ಹೊಸಕೋಟೆ: ತಾಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮದಲ್ಲಿಂದು ಶ್ರೀ ರಾಮೇಶ್ವರಸ್ವಾಮಿ ಶ್ರೀ ಸಿದ್ದೇಶ್ವರಸ್ವಾಮಿ ದೊಡ್ಡ ದ್ಯಾವರ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಹೇಳಿದರು.
ತಾಲೂಕಿನಲ್ಲೆ ಅತೀ ಹೆಚ್ಚು ಕುರುಬ ಸಮುದಾಯ ಸೇರುವ ಜಾತ್ರೆ ಇದಾಗಿದೆ. ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆಯಿದೆ. 40 ಎಕರೆ ಜಾಗದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಖ್ಯಮಂತ್ರಿಗಳು ಬಂದಾಗ ಯಾರು ನೂಕುನುಗ್ಗಲು ಮಾಡಬಾರದು, ವಿಶಾಲವಾದ ವೇದಿಕೆ ಪಕ್ಕದಲ್ಲಿ ಹಾಗೂ ಒಳಗಡೆ ಟಿವಿ ಪರದೆಗಳು ಅಳವಡಿಸಲಾಗಿದೆ. ಅದರಲ್ಲಿ ವೀಕ್ಷಿಸಬಹುದು. ಕಾರ್ಯಕ್ರಮದಲ್ಲಿ ಎಲ್ಲಾ ಕುಲಬಾಂಧವರು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮ ಯಶ್ವಸಿಗೊಳಿಸಬೇಕೆಂದು ತಿಳಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು 12 ಗಂಟೆಗೆ ತಾವರೆಕೆರೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈಗಾಗಲೆ ಹೊಸಕೋಟೆಯಿಂದ ತಾವರೆಕೆರೆವರೆಗೂ ಕೋಲಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಅಭಿಮಾನಿಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಾಗತಕ್ಕೆ ಸಿದ್ದವಾಗಿವೆ.
ಇದೇ ವೇಳೆ ಸಚಿವ ಸುರೇಶ್ ಜತೆಯಲ್ಲಿ ಡಿವೈಎಸ್‌ಪಿ ಮಲ್ಲೇಶ್, ಡಿಎಆರ್ ಮಹೇಶ್, ಸಂಚಾರ ಇನ್ಸ್‌ಪೆಕ್ಟರ್ ಶ್ರೀಕಂಠಯ್ಯ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಪರಿಶೀಲಿಸಿದರು.ರಥೋತ್ಸವದ ಪ್ರಯುಕ್ತ ಶಾಸಕ ಶರತ್ ಬಚ್ಚೇಗೌಡರು, ಕೋಲಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರಿಂದ ದೇವಾಲಯದವರೆಗಿನ ರಸ್ತೆಯನ್ನು 1.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ಡಾಂಬರೀಕರಣ ಮಾಡಿಸಿದ್ದಾರೆ.
ಫೋಟೋ: 4 ಹೆಚ್‌ಎಸ್‌ಕೆ 2 ಮತ್ತು 3
2: ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಶ್ರೀ ರಾಮೇಶ್ವರಸ್ವಾಮಿ ಶ್ರೀ ಸಿದ್ದೇಶ್ವರಸ್ವಾಮಿ ದೊಡ್ಡ ದ್ಯಾವರ ಜಾತ್ರಾ ಮಹೋತ್ಸವದ ಸಿದ್ದತೆಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಎಸ್.ಸುರೇಶ್ ಪರಿಶೀಲಿಸಿದರು.
3: ತಾವರೆಕೆರೆ ಗ್ರಾಮದಲ್ಲಿರುವ ಶ್ರೀರಾಮೇಶ್ವರ, ಸಿದ್ದೇಶ್ವರ ಸ್ವಾಮಿ ದೇವಾಲಯ.