ಇಂದು ಯಾದಗಿರಿಗೆ ಸಚಿವ ವಿ. ಸೋಮಣ್ಣ

| Published : Sep 03 2024, 01:31 AM IST

ಸಾರಾಂಶ

Today Yadagiri Minister V. Somanna

- ಕಡೇಚೂರು ಬಾಡಿಯಾಳ ರೈಲ್ವೆ ಕೋಚ್ ಫ್ಯಾಕ್ಟರಿ ವೀಕ್ಷಣೆ । ಜೆಡಿಎಸ್‌ ಶಾಸಕ ಕಂದಕೂರು ಅವರಿಂದ ಅದ್ಧೂರಿ ಸನ್ಮಾನ ಆಯೋಜನೆ

--------

ಕನ್ನಡಪ್ರಭ ವಾರ್ತೆ ಯಾದಗಿರಿ

ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಮಂಗಳವಾರ ಇದೇ ಮೊದಲ ಬಾರಿಗೆ ಯಾದಗಿರಿಗೆ ಆಗಮಿಸಲಿದ್ದಾರೆ. ಸೆ.3 ಹಾಗೂ ಸೆ.4 ರಂದು ಯಾದಗಿರಿಯಲ್ಲಿ ಇಲಾಖೆಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳ ವೀಕ್ಷಿಸಿ, ಅಧಿಕಾರಿಗಳೊಡನೆ ಸಭೆ ನಡೆಸಲಿದ್ದಾರೆ.

ಇದೇ ವೇಳೆ, ಸಚಿವ ವಿ. ಸೋಮಣ್ಣ ಅವರಿಗೆ ಗುರುಮಠಕಲ್‌ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರು ಅವರ ನೇತೃತ್ವದಲ್ಲಿ ಅದ್ಧೂರಿ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ಕೇಂದ್ರ ಸಚಿವರ ಈ ಪ್ರವಾಸದಲ್ಲಿ ಜಿಲ್ಲಾ ಬಿಜೆಪಿ ತುಸು ಅಂತರ ಕಾಯ್ದುಕೊಂಡಂತಿದೆ.

ಸೆ.2 ರಂದು ರಾತ್ರಿ ಬೆಂಗಳೂರಿನಿಂದ ರೈಲು ಮೂಲಕ ಹೊರಡುವ ಸಚಿವ ವಿ. ಸೋಮಣ್ಣ, ಮೊದಲು ರಾಯಚೂರಿಗೆ ಆಗಮಿಸಲಿದ್ದಾರೆ. ಅಲ್ಲಿ ವಿವಿಧ ಕಾರ್ಯಕ್ರಮಗಳ ನಂತರ, ಸಂಜೆ ವೇಳೆ ಯಾದಗಿರಿ ಜಿಲ್ಲೆ ಗುರುಮಠಕಲ್‌ ತಾಲೂಕು ಕಡೇಚೂರು ಬಾಡಿಯಾಳ ಪ್ರದೇಶದಲ್ಲಿರುವ ರೈಲ್ವೆ ಬೋಗಿಗಳ ತಯಾರಿಕಾ ಫ್ಯಾಕ್ಟರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡುವ ಅವರು, ಸಂಜೆ ಯಾದಗಿರಿ ಮೆಡಿಕಲ್‌ ಕಾಲೇಜು ಸಮೀಪದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‌ ವತಿಯಿಂದ ಆಯೋಜಿಸಲಾಗಿರುವ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ರಾತ್ರಿ ಯಾದಗಿರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಬುಧವಾರ ಬೆಳಿಗ್ಗೆ ಜಿಲ್ಲಾ ವಾಣಿಜ್ಯ ಮಹಾಮಂಡಳಿ ಮತ್ತು ಇತರ ಸಂಘಗಳೊಂದಿಗೆ ಸಭೆ, ನಂತರ ತಡಿಬಿಡಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ, ಶಾಲೆಗಳಿಗೆ ಭೇಟಿ, ಸಂಪೂರ್ಣತಾ ಅಭಿಯಾನ ಯೋಜನೆ ಕಾರ್ಯಗಳ ವೀಕ್ಷಣೆ, ಮಧ್ಯಾಹ್ನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಯಾದಗಿರಿ ಜಿಲ್ಲಾ ಮತ್ತು ಬ್ಲಾಕ್‌ ಮಟ್ಟದ ಅಧಿಕಾರಿಗಳೊಂದಿಗೆ ಸಭೆ, ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಅಮೃತ್‌ ಭಾರತ್‌ ಯೋಜನೆಡಿ ಕಾಮಗಾರಿಗಳ ವೀಕ್ಷಣೆ ನಂತರ ರೈಲು ಮೂಲಕ ಯಾದಗಿರಿಯಿಂದ ನಿರ್ಗಮಿಸಿ, ಯಾದಗಿರಿ-ವಾಡಿ-ವಿಕಾರಾಬಾದ್-ಸಿಕಂದರಾಬಾದ್‌ ನಡುವಿನ ರೈಲ್ವೆ ವಿಭಾಗದ ವಿಂಡೋ ಟ್ರೇಲಿಂಗ್‌ ತಪಾಸಣೆ ನಡೆಸಿ, ಹೈದರಾಬಾದ್ ಮೂಲಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

-----

ಫೋಟೊ: ಸಚಿವ ವಿ. ಸೋಮಣ್ಣ