ಸಾರಾಂಶ
- ಸುಖ ಸಂತೋಷವನ್ನು ನಾವು ನಮ್ಮೊಳಗೆ ಹುಡುಕಬೇಕು । ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಗುರುವಂದನೆ ಕಾರ್ಯಕ್ರಮ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇಂದು ಶಿಕ್ಷಣದ ಪರಿಕಲ್ಪನೆ ಬದಲಾಗಿದೆ. ಹಿಂದೆ ಶಿಕ್ಷಕರು ನಮಗೆ ಜ್ಞಾನವನ್ನು ಕೊಡುತ್ತಿದ್ದರು. ಆದರೆ, ಈಗ ಜ್ಞಾನ ಅವರ ಬಳಿ ಇಲ್ಲ, ಅದು ಮೊಬೈಲ್ ಗಳಲ್ಲಿ ಗೂಗಲ್ ನಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತಿದೆ ಎಂದು ಹರಟೆ ಖ್ಯಾತಿಯ ಪ್ರೊ. ಎಂ. ಕೃಷ್ಣೇಗೌಡ ವಿಷಾಧ ವ್ಯಕ್ತಪಡಿಸಿದರು.
ನಗರದ ಎಂಇಎಸ್‌ನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಉಳಿಯ ಬೇಕಾದರೆ ಅದಕ್ಕಿಂತ ಹೆಚ್ಚಿನದನ್ನೇನಾದರೂ ಕೊಡಬೇಕು. ತಮ್ಮ ಜ್ಞಾನವನ್ನು ಬೋಧನಾ ಸಾಮರ್ಥ್ಯದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಇಲ್ಲದಿದ್ದರೆ ಉಳಿಗಾಲವಿಲ್ಲ ಕಿವಿಮಾತು ಹೇಳಿದರು.ಆಧುನಿಕತೆ ಮತ್ತು ಹೊಸ ಹೊಸ ತಂತ್ರಜ್ಞಾನಗಳಿಂದಾಗಿ ಪೇಪರ್ ರಹಿತ ವ್ಯವಹಾರದ ರೀತಿಯಲ್ಲೇ ಇನ್ನು ಕೆಲವೇ ವರ್ಷಗಳಲ್ಲಿ ಶಿಕ್ಷಕ ರಹಿತ ತರಗತಿಗಳು ಅಸ್ತಿತ್ವಕ್ಕೆ ಬಂದರೆ ಆಶ್ಚರ್ಯವಿಲ್ಲ. ಸರ್ಕಾರದ ಮನಸ್ಥಿತಿ ಆ ರೀತಿ ಇದೆ. ಹಾಗಾಗಬಾರದು ತಮ್ಮ ಅಸ್ತಿತ್ವ ಉಳಿಯಬೇಕು ಎಂದರೆ ಶಿಕ್ಷಕರು ವರ್ಚುವಲ್ ತರಗತಿಗಳಿಗಿಂತ ನಾವು ಪಾಠ ಮಾಡುವುದೇ ಒಳ್ಳೆಯದು ಎಂಬುದನ್ನು ಖುದ್ದು ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಅವರಿಗೆ ಭವಿಷ್ಯವಿಲ್ಲ ಎಂದು ಎಚ್ಚರಿಸಿದರು.
ಶಿಕ್ಷಕರ ದಿನಾಚರಣೆ ಶಿಕ್ಷಕರ ಆತ್ಮಾವಲೋಕನದ ದಿನ. ನಾವು ಎಲ್ಲಿ ನಿಂತಿದ್ದೇವೆ ಎಂದು ಶಿಕ್ಷಕರು ನೋಡಿಕೊಳ್ಳಬೇಕು. ಇಲ್ಲದಿದ್ದರೆ ಈ ಬದುಕಿಗೆ ಅರ್ಥವಿರುವುದಿಲ್ಲ. ನಿವೃತ್ತಿಯ ನಂತರ ಸಂತೋಷವಾಗಿ ಇರಲಾಗುವುದಿಲ್ಲ ಎಂದು ಕಿವಿಮಾತು ಹೇಳಿದರು.ಸುಖ ಸಂತೋಷವನ್ನು ನಾವು ನಮ್ಮೊಳಗೆ ಹುಡುಕಬೇಕು. ಅದು ಹೊರಗಡೆ ಎಲ್ಲೂ ಸಿಗುವುದಿಲ್ಲ ಸುಖ ಸಂತೋಷವನ್ನು ಇಂದು ನಾವು ನಮ್ಮೊಳಗೆ ಬಿಟ್ಟು ಹೊರಗೆ ಎಲ್ಲಾ ಕಡೆ ವ್ಯರ್ಥವಾಗಿ ಹುಡುಕುತ್ತಿದ್ದೇವೆ. ನಾವು ನಮ್ಮ ಒಳಗನ್ನು ಸಂಪನ್ನಗೊಳಿಸಿಕೊಳ್ಳದಿದ್ದರೆ ಸಮೃದ್ಧ ಗೊಳಿಸಿಕೊಳ್ಳದಿದ್ದರೆ ನಮ್ಮ ಹೊರಗಿನ ಆಟ ಹೆಚ್ಚು ದಿನ ನಡೆಯುವುದಿಲ್ಲ ಎಂದು ಹೇಳಿದರು.
ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಡಿ.ಎಲ್. ವಿಜಯಕುಮಾರ್ ಮಾತನಾಡಿ, ತಮ್ಮ ಸಂಸ್ಥೆಗೆ ಮತ್ತು ಮಕ್ಕಳ ಭವಿಷ್ಯಕ್ಕಾಗಿ ನಿರಂತರವಾಗಿ ದುಡಿದಿರುವವರಿಗೆ ಗುರು ನಮನ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಎನ್. ಕೇಶವಮೂರ್ತಿ, ಶಿಕ್ಷಕರು ಸಮಾಜದ ಎರಡು ಕಣ್ಣುಗಳು. ದೇಶ ಮುಂದುವರಿಯಬೇಕಾದರೆ ಅವರ ಪಾತ್ರ ಬಹಳ ಮುಖ್ಯ ಎಂದರು.ಇದೇ ವೇಳೆ ಸಂಸ್ಥೆಯಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ 25 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.ಮಲೆನಾಡು ವಿದ್ಯಾಸಂಸ್ಥೆ ಉಪಾಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ, ರಾಧಾ ಸುಂದರೇಶ್, ಸಹ ಕಾರ್ಯದರ್ಶಿ ಶಂಕರನಾರಾಯಣ ಭಟ್, ಕಾರ್ಯಕಾರಿ ಮಂಡಳಿ ಸದಸ್ಯೆ ಜಯಶ್ರೀ ಜೋಶಿ, ಶೈಕ್ಷಣಿಕ ಸಲಹೆಗಾರ ಕೆ.ಎನ್. ಮಂಜುನಾಥ ಭಟ್, ಕಚೇರಿ ವ್ಯವಸ್ಥಾಪಕಿ ಶ್ರೀ ಲಕ್ಷ್ಮಿ, ಶಿಕ್ಷಕಿ ಎನ್. ರೂಪ ಉಪಸ್ಥಿತರಿದ್ದರು. 28 ಕೆಸಿಕೆಎಂ 1ಚಿಕ್ಕಮಗಳೂರಿನ ಎಂಇಎಸ್‌ನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಗುರುವಂದನೆ ಕಾರ್ಯಕ್ರಮವನ್ನು ಹರಟೆ ಖ್ಯಾತಿಯ ಪ್ರೊ ಎಂ. ಕೃಷ್ಣೇಗೌಡ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಎನ್. ಕೇಶವಮೂರ್ತಿ, ಡಾ. ಡಿ.ಎಲ್. ವಿಜಯಕುಮಾರ್ ಇದ್ದರು.