ಕವಿಗೋಷ್ಠಿ, ನೆಲಮೂಲ ಸಂಸ್ಕೃತಿ, ಬಯಲಾಟ ಪರಂಪರೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತ ವಿಚಾರಗೋಷ್ಠಿಗಳು ನಡೆಯಲಿವೆ

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಕೊಪ್ಪಳ ಜಿಲ್ಲೆಯ ಸಾಹಿತ್ಯ,ಸಂಸ್ಕೃತಿ ಹಾಗೂ ಕನ್ನಡ ಚಿಂತನೆಗೆ ಹೊಸ ಆಯಾಮ ನೀಡಲಿರುವ ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಜು. 25 ಮತ್ತು 26ರಂದು ಕುಷ್ಟಗಿ ತಾಲೂಕಿನ ಹಿರೇಮನ್ನಾಪುರದ ಶ್ರೀಗವಿಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಎರಡು ದಿನಗಳ ಈ ಅಕ್ಷರ ಜಾತ್ರೆಯಲ್ಲಿ ಖ್ಯಾತ ಸಾಹಿತಿ, ಸಂಶೋಧಕರು, ಜನಪ್ರತಿನಿಧಿ, ಕಲಾವಿದರು ಹಾಗೂ ಸಾವಿರಾರು ಕನ್ನಡಾಭಿಮಾನಿಗಳು ಭಾಗವಹಿಸಲಿದ್ದು, ಹಿರೇಮನ್ನಾಪುರ ಅಕ್ಷರಗಳ ರಾಜಧಾನಿಯಾಗಿ ಕಂಗೊಳಿಸಲಿದೆ.

ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೋಲಿಸಪಾಟೀಲ ಪರಿಷತ್‌ ಧ್ವಜಾರೋಹಣ, ಶಾಸಕ ದೊಡ್ಡನಗೌಡ ಪಾಟೀಲ ರಾಷ್ಟ್ರಧ್ವಜಾರೋಹಣ, ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ಕನ್ನಡ ಧ್ವಜಾರೋಹಣ ಮಾಡುವವರು.

ನಂತರ ಕಲಾತಂಡ, ಶಾಲಾ ವಿದ್ಯಾರ್ಥಿ, ಸಂಘಟನೆ, ಗ್ರಾಮಸ್ಥರ ಸಮ್ಮುಖದಲ್ಲಿ ಸಮ್ಮೇಳನಾಧ್ಯಕ್ಷ ಶೇಖರಗೌಡ ಮಾಲಿಪಾಟೀಲರ ಮೆರವಣಿಗೆ ಹಿರೇಮನ್ನಾಪೂರು ಗ್ರಾಮದ ಪ್ರಾಥಮಿಕ ಕೃಷಿಕ ಪತ್ತಿನ ಸಹಕಾರ ಸಂಘದಿಂದ ಪ್ರಾರಂಭವಾಗಿ ಮಾರುತೇಶ್ವರ ದೇವಸ್ಥಾನ, ದುರ್ಗಾದೇವಿ ದೇವಸ್ಥಾನ, ಪ್ರಮುಖ ಬೀದಿಗಳ ಮೂಲಕ ಗವಿಸಿದ್ಧೇಶ್ವರ ಶಾಲಾ ಆವರಣದಲ್ಲಿರುವ ಮುಖ್ಯ ವೇದಿಕೆ ತಲುಪಲಿದೆ. ಈ ಮೆರವಣಿಗೆಯಲ್ಲಿ ವಿಶೇಷವಾಗಿ 200 ಮೀಟರ್‌ ಕನ್ನಡ ಧ್ವಜ ಮೆರವಣಿಗೆ ನಡೆಯಲಿದೆ.

ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ಸಾಹಿತಿ ಎಲ್.ಹನುಮಂತಯ್ಯ ಸಮ್ಮೇಳನ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ನಾಡದೇವತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ ಪ್ರಾಸ್ತಾವಿಕ ಮಾತನಾಡಲಿದ್ದು. ಅಂತಾರಾಷ್ಟ್ರೀಯ ವಿಜ್ಞಾನಿ ಹಾಗೂ ಸಾಹಿತಿ ಡಾ.ಉದಯಶಂಕರ ಪುರಾಣಿಕ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಸ್ವಾಗತ ಭಾಷಣ ಮಾಡಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಲಿಂಗಾರೆಡ್ಡಿ ಆಲೂರು ಧ್ವಜ ಹಸ್ತಾಂತರ ಮಾಡಲಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಪರಮಶಿವಮೂರ್ತಿ ಸಮ್ಮೇಳನಾಧ್ಯಕ್ಷರ ನುಡಿಹೊತ್ತಿಗೆ ಬಿಡುಗಡೆ ಮಾಡಲಿದ್ದು, ಹಿರಿಯ ಪತ್ರಕರ್ತ ರವೀಂದ್ರ ಬಾಕಳೆ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರಗೌಡ ಮಾಲಿಪಾಟೀಲ ಅಧ್ಯಕ್ಷೀಯ ಭಾಷಣ ಮಾಡಲಿದ್ದು, ಪ್ರೊ.ಎಸ್.ಜಿ. ಸಿದ್ದರಾಮಯ್ಯ ವಿವಿಧ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.

ಪುಸ್ತಕ ಮಳಿಗೆಯನ್ನು ಸಂಸದ ರಾಜಶೇಖರ ಹಿಟ್ನಾಳ, ಮಾರಾಟ ಮಳಿಗೆಯನ್ನು ಶಾಸಕ ಬಸವರಾಜ ರಾಯರಡ್ಡಿ, ಛಾಯಾಚಿತ್ರ ಪ್ರದರ್ಶನವನ್ನು ಶಾಸಕ ಶಿವರಾಜ ತಂಗಡಗಿ ಹಾಗೂ ರಕ್ತದಾನ ಶಿಬಿರವನ್ನು ಶಾಸಕ ರಾಘವೇಂದ್ರ ಹಿಟ್ನಾಳ ಉದ್ಘಾಟಿಸಲಿದ್ದಾರೆ.

ವೈಚಾರಿಕ ಗೋಷ್ಠಿಗಳ ಮೆರುಗು: ಎರಡು ದಿನಗಳ ಸಮ್ಮೇಳನದಲ್ಲಿ ಸಂಕೀರ್ಣ ಗೋಷ್ಠಿ, ಸಮಕಾಲೀನ ಸವಾಲುಗಳು, ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕೃತಿ, ಕವಿಗೋಷ್ಠಿ, ನೆಲಮೂಲ ಸಂಸ್ಕೃತಿ, ಬಯಲಾಟ ಪರಂಪರೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತ ವಿಚಾರಗೋಷ್ಠಿಗಳು ನಡೆಯಲಿವೆ. ಖ್ಯಾತ ಸಾಹಿತಿಗಳು, ಸಂಶೋಧಕರು ಮತ್ತು ಚಿಂತಕರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.

ಪುಸ್ತಕಗಳ ಲೋಕಾರ್ಪಣೆ: ಸಮ್ಮೇಳನದಲ್ಲಿ ರವೀಂದ್ರ ಬಾಕಳೆ, ಲಕ್ಷ್ಮೀದೇವಿ ಪತ್ತಾರ, ಅಮರೇಗೌಡ ಪಾಟೀಲ ಜಾಲಿಹಾಳ, ದಿ. ಪಿಡ್ಡಪ್ಪ ಮಾಸ್ತರ ಹಿರೇಮನ್ನಾಪೂರ, ಶಿವಕವಿ ಹುಲ್ಲೂರು, ಮಹಾದೇವಪ್ಪ ವಿಶ್ವಕರ್ಮ, ಶಿವನಗೌಡ ಪೊಲೀಸ್ ಪಾಟೀಲ, ಸಂಗಮೇಶ ಮುಶಿಗೇರಿ, ಹ.ಯ. ಈಟಿಯವರ, ಎಸ್.ವಿ. ಬೆಳ್ಳಾಳ್ಯ, ಮಹೇಶ ಮನ್ನಾಪೂರ ಹಾಗೂ ಅನ್ನಪೂರ್ಣ ಮನ್ನಾಪೂರ ಅವರ ಕೃತಿ ಲೋಕಾರ್ಪಣೆಯಾಗಲಿವೆ. ಎರಡನೇ ದಿನ ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಲಿವೆ.

ಸಮಾರೋಪಕ್ಕೆ ಸಿದ್ದು ಯಾಪಲಪರ್ವಿ: ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಸಿದ್ದು ಯಾಪಲಪರ್ವಿ ಸಮಾರೋಪ ನುಡಿ ನೀಡಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಸಾಹಿತ್ಯ, ಸಂಸ್ಕೃತಿ, ಜನಪದ, ಕಲೆ, ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮವಾಗಿರುವ ಈ ಎರಡು ದಿನಗಳ ಅಕ್ಷರ ಜಾತ್ರೆ ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮತ್ತೊಂದು ಸ್ಮರಣೀಯ ಅಧ್ಯಾಯವಾಗಿ ದಾಖಲಾಗುವ ನಿರೀಕ್ಷೆ ಮೂಡಿಸಿದೆ.

ಗಣ್ಯರ ದಂಡೇ ಭಾಗವಹಿಸುವಿಕೆ: ಸಮ್ಮೇಳನದಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ, ಕಾಡಾ ನಿಗಮ ಅಧ್ಯಕ್ಷ ಹಸನಸಾಬ್‌ ದೋಟಿಹಾಳ, ವಿಪ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪೂರ, ಶಶಿಲ್ ಜಿ.ನಮೋಶಿ, ಡಾ.ಚಂದ್ರಶೇಖರ ಬಿ. ಪಾಟೀಲ, ಹೇಮಲತಾ ನಾಯಕ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ, ಕೆ.ಶರಣಪ್ಪ, ಕಸಾಪ ಆಡಳಿತಾಧಿಕಾರಿ ದಯಾನಂದ, ಸಿ.ವಿ.ಚಂದ್ರಶೇಖರ, ಶರಣು ತಳ್ಳಿಕೇರಿ, ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ರಾಮ್ ಎಲ್. ಅರಸಿದ್ದಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗಣ್ಯರು ಪಾಲ್ಗೊಳ್ಳಲಿದ್ದಾರೆ.