ಸಾರಾಂಶ
ದಾವಣಗೆರೆ: ಹಳೆಯ ಸಿಹಿ-ಕಹಿ ನೆನಪುಗಳಿಗೆ ವಿದಾಯ ಹೇಳಿ, ಹೊಸ ವರ್ಷ 2025ನ್ನು ಸಡಗರ, ಸಂಭ್ರಮದಿಂದ ಸ್ವಾಗತಿಸಲು ಜನತೆ ಸಜ್ಜಾಗಿರುವ ಬೆನ್ನಲ್ಲೇ ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಇಲಾಖೆಯ ಸಲಹೆ, ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಪೊಲೀಸ್ ಇಲಾಖೆ ಜನತೆ, ಸಂಘಟಕರಿಗೆ ಸೂಚಿಸಿದೆ. ಜಿಲ್ಲಾದ್ಯಂತ ಹೊಸ ಹುರುಪು, ಉಲ್ಲಾಸ, ಸಂತೋಷ, ಉತ್ಸಾಹದಿಂದ ಬದುಕಿನಲ್ಲಿ ಹೊಸ ಗುರಿ, ಆಲೋಚನೆಗಳನ್ನು ಇಟ್ಟುಕೊಂಡು ಸಾಗುತ್ತಿರುವ ಎಲ್ಲರ ಆಶೋತ್ತರಗಳನ್ನೂ 2025ನೇ ವರ್ಷ ಈಡೇರಿಸಲಿ. ಅದೇ ರೀತಿ ಭರವಸೆಯ ಬದುಕಿಗೂ ಅದು ನಾಂದಿ ಹಾಡಲಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳೊಂದಿಗೆ ಹೊಸ ವರ್ಷಾಚರಣೆ ವೇಳೆ ಇಲಾಖೆ ಸೂಚನೆಗಳನ್ನು ಪಾಲಿಸುವುದು ಸಹ ಕಡ್ಡಾಯ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಡಿ.31ರ ರಾತ್ರಿ 12ಕ್ಕೆ 2025ನೇ ಸಾಲಿನ ಹೊಸ ವರ್ಷಾಚರಣೆ ವೇಳೆ ಜಿಲ್ಲಾ ಪೊಲೀಸ್ ಇಲಾಖೆ ಯಾವುದೇ ಅಹಿತಕರಘಟನೆ ನಡೆಯದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಹೊಸ ವರ್ಷಾಚರಣೆ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಆಯೋಜಕರು, ಸಂಘಟನೆಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಪೊಲೀಸ್ ಇಲಾಖೆಯು ಸೂಚಿಸಿರುವ ಈ ಕೆಳ ಕಂಡ ಸೂಚನೆಗಳನ್ನು ಪಾಲಿಸುವುದು ಸಹ ಕಡ್ಡಾಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.ಪಾಲಿಸಬೇಕಾದ ನಿಯಮಗಳು:
ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜಕರು, ಸಾರ್ವಜನಿಕರು ನಿಗದಿತ ಸಮಯಕ್ಕೆ ಸಂಭ್ರಮಾಚರಣೆ ಮುಕ್ತಾಯ ಮಾಡಬೇಕು. ಸಂಚಾರ ನಿಯಮ ಉಲಂಘಿಸುವುದು, ಕುಡಿದು ವಾಹನ ಚಾಲನೆ ಮಾಡುವುದು, ವಾಹನಗಳಲ್ಲಿ ನಿಗದಿಗಿಂತ ಹೆಚ್ಚು ಸವಾರಿ ಮಾಡುವುದು, ವ್ಹೀಲಿಂಗ್ ಮಾಡುವುದನ್ನು ಸಂಪೂರ್ಣ ನಿಷೇಧಿಸಿದೆ. ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೊಸ ವರ್ಷಾಚರಣೆ ಹೆಸರಲ್ಲಿ ಅಕ್ಕಪಕ್ಕದ ಜನರಿಗೆ ತೊಂದರೆಯಾಗದಂತೆ ವಿಶೇಷವಾಗಿ ಆಸ್ಪತ್ರೆಗಳು, ಅಪಾರ್ಟ್‌ಮೆಂಟ್‌ಗಳ ಸುತ್ತಮುತ್ತ ಹಿರಿಯ ನಾಗರಿಕರು, ಮಹಿಳೆಯರು, ಹೆಣ್ಣು ಮಕ್ಕಳು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಸೂಚಿಸಿದ್ದಾರೆ.ಹೆಣ್ಮಕ್ಕಳಿಗೆ ತೊಂದರೆ ಕೊಟ್ರೆ ಹುಷಾರ್...!
ಪೊಲೀಸ್ ಇಲಾಖೆ ಸೂಚನೆ, ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ನಿಶ್ಚಿತ. ಹೊಸ ವರ್ಷಾಚರಣೆ ವೇಳೆ ಯುವಕರು ಅಶ್ಲೀಲವಾಗಿ, ಅಸಭ್ಯವಾಗಿ ವರ್ತಿಸಿದರೆ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಚುಡಾಯಿಸುವುದು, ದಾಂಧಲೆ ಮಾಡುವುದು, ಮಹಿಳೆಯರು, ಯುವತಿಯರು, ವಿದ್ಯಾರ್ಥಿನಿಯರಿಗೆ ತೊಂದರೆಯುಂಟು ಮಾಡುವುದು ಕಂಡು ಬಂದರೆ ಅಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅಮಲು ಅಥವಾ ಮದ್ಯ ನಶೆಯಲ್ಲಿ ಆಚರಣೆ ಮಾಡಿ, ಸಾರ್ವಜನಿಕರಿಗೆ, ಶಾಂತಿಗೆ ತೊಂದರೆ ಕೊಟ್ಟರೆ ಅಂತಹವರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜಕರು ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು. ಸಾರ್ವಜನಿಕರು ಮುಖ್ಯವಾಗಿ ಯುವಕರು ಬೇರೆಯವರಿಗೆ ತೊಂದರೆ ಆಗದಂತೆ ಆಚರಣೆ ಮಾಡಬೇಕು. ವಾಹನಗಳಲ್ಲಿ ಅತೀ ವೇಗವಾಗಿ, ಜನರಿಗೆ ತೊಂದರೆಯಾಗುವಂತೆ ಕೂಗುವುದು, ಕಿರುಚುವುದನ್ನು ನಿಷೇಧಿಸಿದೆ. ಅಂತಹವರ ವಿರುದ್ಧವೂ ಕ್ರಮ ಕಟ್ಟಿಟ್ಟ ಬುತ್ತಿ.
ಸಾರ್ವಜನಿಕ, ಜನ ಸಂದಣಿಪ್ರದೇಶದಲ್ಲಿ ಪಟಾಕಿ ಸಿಡಿಸಬಾರದು. ಯಾವುದೇ ಅಗ್ನಿ ಅವಘಡ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೇ, ಶಾಂತಿ, ಸೌಹಾರ್ದಯುತವಾಗಿ ಆಚರಿಸಬೇಕು. ಅಹಿತಕರ ಘಟನೆ ಕಂಡು ಬಂದರೆ ತಕ್ಷಣವೇ ತುರ್ತು ಸಹಾಯವಾಣಿ 112ಗೆ ಕರೆ ಮಾಡಬೇಕು ಅಥವಾ ಸ್ಥಳೀಯ ಪೊಲೀಸ್ ಠಾಣೆ, ಅಧಿಕಾರಿ, ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.ಶಬ್ದ ಮಾಲಿನ್ಯ ಮಾಡದಂತೆ ಎಚ್ಚರಿಕೆ:ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ, ಧಾರ್ಮಿಕ ನಿಂದನೆ, ಸುಳ್ಳು ಸುದ್ದಿ ಹರಡುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಪೋಸ್ಟ್ ಹಾಕುವುದು, ಶೇರ್ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಕರ್ಕಶ ಶಬ್ದ ಉಂಟು ಮಾಡುವ ಸೌಂಡ್ ಸಿಸ್ಟಂ, ಡಿಜೆ ಬಳಸಬಾರದು. ಲೌಡ್ ಸ್ಪೀಕರ್‌ಗಳನ್ನು ಸುಪ್ರೀಂ ಕೋರ್ಟ್, ಸರ್ಕಾರದ ಆದೇಶ ಉಲ್ಲಂಘನೆಯಾಗದಂತೆ ಮತ್ತು ಶಬ್ದ ಮಾಲಿನ್ಯವಾಗದಂತೆ ಧ್ವನಿವರ್ಧಕ ಬಳಸಬೇಕು. ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ನೈತಿಕ ಪೊಲೀಸ್ ಗಿರಿ ಮತ್ತು ಅನುಚಿತ ವರ್ತನೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹೊಸ ವರ್ಷಾಚರಣೆ ಆಯೋಜಕರು ವಾಹನಗಳ ಪಾರ್ಕಿಂಗ್‌ಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಹೊಸ ವರ್ಷಾಚರಣೆಗೆ ಪೊಲೀಸ್ ಇಲಾಖೆ ಕ್ರಮದಾವಣಗೆರೆ ವಿವಿಧೆಡೆ ಚೆಕ್ ಪೋಸ್ಟ್ ಸ್ಥಾಪಿಸಿದ್ದು, ಕುಡಿದು ವಾಹನ ಚಾಲನೆ ಮಾಡುವವರು, ತ್ರಿಬಲ್ ರೈಡಿಂಗ್, ವ್ಹೀಲಿಂಗ್ ಮಾಡುವವರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಲಿದ್ದು, ದಾವಣಗೆರೆ ನಗರ ಸೇರಿದಂತೆ ತಾಲೂಕು ಕೇಂದ್ರಗಳಾದ ಹರಿಹರ, ಹೊನ್ನಾಳಿ, ಚನ್ನಗಿರಿ, ಜಗಳೂರು, ನ್ಯಾಮತಿ ಪಟ್ಟಣಗಳಲ್ಲೂ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾದ್ಯಂತ ಹೊಸ ವರ್ಷಾಚರಣೆ ಸಂಬಂಧ ಅಗತ್ಯ ಪೊಲೀಸ್ ಅಧಿಕಾರಿ-ಸಿಬ್ಬಂದಿ ನಿಯೋಜಿಸಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಕೆಎಸ್ಸಾರ್ಪಿ, ಡಿಎಆರ್ ತುಕಡಿ ನಿಯೋಜಿಸಲಾಗಿದೆ. ಬಾರ್ ಮತ್ತು ರೆಸ್ಟೋರೆಂಟ್, ವೈನ್ ಶಾಪ್‌ಗಳು ನಿಗದಿಪಡಿಸಿದ ಸಮಯಕ್ಕೆ ಬಂದ್ ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.ದಾವಣಗೆರೆ ಹೊರ ವಲಯದ ಕೊಂಡಜ್ಜಿ ಕೆರೆ, ದೇವರ ಬೆಳಕೆರೆ ಚೆಕ್ ಡ್ಯಾಂ ಮತ್ತು ಇತರೆ ಹೊರ ಭಾಗಗಳಲ್ಲೂ ಪೊಲೀಸ್ ನಿಯೋಜನೆ ಮಾಡಲಾಗಿದ್ದು, ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜಕರಿಗೆ ಯಾವುದೇ ಅವಘಡಕ್ಕೆ ಅವಕಾಶವಿಲ್ಲದಂತೆ ಸೂಕ್ತ ಪೂರ್ವ ಸಿದ್ಧತೆ, ಮುಂಜಾಗ್ರತೆ ವಹಿಸಲು ಸೂಚನೆಗಳನ್ನು ನೀಡಲಾಗಿದೆ. ದಾವಣಗೆರೆ ನಗರದಲ್ಲಿ ಅಗತ್ಯವಿದ್ದ ಸೂಕ್ಷ್ಮ ಪ್ರದೇಶ ಕಡೆಗಳಲ್ಲಿ ಡ್ರೋನ್ ಮೂಲಕ ನಿಗಾವಹಿಸಲಾಗುವುದು ಎಂದು ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.