ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಇಂದಿನ ರಾಜಕೀಯ ವ್ಯವಸ್ಥೆ ದುಃಖ ತರಿಸಿದೆ, ವಿಕೇಂದ್ರೀಕರಣ ರಾಜಕಾರಣ ಮರೆಯಾಗಿದ್ದು, ಸರ್ವಾಧಿಕಾರ ಮೆರೆಯುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದ್ದಾರೆ.ಮಡಿಕೇರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಮತ್ತು ವಿವಿಧ ರಾಜ್ಯಗಳಲ್ಲಿ ಸಂವಿಧಾನಕ್ಕೆ ಪೂರಕವಾದ ರಾಜಕಾರಣ ನಡೆಯುತ್ತಿಲ್ಲ. ಸಮಬಾಳಿನ ಪರಿಕಲ್ಪನೆ ಸಾಕಾರಗೊಳ್ಳುತ್ತಿಲ್ಲ, ಅಧಿಕಾರ ವಿಕೇಂದ್ರೀಕರಣವಾಗುತ್ತಿಲ್ಲ. ಸಮಾಜ ಭ್ರಷ್ಟಾಚಾರ ಮುಕ್ತವಾಗುತ್ತಿಲ್ಲ, ಮತ ಚಲಾವಣೆಗೂ ಮತದಾರ ಹಣ ಪಡೆಯುವ ರೀತಿಯಲ್ಲಿ ಭ್ರಷ್ಟ ವ್ಯವಸ್ಥೆ ಬೆಳೆದು ಬಿಟ್ಟಿದೆ. ಕುಟುಂಬ ರಾಜಕಾರಣಕ್ಕೆ ಒತ್ತು ನೀಡಲಾಗುತ್ತಿದೆ, ಸರ್ವಾಧಿಕಾರದ ರಾಜಕೀಯ ನಡೆಯುತ್ತಿದೆ. ಸದನದಲ್ಲಿ ವೈಯುಕ್ತಿಕ ನಿಂದನೆಯಾಗುತ್ತಿದೆ, ಹಲ್ಲೆ ಪ್ರಕರಣಗಳು ನಡೆಯುತ್ತಿದೆ ಎಂದರು.
ಇಂದಿನ ಶಿಕ್ಷಣ ವ್ಯವಸ್ಥೆ ಇದಕ್ಕೆಲ್ಲ ಮುಖ್ಯ ಕಾರಣವಾಗಿದೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಮೂಲಭೂತ ಸೌಲಭ್ಯಗಳಿಲ್ಲ. ರಾಜ್ಯದಲ್ಲಿ 60 ಸಾವಿರ ಶಿಕ್ಷಕರ ಕೊರತೆ ಇದೆ ಎಂದು ಸ್ವತಃ ಶಿಕ್ಷಣ ಸಚಿವರೇ ಹೇಳುತ್ತಿದ್ದಾರೆ. ಈ ನಡುವೆ ಕನ್ನಡ ಶಾಲೆಯ ಉದ್ಧಾರ, ಕನ್ನಡ ಕಡ್ಡಾಯ ಎಂದು ಘೋಷಣೆ ಮಾಡುತ್ತಿದ್ದಾರೆ. ಸಂಸದರು, ಶಾಸಕರ ನೇತೃತ್ವದಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ದಂದೆ ನಡೆಯುತ್ತಿದೆ ಎಂದು ಆರೋಪಿಸಿದರು.ದೇಶದ ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ ಹಕ್ಕು ನೀಡಲಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ನಮ್ಮದು. ‘ಒಂದು ದೇಶ ಒಂದು ಚುನಾವಣೆ’ ಎಂಬ ಚಿಂತನೆ ಸಾಕಾರಗೊಳ್ಳುವುದಿಲ್ಲವೆಂದು ತಿಳಿದಿದ್ದರೂ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಕೇಂದ್ರ ಇದನ್ನು ಜಾರಿಗೆ ತರುವ ಪ್ರಯತ್ನ ಮಾಡಿದೆ ಎಂದರು.
ದೆಹಲಿಯಂತೆ ಎಲ್ಲ ರಾಜ್ಯಗಳಲ್ಲೂ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿಪರ ಆಡಳಿತ ನಡೆಸಬೇಕೆನ್ನುವ ಗುರಿ ಆಮ್ ಆದ್ಮಿ ಪಾರ್ಟಿಗಿದೆ. ಆದರೆ ನಮ್ಮದು ಹಣವಿಲ್ಲದ ಜನಸಾಮಾನ್ಯರ ಪಕ್ಷವಾಗಿರುವುದರಿಂದ ಸಂಘಟನೆ ವಿಳಂಬವಾಗುತ್ತಿದೆ. ಕೊಡಗು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲೂ ಜನಜಾಗೃತಿಯ ಮೂಲಕ ಪಕ್ಷವನ್ನು ಬೆಳೆಸಿ ಸಾಮಾನ್ಯ ವ್ಯಕ್ತಿ ಕೂಡ ಶಾಸಕನಾಗಬಲ್ಲ ಎನ್ನುವುದನ್ನು ಸಾಬೀತು ಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.ಕೊಡಗಿಗೆ ಪ್ರತ್ಯೇಕ ಕ್ಷೇತ್ರ : ಕೊಡಗು ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ, ಇದೊಂದು ವಿಭಿನ್ನ ಭೌಗೋಳಿಕ ರಚನೆಯ ಜಿಲ್ಲೆಯಾಗಿರುವುದರಿಂದ ವಿಧಾನಸಭಾ ಕ್ಷೇತ್ರಗಳನ್ನು ಹೆಚ್ಚಿಸುವ ಅಗತ್ಯವಿದೆ. ಕೇವಲ ಎರಡು ಕ್ಷೇತ್ರಗಳಾದರೆ ಶಾಸಕರಾದವರಿಗೆ ನಿರ್ವಹಣೆ ಕಷ್ಟವಾಗಲಿದೆ ಮತ್ತು ಅನುದಾನದ ಕೊರತೆಯಾಗಲಿದೆ. ಲೋಕಸಭಾ ಕ್ಷೇತ್ರ ಕೂಡ ಹಿಂದೆ ಕೊಡಗು ಮಂಗಳೂರಿನೊಂದಿಗೆ ಹಂಚಿಕೊಂಡು ಇದೀಗ ಮೈಸೂರಿನೊಂದಿಗಿದೆ. ಕೊಡಗು ಜಿಲ್ಲೆಗೇ ಪ್ರತ್ಯೇಕ ಲೋಕಸಭಾ ಕ್ಷೇತ್ರ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಜಮೀನಿನ ಸಮಸ್ಯೆ ಮುಂದುವರೆದಿದೆ, ಅರಣ್ಯ ಮತ್ತು ಕೃಷಿಭೂಮಿಯ ರಕ್ಷಣೆಗಾಗಿ ಕೊಡಗಿಗೆ ಸೀಮಿತವಾಗಿ ವಿಶೇಷ ಅರಣ್ಯ ನೀತಿಯನ್ನು ಜಾರಿಗೆ ತರಬೇಕಾಗಿದೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲೂ ಆಮ್ ಆದ್ಮಿ ಪಾರ್ಟಿಯನ್ನು ಜನಜಾಗೃತಿಯ ಮೂಲಕವೇ ಬೆಳೆಸಲಾಗುವುದು. ಆ ಮೂಲಕ ಕೃಷಿಕರ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ನಡೆಸಲಾಗುವುದು ಎಂದರು.ಗೋಷ್ಠಿಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ರವಿಕುಮಾರ್, ಭೋಜಣ್ಣ ಸೋಮಯ್ಯ, ಕೊಡಗು ಜಿಲ್ಲಾಧ್ಯಕ್ಷ ಮುಕ್ಕಾಟಿರ ಅಪ್ಪಯ್ಯ ಹಾಗೂ ಕಾರ್ಯದರ್ಶಿ ಎಚ್.ಬಿ.ಪೃಥ್ವಿ ಉಪಸ್ಥಿತರಿದ್ದರು.
ಅಧಿವೇಶನದಲ್ಲಿ ಅಶ್ಲೀಲ ಪದ ಬಳಕೆ: ಖಂಡನೆಮಡಿಕೇರಿ : ಸಾಂವಿಧಾನಿಕ ಪದಗಳನ್ನೇ ಬಳಸಬೇಕೆಂದು ಸಂವಿಧಾನದಲ್ಲಿ ಇದೆ. ಅಸಂವಿಧಾನಿಕವಾಗಿ ಯಾರೂ ನಡೆದುಕೊಳ್ಳಬಾರದು. ಅಧಿವೇಶನದಲ್ಲಿ ಸ್ಪೀಕರ್ ಇರುತ್ತಾರೆ. ಯಾರೇ ವೈಯಕ್ತಿಕ ತೇಜೋವಧೆ ಮಾಡುವಂತೆ ಮಾತನಾಡಬಾರದು. ಯಾರ ವೈಯಕ್ತಿಕ ಜೀವನ ಹೇಗಾದರೂ ಇರಲಿ. ಆದರೆ ಅಧಿವೇಶನದಲ್ಲಿ ಆ ರೀತಿ ಮಾತನಾಡಿದ್ದನ್ನು ಖಂಡಿಸುತ್ತೇನೆ. ಹಾಗೆ ಮಾತನಾಡಿರುವುದಕ್ಕೆ ಕಠಿಣ ಶಿಕ್ಷೆ ಆಗಬೇಕು. ಸಿ. ಟಿ ರವಿ ಆಗಿರಲಿ, ತಿಮ್ಮ ಆಗಿರಲಿ ಯಾರೇ ಆಗಿರಲಿ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಸುವರ್ಣ ಸೌಧದಲ್ಲಿ ಪರಿಷತ್ ಸದಸ್ಯ ಸಿ.ಟಿ ರವಿ ಅಶ್ಲೀಲ ಪದಬಳಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ಸದನದ ಒಳಗೆ ನಡೆದಿರುವ ಘಟನೆ. ಸದನವನ್ನು ಮುಂದೂಡಲಾಗಿತ್ತು ಎಂದು ಸ್ಪೀಕರ್ ಹೇಳುತ್ತಾರೆ.ಆ ವೇಳೆ ಮೈಕ್ ಆಫ್ ಆಗಿತ್ತು ಎನ್ನುತ್ತಿದ್ದಾರೆ. ಹಾಗಾಗಿ ಆ ಗದ್ದಲದಲ್ಲಿ ಕೇಳಿಸಿಲ್ಲ ಎನ್ನುತ್ತಾರೆ. ಇದು ಎಷ್ಟು ಸುಳ್ಳೋ ನಿಜವೋ ಗೊತ್ತಿಲ್ಲ. ಆದರೆ ಹಾಗೆ ಮಾತನಾಡಿರುವುದು ಸತ್ಯ ಅಂತ ಸುಮಾರು ಜನರು ಹೇಳಿದ್ದಾರೆ. ದಾಖಲೆಗಳನ್ನು ಹುಡುಕುತ್ತಿದ್ದಾರೆ ಅದೇನು ಆಗುತ್ತೋ ಗೊತ್ತಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಸಂದೇಶ ಕೊಡಬೇಕು ಎಂದು ಬಂಧಿಸಿರಬಹುದು. ಆದರೆ ಬಂಧನದ ಬಳಿಕ ಮಾಡಿರುವ ಕ್ರಮಗಳು ಸರಿಯಿಲ್ಲ ಎಂದು ಹೇಳಿದರು.
ಬಂಧನದ ಬಳಿಕ ಆಗಿರುವ ಎಡವಟ್ಟುಗಳನ್ನು ಮುಖ್ಯವಾಗಿ ಚರ್ಚಿಸುವುದಲ್ಲ.ಬದಲಾಗಿ ಮುಂದೆ ಈ ರೀತಿ ನಡೆಯಬಾರದು ಎಂಬ ತೀರ್ಮಾನ ತೆಗೆದುಕೊಳ್ಳಬೇಕು.
ಆಗಿರುವ ಘಟನೆ ಸತ್ಯ ಆದರೂ ಇದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಇಂದು ಮುಂದಿನವರಿಗೆ ಮಾದರಿಯಾಗಬಾರದು. ಪಾರ್ಲಿಮೆಂಟ್ ನಲ್ಲೂ ಆಗಿರುವ ಘಟನೆಗಳ ತನಿಖೆ ಆಗಬೇಕು. ರಾಹುಲ್ ಗಾಂಧಿ ತಪ್ಪು ಮಾಡಿರಲಿಅಮಿತ್ ಷಾ ಅವರು ಅಂಬೇಡ್ಕರ್ ಅವರ ವಿಚಾರದಲ್ಲಿ ಮಾತನಾಡಿರುವುದಾಗಲಿ ಎಲ್ಲವೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.