ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಬಿಸಲಿದ್ದಾರೆ. ಲಕ್ಷದೀಪೋತ್ಸವದ ದಿನದಿಂದ ನಿರಂತರವಾಗಿ ಷಷ್ಠಿ ರಥೋತ್ಸವದ ವರೆಗೆ ಕ್ಷೇತ್ರದಲ್ಲಿ ಬೀದಿ ಉರುಳು ಸೇವೆಯನ್ನು ಭಕ್ತಾದಿಗಳು ಮಾಡುತ್ತಾರೆ.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವವು ಭಕ್ತಿ- ಸಡಗರ, ಸಂಭ್ರಮ ನ.20ರಂದು ಶನಿವಾರ ಸಂಜೆಯಿಂದ ಆರಂಭವಾಗಲಿದೆ. ರಾತ್ರಿ ಮಹಪೂಜೆಯ ಬಳಿಕ ಹೊರಾಂಗಣ ಉತ್ಸವ ನಡೆದು ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಲಿದೆ. ರಥಬೀದಿಯಿಂದ ಕಾಶಿಕಟ್ಟೆ ವರೆಗೆ ಬೆಳಗಿದ ಲಕ್ಷ ಹಣತೆಗಳ ನಡುವೆ ಶ್ರೀ ದೇವರ ಉತ್ಸವ ನೆರವೇರಲಿದೆ.

ಶನಿವಾರ ದೇವಳದ ಹಾಗೂ ಸಾರ್ವಜನಿಕ ಭಕ್ತರ ಸಹಕಾರದಿಂದ ಲಕ್ಷ ಹಣತೆಗಳು ದೇವಳದಿಂದ ಕಾಶಿಕಟ್ಟೆವರೆಗೆ ಬೆಳಗಲಿವೆ. ದೇವಳದ ಗೋಪುರದಿಂದ ಕಾಶಿಕಟ್ಟೆ ತನಕ, ಹನುಮಂತಗುಡಿ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬೈಪಾಸ್, ಕುಮಾರಧಾರ ಸೇರಿದಂತೆ ಕ್ಷೇತ್ರಾದ್ಯಂತ ಹಣತೆ ದೀಪ ಹಚ್ಚಲಾಗುತ್ತದೆ. ಕುಣಿತ ಭಜನೆ: ವಿವಿಧ ಸಂಘ ಸಂಸ್ಥೆಗಳು ಹಾಗೂ ಭಕ್ತಾದಿಗಳಿಂದ ಶ್ರೀ ದೇವಳದ ರಥಬೀದಿಯಲ್ಲಿ ಸವಾರಿ ಮಂಟಪದವರೆಗೆ ಕುಣಿತ ಭಜನೆ ನೆರವೇರಲಿದೆ. ಸುಮಾರು ಸಾವಿರಕ್ಕೂ ಅಧಿಕ ಮಂದಿಯಿಂದ ಕುಣಿತ ಭಜನೆ ನಡೆಯಲಿದೆ. ಕೆ. ಯೋಗೀಶ್ ಕಿಣಿ ಕಾರ್ಕಳ ಭಜನೋತ್ಸವ ನಡೆಸಿಕೊಡಲಿದ್ದಾರೆ. ದೈವ ಮತ್ತು ಶ್ರೀ ದೇವರ ಮುಖಾಮುಖಿ: ಶನಿವಾರ ಮುಂಜಾನೆ ೭.೩೦ಕ್ಕೆ ದೇವರಗದ್ದೆ ದೈವ ಚಾವಡಿಯಿಂದ ದೈವಗಳ ಭಂಡಾರ ಕ್ಷೇತ್ರಕ್ಕೆ ಆಗಮಿಸಲಿದೆ. ರಾತ್ರಿ ಮಹಾಪೂಜೆಯ ಬಳಿಕ ನಡೆಯುವ ಹೊರಂಗಣ ಉತ್ಸವದಲ್ಲಿ ಪ್ರಥಮವಾಗಿ ಕಾಚುಕುಜುಂಬ ದೈವವು ಶ್ರೀ ದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಲಿದೆ. ನಂತರ ಆಕರ್ಷಕ ಸಾಲುದೀಪಗಳ ನಡುವೆ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ನೆರವೇರುತ್ತದೆ. ಗುರ್ಜಿ ಪೂಜೋತ್ಸವ: ಕಾಶಿಕಟ್ಟೆಯಲ್ಲಿ ಗುರ್ಜಿ ಪೂಜೋತ್ಸವ ನಡೆಯಲಿದೆ. ಚಂದ್ರಮಂಡಲ ರಥದಲ್ಲಿ ಕಾಶಿಕಟ್ಟೆಗೆ ಆಗಮಿಸಿದ ಶ್ರೀ ದೇವರಿಗೆ ಗುರ್ಜಿಯಲ್ಲಿ ಪೂಜೆ ನೆರವೇರಿಸಲಾಗುತ್ತದೆ. ಮೊದಲಿಗೆ ಕಾಶಿಕಟ್ಟೆ ಮಹಾಗಣಪತಿಗೆ ದೀಪಾರಾಧನೆಯುಕ್ತ ರಂಗಪೂಜೆ ನೆರವೇರಲಿದೆ. ಬಳಿಕ ಸಿಡಿಮದ್ದು ಪ್ರದರ್ಶನವಾಗಲಿದೆ.

ಇಂದು ಬೀದಿ ಉರುಳುಸೇವೆ ಆರಂಭ: ಲಕ್ಷದೀಪೋತ್ಸವದ ದಿನದ ಚಂದ್ರಮಂಡಲ ರಥೋತ್ಸವದ ಬಳಿಕ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರೀಯವಾದ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಬಿಸಲಿದ್ದಾರೆ. ಲಕ್ಷದೀಪೋತ್ಸವದ ದಿನದಿಂದ ನಿರಂತರವಾಗಿ ಷಷ್ಠಿ ರಥೋತ್ಸವದ ವರೆಗೆ ಕ್ಷೇತ್ರದಲ್ಲಿ ಬೀದಿ ಉರುಳು ಸೇವೆಯನ್ನು ಭಕ್ತಾದಿಗಳು ಮಾಡುತ್ತಾರೆ. ಕುಮಾರಧಾರ ನದಿಯಲ್ಲಿ ಮಿಂದು ಬಳಿಕ ಸುಮಾರು ೨ ಕಿ.ಮೀ ದೂರ ಪ್ರಮುಖ ರಸ್ತೆಯಲ್ಲಿ ಉರುಳಿಕೊಂಡು ದೇವಳದವರೆಗೆ ಬಂದು ಬಳಿಕ ದರ್ಪಣ ತೀರ್ಥ ನದಿಯಲ್ಲಿ ಉರುಳುಸೇವೆಯನ್ನು ಕೊನೆಗೊಳಿಸಲಿದ್ದಾರೆ. ಭಕ್ತಾದಿಗಳಿಗೆ ಬೀದಿ ಉರುಳು ಸೇವೆ ನೆರವೇರಿಸಲು ಸಂಜೆ ೬ಗಂಟೆಯಿಂದ ಮುಂಜಾನೆ ೬ಗಂಟೆವರೆ ಅವಕಾಶ ಕಲ್ಪಿಸಲಾಗಿದೆ.