ಮಕ್ಕಳಿಂದ ಶೌಚಾಲಯ ಸ್ವಚ್ಚತೆ, ಪ್ರಭಾರ ಮುಖ್ಯಶಿಕ್ಷಕ ಅಮಾನತು

| Published : Dec 29 2023, 01:30 AM IST

ಸಾರಾಂಶ

ಭದ್ರಾವತಿ ತಾಲೂಕಿನ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ ಪ್ರಭಾರ ಮುಖ್ಯಶಿಕ್ಷಕನ ತಲೆದಂಡವಾಗಿದ್ದು, ಡಿಡಿಪಿಐ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ/ ಭದ್ರಾವತಿ

ಮಕ್ಕಳಿಂದ ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ ಕೋಲಾರದ ಘಟನೆ ಮಾಸುವ ಮುನ್ನವೇ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಮತ್ತೊಂದು ಘಟನೆ ನಡೆದಿದೆ. ಈ ಸಂಬಂಧ ಪ್ರಭಾರ ಮುಖ್ಯಶಿಕ್ಷಕ ಅಮಾನಸು ಸಹ ಆಗಿದೆ.

ಭದ್ರಾವತಿ ತಾಲೂಕಿನ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆ ಪ್ರಭಾರ ಮುಖ್ಯಶಿಕ್ಷಕ ಶಂಕರಪ್ಪ ಹಾಗೂ ಇತರೇ ಶಿಕ್ಷಕರು ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಸಂಬಂಧ ದಲಿತ ಸಂಘರ್ಷ ಸಮಿತಿಯವರು ಶಿವಮೊಗ್ಗದ ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರಿಗೆ ದೂರು ಸಲ್ಲಿಸಿದ್ದರು. ಮಕ್ಕಳನ್ನು ದುರ್ಬಳಕೆ ಮಾಡಿದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಸಂಘಟನೆ ಮತ್ತು ಪೋಷಕರು ಒತ್ತಾಯಿಸಿದ್ದರು. ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.

ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಶಾಲೆಗೆ ಇದ್ದ ಸ್ವಚ್ಛತಾ ಸಿಬ್ಬಂದಿಯನ್ನು ಬಿಇಒ ಕಚೇರಿಗೆ ನಿಯೋಜನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಶಾಲಾ ಮಕ್ಕಳೇ ಶಾಲಾ ಆವರಣವನ್ನು ಕಸ ಹೊಡೆಯುವುದು, ಟಾಯ್ಲೆಟ್ ಕ್ಲೀನ್‌ ಮಾಡುವುದು ಮಾಡುತ್ತಿದ್ದರು. ಪ್ರತಿ ಮೂರು ವಿದ್ಯಾರ್ಥಿಗಳು ಸರದಿಯಂತೆ ದಿನ ಬಿಟ್ಟು ದಿನ ಶಾಲೆಯನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿದ್ದರು.

ಸ್ವಚ್ಛತೆ ಮಾಡದಿದ್ದರೆ ವರ್ಗಾವಣೆ (ಟಿಸಿ) ಪತ್ರ ಕೊಡುವುದಾಗಿ ಹೇಳಿ ನಮ್ಮಿಂದ ಶಾಲೆಯ ಟಾಯ್ಲೆಟ್ ಮತ್ತು ಶಾಲೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ದಲಿತ ಸಂಘರ್ಷ ಸಮಿತಿ ಮುಖಂಡರಿಂದ ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರಿಗೆ ದೂರು ನೀಡಿದ ಹಿನ್ನೆಲೆ ಬಿಇಒ ಕಚೇರಿಯಲ್ಲಿ ಕರ್ತವ್ಯಕ್ಕೆ ನೇಮಿಸಿದ್ದ ಆಯಾ ಗೀತಾ ಅವರನ್ನು ಪುನಃ ಗುಡ್ಡದ ನೇರಳೆಕೆರೆ ಶಾಲೆಗೆ ವರ್ಗಾಯಿಸಲಾಗಿದೆ. ಗುರುವಾರ ಗುಡ್ಡದ ನೇರಳೆಕೆರೆ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಆಯಾ ಗೀತಾ ಶಾಲೆಯ ಆವರಣ ಮತ್ತು ಟಾಯ್ಲೆಟ್ ಸ್ವಚ್ಛತೆ ಮಾಡಿದ್ದಾರೆ.

ಜಿಲ್ಲಾ ರಕ್ಷಣಾಧಿಕಾರಿ ಭೇಟಿ:

ಘಟನೆ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಗುರುವಾರ ಸಂಜೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ವೃತ್ತ ನಿರೀಕ್ಷಕ ಜಗದೀಶ್ ಹಂಚಿನಾಳ್, ಡಿಎಸ್‌ಎಸ್ ಮುಖಂಡರು ಉಪಸ್ಥಿತರಿದ್ದರು.

- - -

ಬಾಕ್ಸ್‌

ಮುಖ್ಯಶಿಕ್ಷಕ ಶಂಕರಪ್ಪ ಅಮಾನತು

ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಚಗೊಳಿಸಿದ ಆರೋಪ ಹಿನ್ನೆಲೆ ಭದ್ರಾವತಿ ತಾಲೂಕಿನ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಭಾರ ಮುಖ್ಯಶಿಕ್ಷಕ ಶಂಕರಪ್ಪ ಅವರನ್ನು ಅಮಾನತು ಮಾಡಿ ಡಿಡಿಪಿಐ ಸಿ.ಆರ್‌.ಪರಮೇಶ್ವರಪ್ಪ ಆದೇಶ ಹೊರಡಿಸಿದ್ದಾರೆ.

ಘಟನೆ ಸಂಬಂಧ ಬುಧವಾರ ಮಧ್ಯಾಹ್ನ ಭದ್ರಾವತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುರುವಾರ ಬೆಳಗ್ಗೆ ಘಟನೆ ಸಂಬಂಧ ಡಿಡಿಪಿಐಗೆ ವರದಿ ಸಲ್ಲಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿದ ವರದಿ ಆಧಾರ ಮೇಲೆ ಶಾಲೆ ಪ್ರಭಾರ ಮುಖ್ಯಶಿಕ್ಷಕ ಶಂಕರಪ್ಪ ಅವರನ್ನು ಅಮಾನತು ಮಾಡಿದ್ದಾರೆ.

- - -

-28ಎಸ್‌ಎಂಜಿಕೆಪಿ05: ಪರಮೇಶ್ವರಪ್ಪ, ಡಿಡಿಪಿಐ -ಡಿ28ಬಿಡಿವಿಟಿ3: ಭದ್ರಾವತಿ ತಾಲೂಕಿನ ಗುಡ್ಡದ ನೇರಲಕೆರೆ ಸರ್ಕಾರಿ ಪ್ರಾಥಮಿಕ ಶಾಲೆ. -ಡಿ28ಬಿಡಿವಿಟಿ3ಎ: ಗುಡ್ಡದ ನೇರಲಕೆರೆ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಗುರುವಾರ ಲೋಕಾಯುಕ್ತ ನಿರೀಕ್ಷಕ ಸುರೇಶ್ ಅವರಿಗೆ ದೂರು ಸಲ್ಲಿಸಿದರು. ಚಿತ್ರ: ಡಿ೨೮-ಬಿಡಿವಿಟಿ೩ಬಿಭದ್ರಾವತಿ ತಾಲೂಕಿನ ಗುಡ್ಡದ ನೇರಲಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಂಜೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.