ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ತಾಲೂಕಿನ ಇತಿಹಾಸ ಪ್ರಸಿದ್ಧ ತೊಗರ್ಸಿ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯಕ್ಕೆ ವಾರ್ಷಿಕ 25 ಲಕ್ಷ ರು.ಗಳಿಗೂ ಅಧಿಕ ಆದಾಯವಿರುವುದರಿಂದ ಮುಜರಾಯಿ ದೇವಾಲಯವನ್ನು ಎ ಗ್ರೇಡ್ ಶ್ರೇಣಿಗೆ ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಇಲ್ಲಿನ ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ತಿಳಿಸಿದರು.ಗುರುವಾರ ದೇವಾಲಯದಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತಿಹಾಸ ಪ್ರಸಿದ್ಧ ಶ್ರಿ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಮಲೆನಾಡು ಸಹಿತ ಬಯಲು ಸೀಮೆಯ ಭಕ್ತಾದಿಗಳು ಹೆಚ್ಚಿದ್ದು, ಭಕ್ತರ ಅನುಕೂಲಕ್ಕಾಗಿ ಸಾಧ್ಯವಾದ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಸ್ವಾಮಿಯ ಕೃಪೆಯಿಂದಾಗಿ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದು, ಮುಜರಾಯಿ ದೇವಾಲಯದ ಖಾತೆಯಲ್ಲಿ ಈಗಾಗಲೇ ಒಂದು ಕೋಟಿಗೂ ಹೆಚ್ಚು ಹಣವಿದೆ ಎಂದು ತಿಳಿಸಿದರು.ಸ್ವಾಮಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ಹೆಚ್ಚಳದ ಜತೆಗೆ ಆದಾಯ ಸಹ ಹೆಚ್ಚಳವಾಗಿದ್ದು, ಕಳೆದ ವರ್ಷದಿಂದ ವಾರ್ಷಿಕ ಆದಾಯ ರು.25 ಲಕ್ಷಕ್ಕಿಂತ ಹೆಚ್ಚಾಗಿದೆ ಎಂದ ಅವರು, ಈ ದಿಸೆಯಲ್ಲಿ ದೇವಸ್ಥಾನದ ಶ್ರೇಣಿಯನ್ನು ಎ ಗ್ರೇಡ್‌ಗೆ ಹೆಚ್ಚಿಸಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಇದರಿಂದಾಗಿ ದೇವಾಲಯದ ಸಿಬ್ಬಂದಿಗೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಪುರಾತನ ದೇವಾಲಯದ ಕೆಲ ಭಾಗದಲ್ಲಿ ಮಳೆ ನೀರು ಸೋರುತ್ತಿರುವುದರಿಂದ ತಕ್ಷಣ ತಗಡಿನ ಶೀಟು ಹಾಕಲು, ದೀಡು ನಮಸ್ಕಾರ ಹಾಕುವ ಭಕ್ತರಿಗಾಗಿ ದೇವಾಲಯದ ಸುತ್ತ ನೆಲಕ್ಕೆ ಬಿಳಿ ಪೇಂಟ್ ಅಳವಡಿಕೆ,ಸೆಕ್ಯೂರಿಟಿ ಗಾರ್ಡ್ ನೇಮಕ ಮತ್ತಿತರ ಲೋಪದೋಷದ ಬಗ್ಗೆ ಮಳೆ ಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಹಾಗೂ ಸಮಿತಿ ಸದಸ್ಯರಾದ ಸೋಮೇಶ್ ಜನ್ನು ಮತ್ತಿತರರು ಗಮನ ಸೆಳೆದರು.ಈ ಸಂದರ್ಭದಲ್ಲಿ ಪ್ರಮುಖರಾದ ಜೆ.ಪರಮೇಶ್ವರಪ್ಪ, ಪುನೀತ್ ಗೌಳಿ, ಜಯಮ್ಮ, ಪಾರ್ವತಮ್ಮ, ಎಂಪಿ ಮಂಜುನಾಥ್, ಬಸವರಾಜ್ ಚಲವಾದಿ ಸಹಿತ ಗ್ರಾಮದ ಮುಖಂಡ ರೇವಣಪ್ಪ ಕೊಳಗಿ, ಸಣ್ಣ ಹನುಮಂತಪ್ಪ, ಕೆ.ಎಸ್.ಸುಬ್ರಹ್ಮಣ್ಯ, ಗ್ರಾಪಂ ಅಧ್ಯಕ್ಷ ನಿರಂಜನ್, ಚನ್ನವೀರಸ್ವಾಮಿ, ಮಲ್ಲೇಶಪ್ಪ ಗೌಳಿ, ದೇವಾಲಯದ ಆಡಳಿತಾಧಿಕಾರಿ ಮೇಘರಾಜ್, ಉಪ ತಹಸೀಲ್ದಾರ್ ಮಹೇಶ್, ಲೆಕ್ಕಾಧಿಕಾರಿ ರೂಪ, ಪಿಡಿಓ ನಾಗರಾಜ್, ಗ್ರಾಮಸ್ಥರು ಹಾಜರಿದ್ದು, ಹಲವು ಸಲಹೆಗಳನ್ನು ನೀಡಿದರು.