ಕಾಕರಗಲ್‌ ಸಮೀಪ ಶಾಸಕಿ ಕರೆಮ್ಮ ಪುತ್ರನ ಗುಂಪಿನಿಂದ ಟೋಲ್‌ಗೇಟ್‌ ಧ್ವಂಸ

| N/A | Published : Apr 25 2025, 12:32 AM IST / Updated: Apr 25 2025, 12:13 PM IST

ಕಾಕರಗಲ್‌ ಸಮೀಪ ಶಾಸಕಿ ಕರೆಮ್ಮ ಪುತ್ರನ ಗುಂಪಿನಿಂದ ಟೋಲ್‌ಗೇಟ್‌ ಧ್ವಂಸ
Share this Article
  • FB
  • TW
  • Linkdin
  • Email

ಸಾರಾಂಶ

  ರಾಜ್ಯ ಹೆದ್ದಾರಿಯ ಕಾಕರಗಲ್‌ ಸಮೀಪ ನಿರ್ಮಿಸಿದ್ದ ಟೋಲ್‌ಗೇಟ್‌ನಿಂದ ತೀವ್ರ ವಿರೋಧದ ನಡುವೆಯೂ ಹಣ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಶಾಸಕಿ ಕರೆಮ್ಮ ಜಿ.ನಾಯಕ ಪುತ್ರ ಸಂತೋಷ ಜಿ.ನಾಯಕ ನೇತೃತ್ವದ ತಂಡವು ಟೋಲ್‌ಗೇಟ್‌ಗೆ ನುಗ್ಗಿ ಧ್ವಂಸ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

  ದೇವದುರ್ಗ : ರಾಯಚೂರು ಮತ್ತು ದೇವದುರ್ಗ ರಾಜ್ಯ ಹೆದ್ದಾರಿಯ ಕಾಕರಗಲ್‌ ಸಮೀಪ ನಿರ್ಮಿಸಿದ್ದ ಟೋಲ್‌ಗೇಟ್‌ನಿಂದ ತೀವ್ರ ವಿರೋಧದ ನಡುವೆಯೂ ಹಣ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಶಾಸಕಿ ಕರೆಮ್ಮ ಜಿ.ನಾಯಕ ಪುತ್ರ ಸಂತೋಷ ಜಿ.ನಾಯಕ ನೇತೃತ್ವದ ತಂಡವು ಟೋಲ್‌ಗೇಟ್‌ಗೆ ನುಗ್ಗಿ ಧ್ವಂಸ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. 

ಶಾಸಕಿ ಕರೆಮ್ಮ ಜಿ.ನಾಯಕ ಪುತ್ರ ಸಂತೋಷ ಜಿ.ನಾಯಕ ನೇತೃತ್ವದಲ್ಲಿ ಸುಮಾರು 45 ರಿಂದ 50 ಜನರ ಗುಂಪು ಟೋಲ್‌ಗೇಟ್‌ಗೆ ನುಗ್ಗಿ ಪರಿಕರಗಳನ್ನು ಧ್ವಂಸ ಮಾಡಿ 19 ಲಕ್ಷ ರು. ನಷ್ಟವನ್ನುಂಟು ಮಾಡಿದ್ದಾರೆ ಎಂದು ಟೋಲ್‌ಗೇಟ್‌ ನಿರ್ವಹಣಾಧಿಕಾರಿ ನವೀನ ಕುಮಾರ ನೀಡಿದ ದೂರಿನ ಮೇರೆಗೆ ಗಬ್ಬೂರು ಠಾಣೆಯಲ್ಲಿ ಶಾಸಕಿ ಪುತ್ರ ಸಂತೋಷ ಜಿ.ನಾಯಕ, ಮುಖಂಡರಾದ ತಿಮ್ಮಾರೆಡ್ಡಿ,ಸಲೀಂ, ರಾಮಣ್ಣ ಮದರಕಲ್‌, ರಾಜಣ್ಣ ನಾಯಕ, ಭೀಮಣ್ಣ ಸೇರಿ ಇತರರ ಮೇಲೆ ಪ್ರಕರಣ ದಾಖಲಾಗಿದೆ.

ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ಕಾರ್ನಡ್, ಸಿಪಿಐ ಗುಂಡುರಾವ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಟೋಲ್‌ಗೇಟ್‌ ನಿರ್ಮಾಣ ಮಾಡಿ ಸ್ಥಳೀಯರಿಂದ ಹಣ ವಸೂಲಿ ಮಾಡುವ ವಿಚಾರವಾಗಿ ಶಾಸಕಿ ಕರೆಮ್ಮ ಜಿ.ನಾಯಕ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

 ಟೋಲ್‌ಗೇಟ್‌ ಆರಂಭಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರೂ ಸಹ ಕಳೆದ ಮೂರ್ನಾಲ್ಕು ದಿನಗಳಿಂದ ಜನರಿಂದ ಹಣ ವಸೂಲಿ ಆರಂಭಿಸಿದ್ದರಿಂದ ಶಾಸಕಿ ಪುತ್ರ ಹಾಗೂ ತಂಡವು ಟೋಲ್‌ಗೇಟ್‌ ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.