ಸಾರಾಂಶ
ಚಿಕ್ಕಮಗಳೂರು, ಕ್ಷೇತ್ರದ ಎಲ್ಲಾ ಕೆರೆಗಳನ್ನು ತುಂಬಿಸಲು ಒಗ್ಗಟ್ಟಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದ್ದಾರೆ.
- ಬೆಳವಾಡಿ ಕೆರೆಗೆ ಬಾಗಿನ ಅರ್ಪಣೆ, ಭದ್ರಾ ಉಪ ಕಣಿವೆ ಯೋಜನೆಯಲ್ಲಿ 61 ಕೆರೆಗಳು ತುಂಬಲಿವೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕ್ಷೇತ್ರದ ಎಲ್ಲಾ ಕೆರೆಗಳನ್ನು ತುಂಬಿಸಲು ಒಗ್ಗಟ್ಟಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದ್ದಾರೆ.
ಭಾನುವಾರ ತಾಲೂಕಿನ ಬೆಳವಾಡಿ ಕೆರೆಗೆ ಬಾಗಿನ ಅರ್ಪಿಸಿ ನಂತರ ಮಾತನಾಡಿದ ಅವರು ಲಕ್ಯಾ ಹೋಬಳಿ ರೈತಾಪಿ ಜನರ ಜೀವನಾಡಿ ಯಾಗಿರುವ ಬೆಳವಾಡಿ ಕೆರೆ ಭರ್ತಿಯಾಗಿ ಎಲ್ಲರ ಮೊಗದಲ್ಲಿ ಸಂತಸ ಕಾಣುತ್ತಿದೆ. ಎತ್ತಿನ ಹೊಳೆ ಯೋಜನೆ ಮೂಲಕ ಹೆಚ್ಚು ನೀರು ಹರಿದು ಬಂದು ಬೆಳವಾಡಿ ಕೆರೆ ತುಂಬಿದೆ. ಈ ವಿಚಾರದಲ್ಲಿ ಮನುಷ್ಯ ಪ್ರಯತ್ನದ ಜೊತೆಗೆ ದೈವ ಕೃಪೆಯೂ ಬೇಕಾಗುತ್ತದೆ ಎಂದರು.ಈ ಬಾರಿ ಕಳಸಾಪುರ ಹಾಗೂ ಈಶ್ವರಹಳ್ಳಿ ಕೆರೆಗಳಿಗೆ ಕರಗಡ ಏತ ನೀರಾವರಿಯಿಂದ ನೀರು ತುಂಬಿಸಲಾಗಿತ್ತು. ಆದರೆ, ಬೆಳವಾಡಿ ಕೆರೆಗೆ ನೀರು ಬಂದಿರಲಿಲ್ಲ. ಕ್ಷೇತ್ರದ ಜನರ ಅದೃಷ್ಟ, ದೇವರ ಆಶೀರ್ವಾದ ಮತ್ತು ಸಿರಿಗೆರೆ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯರ ಆಶೀರ್ವಾದದಿಂದ ಹಳೇಬೀಡು ದ್ವಾರಸಮುದ್ರ ಕೆರೆ ತುಂಬಿ ಈಗ ಬೆಳವಾಡಿ ಕೆರೆ ಭರ್ತಿಯಾಗಿದೆ ಎಂದು ಹೇಳಿದರು.ಈಗಾಗಲೇ ದೇವನೂರು ಮತ್ತು ಮಾಚೇನಹಳ್ಳಿ ಕೆರೆಗಳಿಗೆ ನೀರು ಹರಿಯುತ್ತಿದೆ. ರಣಘಟ್ಟ ಮತ್ತು ಭದ್ರಾ ಉಪ ಕಣಿವೆ ಯೋಜನೆಗಳು ಪೂರ್ಣ ಗೊಂಡಾಗ ಶಾಶ್ವತವಾಗಿ ಕೆರೆ ತುಂಬಲಿದೆ. ಭದ್ರಾ ಉಪ ಕಣಿವೆ 2 ನೇ ಹಂತದ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡರೆ ಚಿಕ್ಕಮಗಳೂರು ತಾಲೂಕಿನ 61 ಕೆರೆಗಳು ತುಂಬಲಿವೆ ಎಂದರು.ರಣಘಟ್ಟ ಯೋಜನೆಯಲ್ಲಿ 5.70 ಕಿ.ಮೀ. ಸುರಂಗ ನಿರ್ಮಾಣ ಆಗಬೇಕಿದೆ. ಈಗಾಗಲೇ 2.70 ಕಿ.ಮೀ. ಸುರಂಗ ಮಾರ್ಗ ಕಾಮಗಾರಿ ಮುಗಿದಿದೆ. ಇನ್ನೂ 3 ಕಿ.ಮೀ. ಕಾಮಗಾರಿ ಆಗಬೇಕಿದೆ. ಈಗಾಗಲೇ ಅಧಿಕಾರಿಗಳು, ಸಚಿವರು 2 ಬಾರಿ ಕಾಮಗಾರಿ ಪರಿಶೀಲಿಸಿದ್ದಾರೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ನೀರಿಲ್ಲದೆ ನಮಗೆ ಬದುಕಿಲ್ಲ. ಅದಕ್ಕಾಗಿ ಗಂಗೆಗೆ ಕೃತಜ್ಞತೆ ಅರ್ಪಿಸಲು ಬಾಗಿನ ಬಿಡಲಾಗಿದೆ. ಗಂಗಾ ಮಾತೆ ಸದಾ ಕಾಲ ಹರಸಲಿ, ಪ್ರತೀ ವರ್ಷ ಕೆರೆ ಭರ್ತಿಯಾಗಿ ಕೋಡಿ ಬೀಳುವಂತಾಗಲಿ ಎಂದರು.₹1281 ಕೋಟಿ ವೆಚ್ಚದ ಭದ್ರಾ ಉಪ ಕಣಿವೆಯಿಂದ ಕೆರೆಗಳನ್ನು ತುಂಬಿಸುವ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು 2ನೇ ಹಂತದ ಕಾಮಗಾರಿ ಪ್ರಾರಂಭವಾಗಿದೆ. 2ನೇ ಹಂತದಲ್ಲಿ ಮಾಚಗೊಂಡನಹಳ್ಳಿ, ದೇವರ ಕಾರೇಹಳ್ಳಿ, ತಿಪ್ಪಗೊಂಡನಹಳ್ಳಿ ಕೆರೆಗಳ ಕಾಮಗಾರಿ ನಡೆಯುತ್ತಿದೆ. 3ನೇ ಹಂತದಲ್ಲಿ ಕಳಸಾಪುರ, ಬೆಳವಾಡಿ ಸೇರಿದಂತೆ ಲಕ್ಯಾ, ಸಖರಾಯಪಟ್ಟಣ ಹೋಬಳಿಯ ಎಲ್ಲಾ ಕೆರೆಗಳನ್ನು ತುಂಬಿಸುವ ಯೋಜನೆಗೆ ಮಂಜೂರಾತಿ ಈಗಾಗಲೇ ದೊರೆತು ಕಾಮಗಾರಿ ಆರಂಭವಾಗಿರುವುದರಿಂದ ಎಲ್ಲಾ ಕೆರೆಗಳು ತುಂಬುತ್ತವೆ ಎನ್ನುವ ವಿಶ್ವಾಸವಿದೆ ಎಂದರು.ಎತ್ತಿನ ಹೊಳೆ ನಮಗೆ ಅಚಾನಕ್ ಆಗಿ ಸಿಕ್ಕಿದ ಸೌಭಾಗ್ಯ. ಆ ಯೋಜನೆಯಲ್ಲಿ ನಮ್ಮ ಈ ಭಾಗದ ಕೆರೆಗಳು ಸೇರಿರಲಿಲ್ಲ. ಇದರ ಜೊತೆಗೆ ರಣಘಟ್ಟ ಯೋಜನೆ ಕಾಮಗಾರಿಯೂ ನಡೆಯುತ್ತಿದೆ. ಇದೆಲ್ಲವೂ ಆದರೆ, ಶಾಶ್ವತವಾಗಿ ನೀರು ಬರುವಂತಾಗುತ್ತದೆ. ಅದಕ್ಕೆ ದೈವ ಕೃಪೆಯೂ ಬೇಕು. ಎತ್ತಿನ ಹೊಳೆ ಯೋಜನೆ ನಮಗೆ ಸೇರಿಲ್ಲವಾದರೂ ಅದನ್ನು ಶಾಶ್ವತವಾಗಿ ಸೇರ್ಪಡೆಗೊಳಿಸುವ ಕೆಲಸವನ್ನು ಶಾಸಕರ ಜೊತೆ ಸೇರಿ ಮಾಡುತ್ತೇವೆ ಎಂದು ತಿಳಿಸಿದರು.ಬೆಳವಾಡಿ ಕೆರೆ ಏರಿ ಬಿರುಕು ಬಿಟ್ಟಿಲ್ಲ. ಮೂಲ ಏರಿಯನ್ನು ಮುಟ್ಟಿಲ್ಲ. ಅಗಲೀಕರಣ ಮಾಡುವಾಗ ಕೆಳಗಡೆ ಕಟ್ಟಲಾಗಿರುವ ರಿವಿಟ್ಮೆಂಟ್‌ಗೆ ತಾಂತ್ರಿಕ ಸಮಸ್ಯೆಯಿಂದ ಸೋರಿಕೆಯಾದ ನೀರು ಹೊರಕ್ಕೆ ಹೋಗಲು ದಾರಿಯಿಲ್ಲದೆ ಬಿರುಕು ಕಾಣಿಸಿಕೊಂಡಿದೆ. ತಾಂತ್ರಿಕ ವರದಿಯನ್ನೂ ಪಡೆಯ ಲಾಗಿದೆ. ಅದರಲ್ಲಿ ಮೂಲ ಏರಿಗೆ ಏನೂ ಸಮಸ್ಯೆ ಇಲ್ಲ ಎಂದು ತಿಳಿಸಲಾಗಿದೆ. ಈ ವಿಚಾರದಲ್ಲಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಲೇಶಪುರದಲ್ಲಿ ಎತ್ತಿನ ಹೊಳೆ ಯೋಜನೆಗೆ ಚಾಲನೆ ನೀಡಿದ ನಂತರ ಬೆಳವಾಡಿ ಕೆರೆಗೆ ನೀರು ಬಂದಿರುವುದು ಸಂತೋಷದ ವಿಚಾರ. ಈ ಭಾಗದ ಅನೇಕ ಕೆರೆಗಳನ್ನು ತುಂಬಿಸುವ ಕೆಲಸ ಆಗಬೇಕಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಮಳೆ ಬರಲ್ಲ ಅಂತಿದ್ದರು. ಇಂದು ಉತ್ತಮ ಮಳೆ ಆಗಿ ಎಲ್ಲಾ ಕೆರೆಗಳು ತುಂಬಿವೆ ಎಂದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಮಾಜಿ ಸದಸ್ಯ ರವೀಂದ್ರ ಬೆಳವಾಡಿ, ಮುಖಂಡರುಗಳಾದ ಬಸವರಾಜ್, ಶುಭಾ ಸತ್ಯ, ಗ್ರಾ.ಪಂ. ಅಧ್ಯಕ್ಷೆ ಕಾವೇರಮ್ಮ, ಮಾಜಿ ಅಧ್ಯಕ್ಷೆ ಭಾಗ್ಯ ಹಾಗೂ ಗ್ರಾಮದ ಮುಖಂಡರು, ರೈತರು ಹಾಜರಿದ್ದರು. 22 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಕೆರೆ ಭರ್ತಿಯಾಗಿರುವ ಹಿನ್ನಲೆಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಗಾಯತ್ರಿ ಶಾಂತೇಗೌಡ, ರೇಖಾ ಹುಲಿಯಪ್ಪಗೌಡ ಅವರು ಭಾನುವಾರ ಭಾಗಿನ ಅರ್ಪಿಸಿದರು.