ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕೇವಲ 45 ದಿನಗಳಲ್ಲಿ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿರುವ ‘ಓಂ ಶಿವಂ’ ಕನ್ನಡ ಚಲನಚಿತ್ರ ಇದೇ ೫ ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಅಲ್ವಿನ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೀಪಾ ಫಿಲಮ್ಸ್ ಅಡಿಯಲ್ಲಿ ಕೆ.ಎನ್. ಕೃಷ್ಣ ನಿರ್ಮಿಸಿದ್ದು, ಈ ಚಿತ್ರದಲ್ಲಿ ಭಾರ್ಗವ್ ಕೃಷ್ಣ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದಾರೆ. ಸಕಲೇಶಪುರ ಮೂಲದ ವಿರಾನಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರವಿಕಾಳೆ ಮತ್ತು ರೋಬೋ ಶಂಕರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಕಾಕ್ರೋಚ್ ಸುಧೀ, ಯಶ್‌ಶಟ್ಟಿ, ಲಕ್ಷ್ಮೀಸಿದ್ದಿಯ, ಅಪೂರ್ವ ಶ್ರೀ, ಬಾಲರಾಜ್ ವಾಡಿ, ಉಗ್ರಂ ರವಿ ಮೊದಲಾದ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ವಿಜಯ್ ಆರ್.ಡಿ. ಸಂಗೀತ ನೀಡಿದ್ದಾರೆ. ವೀರೇಶ್ ಎನ್‌ಡಿಎ ಛಾಯಾಗ್ರಹಣ ಮಾಡಿದ್ದು, ಸತೀಶ್ ಸಂಕಲನ ಮಾಡಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಕೌಸ್‌ಪೀರ್ ಸಾಹಿತ್ಯ ರಚಿಸಿದ್ದಾರೆ. ನೈಜ ಘಟನೆ ಆಧಾರಿತ ರೊಮ್ಯಾಂಟಿಕ್ ಆ್ಯಕ್ಷನ್ ಪ್ರಕಾರದ ಚಿತ್ರ ಇದಾಗಿದೆ. ಮಂಡ್ಯ, ಮೈಸೂರು, ಮಂಗಳೂರು, ಬೆಂಗಳೂರು ಹಾಗೂ ತಮಿಳುನಾಡಿನ ಕೃಷ್ಣಗಿರಿಯಂತಹ ಹಲವಾರು ಸ್ಥಳಗಳಲ್ಲಿ ೪೫ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಪೋಷಕರು ಮಕ್ಕಳನ್ನು ಬೆಳೆಸುವಾಗ ಎದುರಿಸುವ ಸಂಕಷ್ಟ, ಪ್ರೀತಿ- ಪ್ರೇಮದ ಬಲೆಗಳಲ್ಲಿ ಸಿಲುಕುವ ಯುವಜನರ ಸಮಸ್ಯೆಗಳು, ಮೊಬೈಲ್ ಬಳಕೆಯಿಂದ ಉಂಟಾಗುವ ಹಾನಿಗಳು ಕಥೆಯ ಪ್ರಮುಖ ಅಂಶಗಳಾಗಿವೆ.
ನಿರ್ಮಾಪಕ ಕೃಷ್ಣ ಅವರು ಮಾತನಾಡಿ, ಇದು ಇಡೀ ಕುಟುಂಬ ಒಟ್ಟಾಗಿ ಕುಳಿತು ನೋಡುವಂಥ ಸಿನಿಮಾ. ನಾಯಕ ಹೊಸಬನಾದರೂ, ತಾಂತ್ರಿಕ ತಂಡ ಅನುಭವಿಗಳು. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು.ನಾಯಕ ಭಾರ್ಗವ್ ಕೃಷ್ಣ ಮಾತನಾಡಿ, ಸೆಪ್ಟೆಂಬರ್ ೫ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರು ಸಿನಿಮಾ ನೋಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ನಾಯಕಿ ವಿರಾನಿಕಾ ಮಾತನಾಡಿ, ಈ ವರ್ಷ ಬಿಡುಗಡೆಯಾಗುತ್ತಿರುವ ನನ್ನ ಎರಡನೇ ಸಿನಿಮಾ ಇದು. ಅಮ್ಮ- ಮಗಳ ಬಾಂಧವ್ಯ, ಮಕ್ಕಳಿಗಾಗಿ ಪೋಷಕರ ತ್ಯಾಗ, ಮೊಬೈಲ್ ವ್ಯಸನದ ಅಪಾಯಗಳ ಕುರಿತ ಜಾಗೃತಿ ಚಿತ್ರದಲ್ಲಿ ಮೂಡಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.