ಇಂದಿನ ಮಕ್ಕಳೇ ಭಾವಿ ಭವ್ಯ ಭಾರತದ ನಿರ್ಮಾತೃಗಳು: ರಾಮಚಂದ್ರ ಚಿತ್ರಗಾರ

| Published : Nov 29 2024, 01:05 AM IST

ಇಂದಿನ ಮಕ್ಕಳೇ ಭಾವಿ ಭವ್ಯ ಭಾರತದ ನಿರ್ಮಾತೃಗಳು: ರಾಮಚಂದ್ರ ಚಿತ್ರಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಲ್ಲಿ ಕಲಿಕೆಗೆ ಪ್ರೋತ್ಸಾಹಿಸಲು, ಉನ್ನತ ಶಿಕ್ಷಣಕ್ಕೆ ಉತ್ತೇಜಿಸಲು, ಕಲೆ, ಸಂಗೀತ, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಬೇಕು.

ಮುಂಡಗೋಡ: ಇಂದಿನ ಮಕ್ಕಳೇ ಭಾವಿ ಭವ್ಯ ಭಾರತದ ನಿರ್ಮಾತೃಗಳು. ಆದರೆ, ಮಕ್ಕಳಿಂದ ಭವ್ಯ ಭಾರತವನ್ನು ನಿರೀಕ್ಷಿಸುವ ನಾವು, ಮಕ್ಕಳಿಗೆ ಆಹ್ಲಾದಕರ ಕಲಿಕೆಯ ವಾತಾವರಣ ನಿರ್ಮಿಸುತ್ತಿದ್ದೇವೆಯೇ? ಮಕ್ಕಳು ಖುಷಿಯಿಂದ, ಭಯರಹಿತವಾಗಿ ಕಲಿಕೆಯಲ್ಲಿ ತೊಡಗಿದ್ದಾರೆಯೇ? ಕಲಿಯುವ ವಯಸ್ಸಿನಲ್ಲಿ, ಮಕ್ಕಳು ಯಾಕೆ ದುಡಿಮೆಗೆ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಜವಾಬ್ದಾರಿ ಪ್ರಜ್ಞಾವಂತ ಸಮಾಜದ ಮೇಲಿದೆ ಎಂದು ಶಿಕ್ಷಕರು ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ರಾಮಚಂದ್ರ ಚಿತ್ರಗಾರ ತಿಳಿಸಿದರು.

ಮಳಗಿ ಗ್ರಾಮದ ಇಂದಿರಾನಗರದಲ್ಲಿ ಜ್ಞಾನ ಸಮೃದ್ದಿ ಸಮುದಾಯ ಕಲಿಕಾ ಕೇಂದ್ರ, ಗ್ರಾಮ ಅಭಿವೃದ್ಧಿ ಸಮಿತಿ, ಡಾ. ಬಿ.ಆರ್. ಅಂಬೇಡ್ಕರ್ ಹಳೆಯ ವಿದ್ಯಾರ್ಥಿಗಳ ಸಂಘ, ಪಾಲಕ- ಪೋಷಕರ ಸಮಿತಿ, ಮಹಿಳಾ ಸ್ವ ಸಹಾಯ ಸಂಘಗಳು, ಗ್ರಾಮಸ್ಥರು ಮತ್ತು ಲೊಯೋಲ ವಿಕಾಸ ಕೇಂದ್ರ ಆಯೋಜಿಸಿದ್ದ ಮಕ್ಕಳಲ್ಲಿಯ ಸೃಜನಶೀಲತೆ ಅಭಿವ್ಯಕ್ತಿಯ ಬಾಲ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ಕಲಿಕೆಗೆ ಪ್ರೋತ್ಸಾಹಿಸಲು, ಉನ್ನತ ಶಿಕ್ಷಣಕ್ಕೆ ಉತ್ತೇಜಿಸಲು, ಕಲೆ, ಸಂಗೀತ, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಲು, ಕಲಿಕೆಯ ಜತೆಗೆ ಉತ್ತಮ ಮೌಲ್ಯಗಳನ್ನು ಹೊಂದುವ ಅಗತ್ಯಗಳನ್ನು ಪಾಲಕ- ಪೋಷಕರಿಗೆ ಮನವರಿಕೆ ಮಾಡಿಕೊಟ್ಟು, ಮಕ್ಕಳಲ್ಲಿಯ ಸುಪ್ತ ಪ್ರತಿಭೆಗಳನ್ನು ಬಾಲ್ಯದಲ್ಲಿಯೇ ಗುರುತಿಸಿ, ಪೋಷಿಸಲು ಪಾಲಕರಿಗೆ ತಿಳಿಸಿದರು.

ಎಲ್‌ವಿಕೆ ವಸತಿನಿಲಯಗಳ ಮೇಲ್ವಿಚಾರಕ ದಿಲೀಪ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ಗುರುತಿಸುವಿಕೆ ಮತ್ತು ಅಭಿವ್ಯಕ್ತಿಗೆ ಸೂಕ್ತ ಅವಕಾಶ ನಿರ್ಮಿಸುವ ಉದ್ದೇಶದಿಂದ ಬಾಲ ಸಮ್ಮೇಳನ ಆಯೋಜಿಸಿದ ಉದ್ದೇಶ ತಿಳಿಸಿ, ಬಾಲ ಸಮ್ಮೇಳನ ಸಂಘಟಿಸುವಲ್ಲಿ ಸಮುದಾಯದ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಕೀಲರಾದ ದೀಪ್ತಿ ಅಂಡಗಿ ಮಾತನಾಡಿದರು. ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ರೂಪಕ, ಜನಪದ ಕಲೆಯ ಅನಾವರಣ, ಪರಶುರಾಮಚರಿತೆ ನಾಟಕ, ತಾಳಿದವನು ಬಾಳಿಯಾನು ರೂಪಕ, ವಿಶೇಷ ಚೇತನ ಮಗು ಮಾನ್ಯ ಜಡೆ ಸೇರಿದಂತೆ ೧೨ ಕಲಾ ತಂಡಗಳು ಪ್ರದರ್ಶನ ಮೆಚ್ಚುಗೆ ಪಡೆದವು.

ಮಳಗಿ ಪಂಚಾಯಿತಿ ಅಧ್ಯಕ್ಷೆ ಕಸ್ತೂರಿ ಪ್ರಕಾಶ ತಳವಾರ, ಎಲ್‌ವಿಕೆ ತೇಜಸ್ವಿನಿ ಬೇಗೂರ ಹಾಗೂ ಸ್ಥಳೀಯ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಯುವರಾಜ ಆರ್.ಕೆ. ನಿರೂಪಿಸಿದರು. ಎಲ್‌ವಿಕೆ ಸಿಬ್ಬಂದಿ ದೀಪಾ ಕೋಳೂರ ಸ್ವಾಗತಿಸಿದರು. ಕಲಿಕಾ ಕೇಂದ್ರದ ಶಿಕ್ಷಕಿ ಉಷಾ ವಾಲ್ಮೀಕಿ ವಂದಿಸಿದರು.