ಸಾರಾಂಶ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ, ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ, ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆಂದು ಪುರಸಭೆ ಅಧ್ಯಕ್ಷೆ ವೀಣಾ ಜಗದೀಶ ಕವಟಗಿಮಠ ಹೇಳಿದರು.ಇಲ್ಲಿನ ರವಳನಾಥ ಹೌಸಿಂಗ್ ಸಹಕಾರಿ ಸಂಸ್ಥೆ ಸಭಾಗೃಹದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅರಿಷಿಣ ಕುಂಕುಮ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರ ಕೊಡುಗೆ ಸ್ಮರಿಸಲು ಈ ದಿನ ಮೀಸಲಿರಿಸಲಾಗಿದೆಂದರು. ಮುಖ್ಯ ಅತಿಥಿಗಳಾಗಿ ಡಿಡಿಪಿಐ ಕಚೇರಿ ಡಿವೈಪಿಸಿ ರೇವತಿ ಮಠದ ಮಾತನಾಡಿ, ಪಾಲಕರು ತಮ್ಮ ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ನೀಡುವುದರ ಮೂಲಕ ಅವಳ ಶಿಕ್ಷಣಕ್ಕೆ ಅಡ್ಡಿಯಾಗದೇ ಕಲಿಯಲು ಉತ್ತೇಜನ ನೀಡಬೇಕು. ಅಂದಾಗ ಮಾತ್ರ ಬಾಲ್ಯವಿವಾಹಗಳನ್ನು ತಡೆಯಲು ಸಾಧ್ಯ ಎಂದರು.
ಪ್ರತಿ ಕುಟುಂಬ, ದೇಶದ ದೊಡ್ಡ ಸೈನಿಕ ಶಕ್ತಿ ಎಂದೇ ಮಹಿಳೆಯರನ್ನು ಬಣ್ಣಿಸಲಾಗುತ್ತದೆ. ಅವರ ಕೊಡುಗೆಗಳನ್ನು ನೆನೆದು ಸ್ಮರಿಸುವುದರ ಜೊತೆಗೆ ಅವಳಿಗೆ ಹಬ್ಬದ ಸಂಭ್ರಮ ವಾತಾವರಣ ನಿರ್ಮಿಸಿಕೊಡಬೇಕಾದ ಅವಶ್ಯಕತೆ ಇದೆ ಎಂದರು. ಇಂದು ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವುದರಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಸರ್ಕಾರ ಅವಳಿಗೆ ಶೇ.35ರಷ್ಟು ಮೀಸಲಾತಿ ನೀಡಿದ್ದು ತಮಗೆ ಸಿಕ್ಕ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕೆಂದರು.ಸಹಕಾರಿ ಉಪಾಧ್ಯಕ್ಷತೆ ಮೀನಾ ಬಸವರಾಜ ರಿಂಗಾನೆ ಹಾಗೂ ಸಂಸ್ಥಾಪಕ ಎಂ.ಎಲ್.ಚೌಗಲೆ ಮಾತನಾಡಿದರು. ಶೋಭಾ ಯಳವತ್ತಿಮಠ, ಸುನೀತಾ ಮಾಳಿ, ಕರ್ನಾಟಕ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಾಂಭವಿ ಅಶ್ವತಪುರ, ಪ್ರಶಾಂತ ವರದಾಯಿ ಇದ್ದರು. ಚಿಕ್ಕೋಡಿ ಶಾಖೆ ಸಲಹೆಗಾರರಾದ ಜಯಶ್ರೀ ನಾಗರಳ್ಳಿ ಸ್ವಾಗತಿಸಿ, ಮಾತನಾಡಿದರು. ಶ್ರುತಿ ಅರಬೋಲೆ ನಿರೂಪಿಸಿ, ಕವಿತಾ ಧರಿಗೌಡರ ವಂದಿಸಿದರು.