ನಮ್ಮ ಜಮೀನಿನ ಮೇಲೆ ರಸ್ತೆ ನಿರ್ಮಿಸಿ ಜಮೀನಿಗೆ ಇನ್ನೂ ಸರಿಯಾದ ಪರಿಹಾರ ನೀಡಿಲ್ಲ. ವಾಹನ ಖರೀದಿಸುವಾಗಲೇ ರಸ್ತೆ ತೆರಿಗೆ ಕಟ್ಟಿ ವಾಹನ ಖರೀದಿಸುತ್ತಿದ್ದಾರೆ. ಮತ್ತೊಮ್ಮೆ ರಸ್ತೆ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ ಎಂದು ಸುಂಕ ವಸೂಲಿ ಕೇಂದ್ರಗಳನ್ನು ಪಂಜಾಬ್ ಸರ್ಕಾರ ರದ್ದು ಮಾಡಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ರದ್ದು ಮಾಡಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳಲ್ಲಿ ರೈತರ ಕೃಷಿ ಸಾಮಗ್ರಿಗಳನ್ನು ಸಾಗಾಟಣೆ ಮಾಡುವ ವಾಹನಗಳಿಂದ ಸುಂಕ ವಸೂಲಿ ಹಾಗೂ ಟೋಲ್ ಸಿಬ್ಬಂದಿ ಕಿರುಕುಳ ಖಂಡಿಸಿ ವಿವಿಧ ರೈತ ಹಾಗೂ ಕನ್ನಡಪರ ಸಂಘಟನೆಗಳು ಟೋಲ್ ಎದುರು ಧರಣಿ ನಡೆಸಿದರು.ತಾಲೂಕಿನ ಗಣಂಗೂರು ಗ್ರಾಮದ ಬಳಿಯ ಟೋಲ್ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತ ಸಂಘ, ದಲಿತ ಸಂಘಟನೆ, ಮಹಿಳಾ ಸಂಘಟನೆಗಳು, ಕನ್ನಡಪರ ಹಾಗೂ ಕಾರ್ಮಿಕ ಸಂಘಟನೆಗಳು ಜೊತೆಗೂಡಿ ಸುಮಾರು 3 ಗಂಟೆಗೂ ಹೆಚ್ಚು ಕಾಲ ಪ್ರತಿಭಟನಾ ಧರಣಿ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉಸ್ತುವಾರಿ ಅಧಿಕಾರಿ ದೇವಿಕ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನೆಕಾರರು, ರೈತರ ಹಣ್ಣು ಮತ್ತು ತರಕಾರಿ, ಕಬ್ಬು, ಭತ್ತ, ತೆಂಗು, ಎಳನೀರು, ಅಡಿಕೆ ಸೇರಿದಂತೆ ಇತರೆ ಕೃಷಿ ಸಾಮಗ್ರಿ ಸಾಗಿಸುವ ವಾಹನಗಳಿಂದ ಟೋಲ್ ಸಂಗ್ರಹ ಯಾಕೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.ನಮ್ಮ ಜಮೀನಿನ ಮೇಲೆ ರಸ್ತೆ ನಿರ್ಮಿಸಿ ಜಮೀನಿಗೆ ಇನ್ನೂ ಸರಿಯಾದ ಪರಿಹಾರ ನೀಡಿಲ್ಲ. ವಾಹನ ಖರೀದಿಸುವಾಗಲೇ ರಸ್ತೆ ತೆರಿಗೆ ಕಟ್ಟಿ ವಾಹನ ಖರೀದಿಸುತ್ತಿದ್ದಾರೆ. ಮತ್ತೊಮ್ಮೆ ರಸ್ತೆ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ ಎಂದು ಸುಂಕ ವಸೂಲಿ ಕೇಂದ್ರಗಳನ್ನು ಪಂಜಾಬ್ ಸರ್ಕಾರ ರದ್ದು ಮಾಡಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಅಲ್ಲದೇ, ಪ್ರಾಧಿಕಾರದ ನಿಯಮಾವಳಿಯನ್ನು ಸರಿಯಾಗಿ ಪಾಲಿಸದೆ, ಕೆಲವು ರಸ್ತೆಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿಲ್ಲ. ಮೂಲ ಸೌಕರ್ಯ ಒದಗಿಸಿಲ್ಲ. ಕೆಲವೆಡೆ ಅಂಡರ್ ಪಾಸ್‌ಗಳಲ್ಲಿ ಜನರಿಗೆ ಹೋಗಲು ದೀಪಗಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಭಾಗದ ರೈತರು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಓಡಾಡಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ಗಮನಹರಿಸದೆ ಕಾನೂನುಬಾಹಿರವಾಗಿ ಸುಂಕ ಸಂಗ್ರಹಿಸುತ್ತಿದ್ದೀರಿ. ಟೋಲ್ ನಿಂದ 20 ಕಿ.ಲೋ ಮೀಟರ್ ವರೆಗೂ ಇರುವ ರೈತರಿಗೆ ಯಾವುದೇ ಸುಂಕ ಸಂಗ್ರಹಿಸಬಾರದು ಎಂದು ಒತ್ತಾಯಿಸಿದರು.
ಕುರುಬೂರು ಶಾಂತಕುಮಾರ್ ಮಾತನಾಡಿ, ಇಂದಿನಿಂದಲೇ ರೈತರ ಹಣ್ಣು, ತರಕಾರಿ ಮತ್ತಿತರ ರೈತರ ಸರಕ ಸಾಗಾಣಿಕಾ ಹಾಗೂ ರೈತ ಮುಖಂಡರ ವಾಹನಗಳಿಗೆ ವಿನಾಯಿತಿ ನೀಡಬೇಕು. 20 ಕಿ.ಮೀ ವ್ಯಾಪ್ತಿಯ ಗ್ರಾಮಗಳ ರೈತರಿಗೆ ಯಾವುದೇ ಸುಂಕ ವಸೂಲಿ ಮಾಡಬಾರದು ಎಂದು ಆಗ್ರಹಿಸಿದರು.ನಿಮ್ಮಲ್ಲಿ ಕೆಲಸ ಮಾಡುವ ಕೆಲ ಟೋಲ್ ಸಿಬ್ಬಂದಿ ಗುಂಡಾ ವರ್ತನೆ ಮಾಡುತ್ತಿದ್ದಾರೆ ಇದು ಸರಿಯಾದ ಕ್ರಮವಲ್ಲ. ಈ ಕೂಡಲೇ ರಾಜ್ಯ ಮಟ್ಟದ ಪ್ರಾಧಿಕಾರದ ಮುಖ್ಯಸ್ಥರ ಜೊತೆ ಮಾತನಾಡಿ ರೈತರ ನ್ಯಾಯಯುತ ಬೇಡಿಕೆಗಳನ್ನು ತಿಂಗಳ ಒಳಗೆ ಈಡೇರಿಸಲು ಗಡುವು ನೀಡುತ್ತಿದೆ. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ. ಜೊತೆಗೆ ಇಲ್ಲಿರುವ ಟೋಲ್ ಗೇಟ್ ಕಿತ್ತೆಸೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ದೇವಿಕ್ ಮಾತನಾಡಿ, ಇಂದಿನಿಂದಲೇ ಟೋಲ್ ಬಳಿ ಪ್ರತ್ಯೇಕ ರಸ್ತೆ ವ್ಯವಸ್ಥೆ ಮಾಡಿ ರೈತರ ಸರಕು ವಾಹನಗಳಿಗೆ ವಿನಾಯಿತಿ ನೀಡಲಾಗುವುದು. ಅಲ್ಲದೇ, ನಿಮ್ಮ ಎಲ್ಲಾ ಒತ್ತಾಯಗಳನ್ನು ಸರ್ಕಾರದ ಗಮನಕ್ಕೆ ತಂದು ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಚಳವಳಿಯನ್ನು ತಾತ್ಕಾಲಿಕವಾಗಿ ಹಿಂಪಡೆದರು.ಚಳವಳಿಯಲ್ಲಿ ರಾಜ್ಯ ರೈತ ಸಂಘದ ಹಿಂಡವಾಳು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ, ಕನ್ನಡ ಸೇನೆ ಅಧ್ಯಕ್ಷ ಮಂಜುನಾಥ್, ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ತಿರಗಸೂರು ಶಂಕರ್, ಬಡಗಲಪುರ ನಾಗರಾಜ್, ಸರಗೂರು ನಟರಾಜು, ಅಣ್ಣೂರು ಮಹೇಂದ್ರ, ಸೊಸಿ ಪ್ರಕಾಶ್, ಮುಂಡುಗದೊರೆ ಮೋಹನ್, ರುಕ್ಮಾಂಗದ, ಜಯರಾಂ ದೊಡ್ಡಪಾಳ್ಯ ಚಂದ್ರು, ಕೂಡಲಕುಪ್ಪೆ ನಾಗೇಂದ್ರ ಸ್ವಾಮಿ, ತೇಜಸ್ ಗೌಡ, ರವಿಚಂದ್ರ, ಸಿದ್ದಪ್ಪ ಅರಕೆರೆ, ಪಾಂಡು, ನಾಗಮಂಗಲ ಸುರೇಶ್, ಮಹದೇವಸ್ವಾಮಿ, ಗಂಗಾಧರ್, ನಂಜುಂಡ ಮೌರ್ಯ, ಅಲ್ಲಾ ಪಟ್ಟಣ ಸಿದ್ದೇಗೌಡ ಸೇರಿದಂತೆ ಇತರೆ ಸಂಘಟನೆಗಳ ಮುಖಂಡರು ಹಾಗೂ ಅಕ್ಕ ಪಕ್ಕದ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.