ಟೊಮೆಟೋ ದರ ಮತ್ತೆ ಏರಿಕೆ: ರೈತರಿಗೆ ಹರ್ಷ

| Published : Oct 21 2024, 12:38 AM IST

ಸಾರಾಂಶ

ಕಳೆದ ವಾರ ಸತತ ಮಳೆ ಇದ್ದಿದ್ದರಿಂದ ರೈತರು ಮಳೆಗೆ ತೋಟದಲ್ಲೆ ಟೊಮೆಟೋ ಕೊಳೆತು ಹೋಗುತ್ತದೆ ಎಂದು ತೋಟದಲ್ಲಿದ್ದ ಹಣ್ಣು ಮತ್ತು ಕಾಯಿಗಳನ್ನು ಗುರುವಾರ, ಶುಕ್ರವಾರ ಕಿತ್ತು ಮಾರುಕಟ್ಟೆಗೆ ಬಂದಿದ್ದರಿಂದ ಆವಕ ಹೆಚ್ಚಾಗಿ ಶುಕ್ರವಾರ ದರ ಕುಸಿತಕ್ಕೆ ಕಾರಣವಾಗಿತ್ತು. ಇನ್ನೂ ಎರಡು ವಾರ ಟೊಮೆಟೋ ದರ ಏರಿಕೆ ಮುಂದುವರಿಯಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಳೆದೆರಡು ತಿಂಗಳಿಂದ ಸತತ ಏರಿಕೆ ಕಂಡು ಶುಕ್ರವಾರ ಏಕಾಏಕಿ ಇಳಿಕೆ ಕಂಡಿದ್ದ ಟೊಮೆಟೋ ಮತ್ತೆ ಶನಿವಾರದಿಂದ ದರ ಏರಿಕೆ ಕಂಡಿದೆ. ಹಾಗೆಯೇ ಇಳಿ ಮುಖವಾಗಿದ್ದ ತರಕಾರಿಗಳ ಬೆಲೆಯೂ ಗಗನಮುಖಿಯಾಗಿ ರೈತರ ಮೊಗದಲ್ಲಿ ಹರ್ಷತಂದರೆ, ಗ್ರಾಹಕರ ಜೇಬಿಗೆ ಹೊರೆಯಾಗಿದೆ.

ಸದ್ಯ ಉತ್ತಮ ಗುಣಮಟ್ಟದ ಟೊಮೆಟೋ ಬೆಲೆ ಒಂದು ಕೆಜಿಗೆ 70 ರು.ಗಳಿಂದ 80 ವರೆಗೆ ಮಾರಾಟವಾಗುತ್ತಿದೆ. ಟೊಮೆಟೋ ಹೊರತಾಗಿ ಎಲ್ಲ ಬಗೆಯ ತರಕಾರಿಗಳ ಬೆಲೆಯೂ ಏರಿಕೆಯಾಗಿದೆ. ಕಳೆದ ವರ್ಷ ಟೊಮೆಟೋ ಬೆಲೆ ಸಾಕಷ್ಟು ಏರಿಕೆಯಾಗಿ ಟೊಮೆಟೋ ರೈತರು ಉತ್ತಮ ಆದಾಯ ಗಳಿಸಿದ್ದರು, ದರ ಹೆಚ್ಚಾದಾಗಲೆಲ್ಲ ರೈತರಿಗೆ ಕಳ್ಳರ ಕಾಟದ ಭೀತಿ ಎದುರಾಗುತ್ತಿದೆ.

ಟೊಮೆಟೋ ದರ ಚೇತರಿಕೆ

ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಟೊಮೆಟೋ ಬೆಲೆ ಮತ್ತೆ ಏರಿಕೆಯಾಗಿದೆ. ಕಳೆದ ಗುರುವಾರದವರೆಗೂ 14 ಕೆಜಿ ತೂಕದ ಒಂದು ಬಾಕ್ಸ್ ಟೊಮೆಟೋ ಬೆಲೆ 900 ರು. ಗಳಿಂದ 1300 ರು.ವರೆಗೂ ಗಡಿ ದಾಟಿತ್ತು. ಆದರೆ ಶುಕ್ರವಾರ ಏಕಾಏಕಿ14 ಕೆಜಿ ತೂಕದ ಒಂದು ಬಾಕ್ಸ್ ಬೆಲೆ 100 ರಿಂದ 300 ರು.ಗೆ ಕುಸಿತವಾಗಿತ್ತು. ಈಗ ಟೊಮೆಟೋ ಬೆಲೆ ಶನಿವಾರದಿಂದ ಚೇತರಿಕೆ ಕಂಡಿದ್ದು, ಕನಿಷ್ಠ 300ರಿಂದ ಗರಿಷ್ಠ 600 ರು.ವರೆಗೆ ಮಾರಾಟವಾಗುತ್ತಿದೆ.

ಕಳೆದ ವಾರ ಸತತ ಮಳೆ ಇದ್ದಿದ್ದರಿಂದ ರೈತರು ಮಳೆಗೆ ತೋಟದಲ್ಲೆ ಟೊಮೆಟೋ ಕೊಳೆತು ಹೋಗುತ್ತದೆ ಎಂದು ತೋಟದಲ್ಲಿದ್ದ ಹಣ್ಣು ಮತ್ತು ಕಾಯಿಗಳನ್ನು ಗುರುವಾರ, ಶುಕ್ರವಾರ ಕಿತ್ತು ಮಾರುಕಟ್ಟೆಗೆ ಬಂದಿದ್ದರಿಂದ ಆವಕ ಹೆಚ್ಚಾಗಿ ಶುಕ್ರವಾರ ದರ ಕುಸಿತಕ್ಕೆ ಕಾರಣವಾಗಿತ್ತು. ಇನ್ನೂ ಎರಡು ವಾರ ಟೊಮೆಟೋ ದರ ಏರಿಕೆ ಮುಂದುವರಿಯಲಿದೆ ಎಂದು ಎಪಿಎಂಸಿ ಮಾರುಕಟ್ಟೆ ಟೊಮೆಟೋ ಮಂಡಿ ವರ್ತಕರು ಅಭಿಪ್ರಾಯಪಟ್ಟಿದ್ದಾರೆ.ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್ ಗಢ, ದೆಹಲಿ, ಜಾರ್ಖಂಡ್ , ಮಹಾರಾಷ್ಟ್ರ,ತಮಿಳುನಾಡು, ಆಂಧ್ರಪ್ರದೇಶ, ತೆಲಾಂಗಣ ಮತ್ತಿತರ ರಾಜ್ಯಗಳಿಗೆ ಟೊಮೆಟೋ ಪೂರೈಸಲಾಗುತ್ತಿದೆ. ಈ ರಾಜ್ಯಗಳಲ್ಲಿ ಸತತ ಮಳೆಯಿಂದ ಟೊಮೆಟೋ ಇಳುವರಿ ಕಡಿಮೆಯಾದ್ದರಿಂದ ಟೊಮೆಟೋಗೆ ಬೇಡಿಕೆ ಬಂದಿದೆ.

ಮಳೆಯಿಂದ ತರಕಾರಿ ಬೆಳೆ ಹಾನಿ

ಅದೇ ರೀತಿ ರಾಜ್ಯಾದ್ಯಂತ ಸತತ ಸಾಕಷ್ಟು ಮಳೆ ಬಿದ್ದ ಪರಿಣಾಮ ತರಕಾರಿ ಬೆಳೆಗಳು ಹಾಳಾಗಿದ್ದು, ಹೆಚ್ಚಿನ ತರಕಾರಿ ಬೆಲೆ ಏರುಗತಿಯಲ್ಲೇ ಇದೆ. ಸದಾ 20 ರು.ನಿಂದ 30ರ ಆಸುಪಾಸಿನಲ್ಲಿರುತ್ತಿದ್ದ ಬೀಟ್‌ರೂಟ್‌ ದರ ಇದೀಗ 50 ರು.ಗೆ ಏರಿಕೆಯಾಗಿದೆ. ಕ್ಯಾರೆಟ್‌ ದರ ಎರಡು ತಿಂಗಳಿಂದ ಕೆ.ಜಿ.ಗೆ 50ರಿಂದ 60 ರು. ಇದೆ. ಹಾಗಲಕಾಯಿ 50 ರು, ಸೋರೆಕಾಯಿ 50 ರು. ಇದೆ. ಮೂಲಂಗಿ, ಬದನೆಕಾಯಿ, ನವಿಲುಕೋಸು 40ರಿಂದ 50ರು. ನುಗ್ಗೆಕಾಯಿ 40ರಿಂದ 100 ರು.ಗಳ ವರೆಗೆ ಮಾರಾಟವಾಗುತ್ತಿವೆ.

ಈರುಳ್ಳಿ, ಬೆಳ್ಳುಳ್ಳಿ ದರ ಏರಿಕೆ

ಕೊತ್ತಂಬರಿ ಸೊಪ್ಪು ಕೆಜಿಗೆ 80 ರು., ಬೀನ್ಸ್‌ 100 ರಿಂದ 120 ಮತ್ತಿತರ ತರಕಾರಿಗಳ ದರವೂ ಏರಿಕೆಯಾಗಿದೆ. ಶುಂಠಿ ಮಾತ್ರ 50 ರಿಂದ 100 ರು.ಗೆ ಮಾರಾಟವಾಗುತ್ತಿದ್ದು, ಈರುಳ್ಳಿ, ಬೆಳ್ಳುಳ್ಳಿ, ದರ ಮತ್ತೆ ಗಗನ ಮುಖಿಯಾಗಿದೆ. ಈರುಳ್ಳಿ ಕೆ.ಜಿ.ಗೆ 60 ರು. ಬೆಳ್ಳುಳ್ಳಿ ಕೆಜಿಗೆ 300 ರಿಂದ 500 ರು.ಗೆ ಏರಿಕೆಯಾಗಿದೆ. ಆಲೂಗಡ್ಡೆ 50ರಿಂದ 60 ರು. ನಂತೆ ಮಾರಾಟವಾಗುತ್ತಿದೆ.