4 ತಿಂಗಳುಗಳಿಂದ ಟೊಮೆಟೋ ಬೆಲೆ ಇದ್ದಕ್ಕಿದ್ದಂತೆ ಪಾತಾಳಕ್ಕೆ : ರೈತರಲ್ಲಿ ಆತಂಕ ಸೃಷ್ಟಿ

| N/A | Published : Mar 29 2025, 12:38 AM IST / Updated: Mar 29 2025, 12:10 PM IST

Tomato
4 ತಿಂಗಳುಗಳಿಂದ ಟೊಮೆಟೋ ಬೆಲೆ ಇದ್ದಕ್ಕಿದ್ದಂತೆ ಪಾತಾಳಕ್ಕೆ : ರೈತರಲ್ಲಿ ಆತಂಕ ಸೃಷ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 4 ತಿಂಗಳುಗಳಿಂದ ಟೊಮೆಟೋ ಬೆಲೆ ಇದ್ದಕ್ಕಿದ್ದಂತೆ ಪಾತಾಳಕ್ಕೆ ಇಳಿದಿದ್ದು ರೈತರು ಕಂಗಾಲಾಗಿದ್ದಾರೆ, ಕೋಟ್ಯಂತರ ರು.ಗಳ ನಷ್ಟ ತಾಲೂಕಿನ ರೈತರು ಅನುಭವಿಸುತ್ತಿದ್ದು, ಕನಿಷ್ಠ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾರ್ಕೆಟ್‌ಗಳಿಗೆ ರೈತರ ಟೊಮೆಟೋ ತೋಟಗಳಿಗಾಗಲಿ ಭೇಟಿ ನೀಡಿ ಪರಿಶೀಲಿಸಿಲ್ಲ.

 ಮುಳಬಾಗಿಲು :   ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೭೫ರ ಎನ್.ವಡ್ಡಹಳ್ಳಿ ಎಪಿಎಂಸಿ ಉಪ ಮಾರುಕಟ್ಟೆ ಟೊಮೊಟೋ ಮಂಡಿಗಳಲ್ಲಿ ಹರಾಜು ಆಗುತ್ತಿರುವ ಟೊಮೆಟೋ ಬೆಲೆ ದಿಢೀರ್ ಕುಸಿತಗೊಂಡಿದ್ದು ಇದರಿಂದ ರೈತಾಪಿ ವರ್ಗ ಕಂಗಾಲಾಗಿದ್ದಾರೆ.ತಾಲೂಕಿನ ವಿವಿಧ ಗ್ರಾಮಗಳಿಂದ ಪ್ರತಿದಿನ ರೈತರು ಸುಮಾರು 30000 ಬಾಕ್ಸ್‌ಗಳಲ್ಲಿ ಟೊಮೆಟೋ ತುಂಬಿಕೊಂಡು ಎನ್.ವಡ್ಡಹಳ್ಳಿ ಟೊಮೇಟೊ ಮಂಡಿಗಳಲ್ಲಿ ಹರಾಜಿಗೆ ತಂದಿದ್ದರು. ಪ್ರತಿ ೧೫ ಕೆಜಿ ತೂಕದ ಒಂದು ಬಾಕ್ಸ್ ಕೇವಲ 50 ರಿಂದ 100 ರೂ ಗಳಿಗೆ ಬಿಕರಿಯಾಗುತ್ತಿದ್ದು ಇದರಿಂದ ರೈತರು ನಷ್ಟಕ್ಕೆ ಒಳಗಾಗಿದ್ದಾರೆ.ಎಕರೆಗೆ ₹2.5 ಲಕ್ಷ ವೆಚ್ಚ

ಒಂದು ಎಕರೆ ಪ್ರದೇಶದಲ್ಲಿ ಟೊಮೆಟೋ ಬೆಳೆಯಲು ಸುಮಾರು ಎರಡೂವರೆ ಲಕ್ಷ ಖರ್ಚು ಬರುತ್ತದೆ, ರೈತರಿಗೆ ಆದರೆ ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಟೊಮೆಟೋಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಂಡಿಗಳಲ್ಲಿ ರೈತರ ಕೈಗೆ ಕೇವಲ 10 ರಿಂದ 20 ಸಾವಿರ ಸಿಗುತಿದೆ. ಕೋಲಾರ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಕೋಲಾರ ಎಪಿಎಂಸಿ ಟೊಮೆಟೋ ಮಾರುಕಟ್ಟೆ ಒಂದನೇ ಸ್ಥಾನ ಪಡೆದಿದ್ದರೆ, ಜಿಲ್ಲೆಯಲ್ಲಿ ತಾಲೂಕಿನ ಎನ್.ವಡ್ಡಹಳ್ಳಿ ಟೊಮೆಟೋ ಮಾರ್ಕೆಟ್ ಎರಡನೇ ಸ್ಥಾನ ಹೊಂದಿದೆ, ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಿಂದ ಸೇರಿದಂತೆ ನೆರೆಯ ಆಂಧ್ರ ಪ್ರದೇಶ ತೆಲಂಗಾಣ ಚೆನ್ನೈ ಮಹಾರಾಷ್ಟ್ರ ಮಧ್ಯಪ್ರದೇಶ ತಮಿಳುನಾಡು ಮತ್ತಿತರೆ ರಾಜ್ಯಗಳಿಂದ ಮಾರ್ಕೆಟ್‌ಗೆ ಟೊಮೆಟೋ ಖರೀದಿಸಲು ವ್ಯಾಪಾರಸ್ಥರು ಬರುತ್ತಾರೆ.

ರೈತರಿಗೆ ಪರಿಹಾರ ನೀಡಲಿ

ಕಳೆದ ೪ ತಿಂಗಳುಗಳಿಂದ ಟೊಮೆಟೋ ಬೆಲೆ ಇದ್ದಕ್ಕಿದ್ದಂತೆ ಪಾತಾಳಕ್ಕೆ ಇಳಿದಿದ್ದು ರೈತರು ಕಂಗಾಲಾಗಿದ್ದಾರೆ, ಕೋಟ್ಯಂತರ ರು.ಗಳ ನಷ್ಟ ತಾಲೂಕಿನ ರೈತರು ಅನುಭವಿಸುತ್ತಿದ್ದು, ಕನಿಷ್ಠ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾರ್ಕೆಟ್‌ಗಳಿಗೆ ರೈತರ ಟೊಮೆಟೋ ತೋಟಗಳಿಗಾಗಲಿ ಭೇಟಿ ನೀಡಿ ಪರಿಶೀಲಿಸಿಲ್ಲ ಇದರಿಂದ ರೈತಾಪಿ ವರ್ಗದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು ಕೂಡಲೇ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ನಷ್ಟಕ್ಕೆ ಪರಿಹಾರ ತಲುಪಿಸಲು ಮುಂದಾಗಬೇಕಾಗಿದೆ.ಸ್ಥಳೀಯ ಶಾಸಕ ಸಮೃದ್ಧಿ ಮಂಜುನಾಥ್, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಟೊಮೆಟೋ ಬೆಲೆಗೆ ಬೆಂಬಲ ಬೆಲೆ ಸರ್ಕಾರದಿಂದ ಕೊಡಿಸಿ ರೈತರ ನಷ್ಟಕ್ಕೆ ಪರಿಹಾರ ಕಲ್ಪಿಸುವಂತೆ ರೈತರು ಒತ್ತಾಯಿಸಿದ್ದಾರೆ.ಟೊಮೆಟೋ ಬೆಲೆ ಧೀಡಿರ್ ಕುಸಿತದಿಂದ ಬೇಸರಗೊಂಡಿರುವ ರೈತರು ಕೂಲಿ ಸಹ ಸಿಗುತ್ತಿಲ್ಲ ಎಂದು ಟೊಮೆಟೋ ಮಂಡಿಗಳಿಗೆ ಸಾಗಿಸದೆ ರಸ್ತೆ ಬದಿಗಳಲ್ಲಿ ಟೊಮೆಟೋಗಳನ್ನು ಎಸೆಯುತ್ತಿದ್ದು ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸಿ ಪರಿಹಾರಕ್ಕೆ ಮುಂದಾಗಬೇಕಾಗಿದೆ.