ಸಾರ್ವಜನಿಕರ ರಕ್ಷಣೆಯಲ್ಲಿಯೇ ದಿನದ ಹೆಚ್ಚಿನ ಸಮಯ ಕಳೆಯುವ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಕ್ರೀಡಾಕೂಟದಂತಹ ಸ್ಪರ್ಧೆಗಳು ಮನಸ್ಸಿಗೆ ಮುದ ನೀಡಿ ಹೊಸ ಚೈತನ್ಯ ತುಂಬಲು ಸಹಕಾರಿಯಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ದಾರಾಧ್ಯ ಎಚ್. ಜೆ. ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಗುರುವಾರ ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಮೂರು ದಿನಗಳ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಗಳಲ್ಲಿ ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಇಂದಿನ ಸೋಲೆ ಮುಂದಿನ ಗೆಲುವಿನ ಮೆಟ್ಟಿಲು ಎಂಬ ಮಾತು ಅರಿತು ಸೌಹಾರ್ದ ದಿಂದ ಸ್ವರ್ಧೆಗಳಲ್ಲಿ ಭಾಗವಹಿಸಬೇಕೆಂದು ಕಿವಿ ಮಾತು ಹೇಳಿದರು. ರಕ್ಷಣೆ ಮತ್ತು ಕರ್ತವ್ಯದ ಒತ್ತಡದ ನಡುವೆ ಬಿಡುವು ಮಾಡಿಕೊಂಡು ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆ ಇಲ್ಲಿ ಪ್ರದರ್ಶಿಸುವ ಮೂಲಕ ವಿಜೇತರಾಗಿ ಎಂದು ನ್ಯಾಯಾಧೀಶರು ಹಾರೈಸಿದರು. ಎಸ್ಪಿ ಪೃಥ್ವಿಕ್ ಶಂಕರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಮಾತನಾಡಿ, ಬಿಡುವಿಲ್ಲದ ಕರ್ತವ್ಯದ ನಡುವೆಯೂ ಸಮಯ ಮಾಡಿಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಿ ಮನಸ್ಸು ಮತ್ತು ದೇಹ ಪ್ರಪುಲ್ಲ ಮಾಡಿಕೊಳ್ಳಬೇಕೆಂದರು. ವಿವಿಧ ಆಟಗಳಲ್ಲಿ‌ ಭಾಗವಹಿಸಿ ತಮ್ಮ ಪ್ರತಿಭೆ ಮೆರೆಯಬೇಕು. ಸ್ಪರ್ಧೆ ಕೇವಲ ಆಟಗಳಲ್ಲಿ‌ ಇರಬೇಕು. ಕಾರಣ ನಾವೆಲ್ಲ ಒಂದು ಕುಟುಂಬದವರು ಎಂಬುವುದು ಮರೆಯಬಾರದೆಂದರು.

ಸಾಮಾಜಿಕ ಅರಣ್ಯಾಧಿಕಾರಿ ಚೇತನ್ ಗಸ್ತಿ ಮಾತನಾಡಿದರು. ಎಸ್ಪಿ ಪೃಥ್ವಿಕ್ ಶಂಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಕ್ರೀಡಾಕೂಟದ ಮಾಹಿತಿ ಹಂಚಿಕೊಂಡರು. ಹೆಚ್ಚುವರಿ ಎಸ್ಪಿ ಧರಣೇಶ ಸೇರಿದಂತೆ ಮುಂತಾದವರಿದ್ದರು. ಆಪ್ತ ಸಹಾಯಕ ಸಂತೋಷ ನಿರೂಪಿಸಿದರು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿ, ಸಿಬ್ಬಂದಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು.