ಇವತ್ತೇ ಚುನಾವಣೆ ಆದ್ರೆ ಲಕ್ಷ ಮತ ಅಂತರದ ಗೆಲುವು: ಕೆ.ಎಸ್‌.ಈಶ್ವರಪ್ಪ

| Published : Apr 08 2024, 01:04 AM IST

ಇವತ್ತೇ ಚುನಾವಣೆ ಆದ್ರೆ ಲಕ್ಷ ಮತ ಅಂತರದ ಗೆಲುವು: ಕೆ.ಎಸ್‌.ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ನಗರದ ಶುಭಮಂಗಳ ಕಲ್ಯಾಣ ಮಂದಿರದ ಆವರಣದಲ್ಲಿ ರಾಷ್ಟ್ರ ಭಕ್ತರ ಬಳಗ ವತಿಯಿಂದ ಆಯೋಜಿಸಿದ್ದ ಶಿವಮೊಗ್ಗ ನಗರ ಬೂತ್ ಸಮಿತಿಯ ಕಾರ್ಯಕರ್ತರ ಸಮಾವೇಶದಲ್ಲಿ ಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇವತ್ತೇ ಚುನಾವಣೆ ನಡೆದರೆ ಕನಿಷ್ಠ ಒಂದು ಲಕ್ಷ ಮತ ಅಂತರದಿಂದ ನಾನು ಗೆಲ್ಲಲಿದ್ದೇನೆ. ಇನ್ನೂ ಸಮಯ ಇದೆ ಚುನಾವಣೆ ಫಲಿತಾಂಶದಲ್ಲಿ ಎರಡು ಲಕ್ಷ ಮತ ಅಂತರದಿಂದ ಗೆಲ್ಲಿಸಿ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.

ನಗರದ ಶುಭಮಂಗಳ ಕಲ್ಯಾಣ ಮಂದಿರದ ಆವರಣದಲ್ಲಿ ಭಾನುವಾರ ರಾಷ್ಟ್ರ ಭಕ್ತರ ಬಳಗ ವತಿಯಿಂದ ಆಯೋಜಿಸಿದ್ದ ಶಿವಮೊಗ್ಗ ನಗರ ಬೂತ್ ಸಮಿತಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ, ಕೇವಲ ನೀವು ಮಾತ್ರ ನನಗೆ ಓಟು ಹಾಕಿದರೆ ಸಾಲದು, ನಿಮ್ಮ ಬೂತ್ ಓಪನ್ ಆದಾಗ ರಾಘವೇಂದ್ರಗಿಂತ ಹೆಚ್ಚು ಓಟು ನನಗೆ ಬರಬೇಕು ಎಂದರು.

ಯುಗಾದಿ ಹಬ್ಬದಲ್ಲಿ ದೇವರಿಗೆ ಹೂ ಹಾಕುವ ಸಮಯದಲ್ಲಿ ಅನ್ಯಾಯವಾಗಿರುವ ಈಶ್ವರಪ್ಪಗೆ ನ್ಯಾಯ ಕೊಡಪ್ಪ ಎಂದು ಕೇಳಿಕೊಳ್ಳಿ. ಧರ್ಮದ ಪರವಾಗಿ ಹೋರಾಟ ಮಾಡುತ್ತಿರುವ ನನ್ನ ಹೋರಾಟಕ್ಕೆ ಸರಿಯಾದ ನ್ಯಾಯವನ್ನು ಮತದಾರರು ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.

ಬೈಂದೂರಿನಲ್ಲಿ ಈ ಬಾರಿ ನನ್ನ ಗೆಲ್ಲಿಸಲು ಹಿಂದು ಸಂಘಟನೆಯವರು ಗೆಲ್ಲುವವರೆಗೂ ನನ್ನ ಜೊತೆ ಇರುತ್ತೇವೆ ಎಂದಿದ್ದಾರೆ.

ನಾನು ಅನ್ಯಾಯ ಮಾಡಿದ್ದರೆ ನನ್ನ ಮಕ್ಕಳನ್ನು ದೇವರು ಹಾಳು ಮಾಡಲಿ. ಸಿ.ಟಿ.ರವಿ, ಪ್ರತಾಪ್ ಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್ ಎಲ್ಲಾ ಹಿಂದೂ ನಾಯಕರನ್ನು ಪಕ್ಕಕ್ಕೆ ಸರಿಸಿದರು. ರಾಜ್ಯದಲ್ಲಿ ಹಿಂದುತ್ವ ಉಳಿಯಬೇಕು ಎಂದು ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಹಿಂದುತ್ವ ಉಳಿಸಲು ನನಗೆ ಬೆಂಬಲಿಸಿ ಎಂದು ಮನವಿ ಮಾಡಿದರು.

ಎಲ್ಲಾ ಸಮಾಜಕ್ಕೆ ಅನುದಾನ ಕೊಟ್ಟಿದ್ದೇನೆ. ಯಾವ ಜನ್ಮದಲ್ಲಿ‌ ನಿಮ್ಮ ಮಕ್ಕಳಾಗಿ ಹುಟ್ಟಿದ್ದೇನೋ ಗೊತ್ತಿಲ್ಲ. ಈ ಜನ್ಮದಲ್ಲಿ ಅನುದಾನ ಕೊಡುವ ಮೂಲಕ ಋಣ ತೀರಿಸಿದ್ದೇನೆ. ಜಿಲ್ಲೆಯಲ್ಲಿ ಜೆಡಿಎಸ್ ಹೆಸರಿಗೆ ಮಾತ್ರ ಬಿಜೆಪಿ ಜೊತೆ ಇದೆ. ಅವರೆಲ್ಲಾ ದೊಡ್ಡ ಸಂಖ್ಯೆಯಲ್ಲಿ ನನಗೆ ಬೆಂಬಲ ಸೂಚಿಸಿದ್ದಾರೆ ಎಂದರು.

ಮಾ‌.19ಕ್ಕೆ ನನ್ನ ಸ್ಪರ್ಧೆಗೆ ಗುರುತು ಬರಲಿದೆ. ಎಲ್ಲಾ ಲಿಂಗಾಯತರು ನಮ್ಮ ಸಮಾಜಕ್ಕೆ ಅನುಕೂಲ ಮಾಡಿ ಕೊಟ್ಟಿರುವ ಈಶ್ವರಪ್ಪಗೆ ಓಟು ಕೊಡುತ್ತೇವೆ ಎಂದಿದ್ದಾರೆ. ಈ ಬಾರಿ ಲೋಕಸಭಾ ಕ್ಷೇತ್ರದ ಎಲ್ಲ ಕಡೆ ಈಶ್ವರಪ್ಪ ಗೆಲ್ಲಿಸಬೇಕು ಎಂದು ಮಾತನಾಡುತ್ತಿದ್ದಾರೆ. ನ್ಯಾಯ ಹಾಗೂ ಧರ್ಮಕ್ಕೂ ಜಯ ಸಿಗಬೇಕು. ಈ ಬಾರಿ ದುಡ್ಡಿನ ಚುನಾವಣೆನೋ , ಧರ್ಮದ ಚುನಾವಣೆನೋ ನೋಡೋಣ ಎಂದು ಹೇಳಿದರು.

ಮಾ.12ಕ್ಕೆ ನಾಮ ಪತ್ರ ಸಲ್ಲಿಸಲಿದ್ದೇನೆ. ಅಂದು ರಾಮಣ್ಣ ಶ್ರೇಷ್ಠಿ ಪಾರ್ಕ್‌ ಗಣಪತಿ ಪೂಜೆ ಮಾಡಿ ಮೆರವಣಿಗೆ ಮಾಡಲಿದ್ದೇನೆ. ಗಣಪತಿ ಧರ್ಮಕ್ಕೆ ಜಯ ಸಿಗಲಿ‌, ಈಶ್ವರಪ್ಪ ಗೆಲ್ಲಲಿ ಎಂದು ಆಶೀರ್ವಾದ ಮಾಡುತ್ತಾನೆ ಎಂದರು.

ಸಮಾವೇಶದಲ್ಲಿ ಮಾಜಿ ಸಚಿವ ಗೂಳಿ ಹಟ್ಟಿ ಶೇಖರ್‌ ಮಾತನಾಡಿ, ಶಿವಮೊಗ್ಗ ಜಿಲ್ಲೆ ನಗರ ಸೇರಿ ರಾಜ್ಯದ ಎಲ್ಲಾ ಗ್ರಾಮಗಳ ಅಭಿವೃದ್ಧಿ ಮಾಡಿದ್ದಾರೆ. ಅನೇಕ ಸಮಾಜದ ಹಿಂದುಳಿದ ವರ್ಗಗಳ ಮಠಗಳಿಗೆ ನೆರವಾಗಿದ್ದಾರೆ. ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಯಾವುದೇ ಜಾತಿಗೆ ಸೀಮಿತವಾಗಿಲ್ಲ ಎಂದರು.

ಎಲ್ಲಾ ಸಮಾಜದ ಅಭಿವೃದ್ಧಿಗೆ ಕೋಡಿಗಟ್ಟಲೆ ಅನುದಾನ ನೀಡಿದ್ದಾರೆ. ಮೋದಿಯವರು ಪ್ರಧಾನಿಯಾಗಿ ಮುಂದುವರೆಯಲು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಬೇರೆಯವರು ಜಾತಿಗೆ ಅಂಟಿಕೊಂಡಿದ್ದಾರೆ. ಆದರೆ, ಈಶ್ವರಪ್ಪ ಎಲ್ಲಾ ಜಾತಿ, ಧರ್ಮಗಳಿಗೆ ನೆರವಾಗಿದ್ದಾರೆ. ಮಾ.12ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ನೀವೆಲ್ಲರರೂ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ. ನಾಮಪತ್ರ ಹಿಂಪಡೆಯುವ ದಿನಾಂಕ ನಂತರ ಬೇರೆ ಪಕ್ಷದವರು ಈಶ್ವರಪ್ಪ ಜೊತೆಗೆ ಬರಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಈಶ್ವರಪ್ಪರವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಸಮಾವೇಶದಲ್ಲಿ ಶಿವಮೊಗ್ಗ ನಗರದ 284 ಬೂತ್‌ ಗಳಿಂದ ಕಾರ್ಯಕರ್ತರು ಆಗಮಿಸಿದ್ದರು. ಈ ಪೈಕಿ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು.

ಮುಕುಡಪ್ಪ, ಮಹಾಲಿಂಗ ಶಾಸ್ತ್ರಿ, ಇ.ವಿಶ್ವಾಸ್‌ ಶಂಕರ್‌ ಗನ್ನಿ, ಲತಾ ಗಣೇಶ್‌, ಆರತಿ ಅ.ಮ ಪ್ರಕಾಶ್‌, ಲಕ್ಷ್ಮಿ ಶಂಕರನಾಯ್ಕ್‌, ಭೂಪಾಲ್‌, ಸುವರ್ಣ ಶಂಕರ್‌ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.