ಸಾರಾಂಶ
ಬೆಂಗಳೂರು : ನಂದಿ ಎಕನಾಮಿಕಲ್ ಕಾರಿಡಾರ್ ಎಂಟರ್‌ಪ್ರೈಸಸ್(ನೈಸ್) ತನ್ನ ರಸ್ತೆ ಟೋಲ್ ಶುಲ್ಕವನ್ನು ಏರಿಕೆ ಮಾಡಿದ್ದು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ನ ಎರಡು ಟೋಲ್‌ಗಳ ಶುಲ್ಕ ಏರಿಕೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ನೈಸ್ ರಸ್ತೆಯ ಟೋಲ್ ಶುಲ್ಕ ಜು.1ರಿಂದ ಹೆಚ್ಚಳ ಮಾಡುವ ಘೋಷಣೆ ಮಾಡಲಾಯಿತು. ಅದರಂತೆ ನಂದಿ ಎಕನಾಮಿಕಲ್ ಕಾರಿಡಾರ್ ಎಂಟರ್‌ಪ್ರೈಸಸ್ ಅಧೀನದ 8 ಟೋಲ್ ಪ್ಲಾಜಾಗಳಲ್ಲೂ ಟೋಲ್ ಶುಲ್ಕ ಹೆಚ್ಚಳ ಮಾಡಲಾಗಿದೆ. ಈಗಾಗಲೇ ದುಬಾರಿ ಇದ್ದ ನೈಸ್ ರಸ್ತೆ ಟೋಲ್ ಶುಲ್ಕ, ಜು.1ರಿಂದ ಮತ್ತಷ್ಟು ಹೆಚ್ಚಳವಾಗಿದೆ. ಆಮೂಲಕ ವಾಹನ ಸವಾರರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಂತಾಗಿದೆ.
ವಾಹನ ಸವಾರರೇ ಲೆಕ್ಕ ಹಾಕಿರುವಂತೆ ನೈಸ್ ರಸ್ತೆಯಲ್ಲಿ ಸಂಚರಿಸಲು ಪ್ರತಿ ಕಿ.ಮೀ.ಗೆ ಕಾರು ಚಾಲಕರಿಗೆ ಸುಮಾರು 7 ರು. ಮತ್ತು ದ್ವಿಚಕ್ರ ವಾಹನ ಸವಾರರಿಗೆ 2.5 ರು. ವೆಚ್ಚವಾಗಲಿದೆ. ಇದು ರಾಷ್ಟ್ರೀಯ ಹೆದ್ದಾರಿಗಳಿಗೆ ಹೋಲಿಸಿದರೆ ಶೇ. 40ರಿಂದ 50ರಷ್ಟು ಹೆಚ್ಚು. ಬೆಂಗಳೂರು ಸುತ್ತಮುತ್ತಲ ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳಲ್ಲಿ ದ್ವಿಚಕ್ರಗಳಿಗೆ ಯಾವುದೇ ಶುಲ್ಕ ತೆಗೆದುಕೊಳ್ಳುವುದಿಲ್ಲ. ಇನ್ನು, ಕಾರುಗಳಿಗೆ ಪ್ರತಿ ಕಿ.ಮೀ.ಗೆ ಸುಮಾರು 3ರಿಂದ 4 ರು. ಟೋಲ್ ಶುಲ್ಕ ನೀಡಬೇಕಿದೆ. ನೈಸ್ ರಸ್ತೆಗೆ ಹೋಲಿಸಿದರೆ ಇದು ಕಡಿಮೆ.
ಉದಾಹರಣೆಗೆ ಹೊಸಕೋಟೆಯಿಂದ ಕೆಜಿಎಫ್‌ವರೆಗಿನ 66.6 ಕಿ.ಮೀ.ದೂರವನ್ನು ಕಾರಲ್ಲಿ ಪ್ರಯಾಣಿಸಲು ಒಂದು ಟ್ರಿಪ್‌ಗೆ 190 ರು. ಟೋಲ್ ಶುಲ್ಕ ಪಾವತಿಸಬೇಕಿದೆ. ಅಂದರೆ ಪ್ರತಿ ಕಿ.ಮೀ.ಗೆ 3 ರು. ಟೋಲ್ ಶುಲ್ಕ ಪಾವತಿಸಿದಂತಾಗಿದೆ. ಅದೇ ಮಾದವಾರದಿಂದ ಎಲೆಕ್ಟ್ರಾನಿಕ್ ಸಿಟಿವರೆಗಿನ 45 ಕಿ.ಮೀ. ದೂರ ಕ್ರಮಿಸಲು ನೈಸ್ ರಸ್ತೆಯಲ್ಲಿ 306 ರು. ವಿಧಿಸಲಾಗುತ್ತಿದೆ. ಅಂದರೆ ಪ್ರತಿ ಕಿ.ಮೀ. 7 ರು. ಟೋಲ್ ಶುಲ್ಕ ಪಾವತಿಸಿದಂತಾಗಲಿದೆ.
ಜನರ ಅನಿರ್ವಾಯತೆ ಗಮನಿಸಿ ಸುಲಿಗೆ:
ತುಮಕೂರು ರಸ್ತೆ, ಹೊಸೂರು ರಸ್ತೆ, ಮೈಸೂರು ರಸ್ತೆ ಮತ್ತಿತರ ಪ್ರಮುಖ ರಸ್ತೆಗಳಿಗೆ ನೈಸ್ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಅದರಲ್ಲೂ ನಗರದ ಹೊರಭಾಗಗಳಿಗೆ ವಾಹನ ದಟ್ಟಣೆಯಿಲ್ಲದಂತೆ ತೆರಳಲು ಬಯಸುವವರು, ಬೇಗ ಕಚೇರಿಗೆ ತೆರಳಬೇಕೆನ್ನುವವರು ನೈಸ್ ರಸ್ತೆ ಬಳಸುತ್ತಾರೆ. ಹೀಗೆ ಅನಿವಾರ್ಯ ಕಾರಣಗಳನ್ನಿಟ್ಟುಕೊಂಡು ಜನ ನೈಸ್ ರಸ್ತೆಯನ್ನು ಬಳಸುತ್ತಿದ್ದಾರೆ. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ನೈಸ್, ದುಬಾರಿ ಟೋಲ್ ಶುಲ್ಕ ವಿಧಿಸುತ್ತಿದೆ. ಹೀಗೆ, 2026ರ ಜೂ.30ರವರೆಗೆ ಅನ್ವಯವಾಗುವಂತೆ ಟೋಲ್ ಶುಲ್ಕ ಹೆಚ್ಚಿಸಿರುವುದರಿಂದ ವಾಹನ ಸವಾರರು ನೈಸ್ ಸಂಸ್ಥೆ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.