ಟೊಮೊಟೊ ಆಯ್ತು, ಈಗ ಬೆಳ್ಳುಳ್ಳಿ ಕಿಲೋಗೆ ₹ 200!

| Published : Oct 09 2023, 12:46 AM IST

ಸಾರಾಂಶ

ಎರಡ್ಮೂರು ತಿಂಗಳ ಹಿಂದೆ ಟೊಮೆಟೊ ಬೆಲೆ ಮುಗಿಲೆತ್ತರಕ್ಕೇರಿ ಗ್ರಾಹಕರಲ್ಲಿ ಆಹಾಕಾರ ಉಂಟು ಮಾಡಿತ್ತು, ಇದೀಗ ಬೆಳ್ಳುಳ್ಳಿ ಸರದಿ. 1 ಕೇಜಿ ಬಳ್ಳೊಳ್ಳಿ ಬರೋಬ್ಬರಿ ₹ 200!

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಎರಡ್ಮೂರು ತಿಂಗಳ ಹಿಂದೆ ಟೊಮೆಟೊ ಬೆಲೆ ಮುಗಿಲೆತ್ತರಕ್ಕೇರಿ ಗ್ರಾಹಕರಲ್ಲಿ ಆಹಾಕಾರ ಉಂಟು ಮಾಡಿತ್ತು, ಇದೀಗ ಬೆಳ್ಳುಳ್ಳಿ ಸರದಿ. 1 ಕೇಜಿ ಬಳ್ಳೊಳ್ಳಿ ದರ ಬರೋಬ್ಬರಿ ₹ 200!

ದಪ್ಪ ಬೆಳ್ಳುಳ್ಳಿ ಒಂದು ಕ್ವಿಂಟಲ್‌ಗೆ ₹18 ಸಾವಿರಗಳಿಂದ 20 ಸಾವಿರದ ವರೆಗೆ ಮಾರಾಟವಾಗುತ್ತಿದೆ. ಸಣ್ಣ ಬೆಳ್ಳುಳ್ಳಿಗೆ ₹15 ಸಾವಿರ ವರೆಗೆ ಬೆಲೆಯಿದೆ. ಇತ್ತೀಚೆಗೆ ದಪ್ಪ ಬೆಳ್ಳುಳ್ಳಿ ₹10 ಸಾವಿರದಿಂದ 12 ಸಾವಿರ ವರೆಗೆ ಮಾರಾಟವಾಗಿತ್ತು. ಆದರೀಗ ಬೆಳ್ಳುಳ್ಳಿ ಖರೀದಿಸಲು ದೂರದ ಬಳ್ಳಾರಿ, ಶಿವಮೊಗ್ಗ, ಕೊಪ್ಪಳ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ದಾವಣಗೆರೆ ಜಿಲ್ಲೆಗಳಿಂದ ವ್ಯಾಪಾರಸ್ಥರು ಬರುತ್ತಿರುವ ಕಾರಣ ಕ್ವಿಂಟಲ್‌ಗೆ ₹10 ಸಾವಿರ ಹೆಚ್ಚಳವಾಗಿದೆ.

ಹಿಂದೆ ಮಾರುಕಟ್ಟೆಯಲ್ಲಿ ಕೇಜಿಗಟ್ಟಲೇ ಬೆಳ್ಳುಳ್ಳಿ ಖರೀದಿಸುತ್ತಿದ್ದ ಗ್ರಾಹಕರು ಇದೀಗ 100, 200 ಗ್ರಾಂ ಎನ್ನುತ್ತಿದ್ದಾರೆ. ಇದ್ದಕ್ಕಿದ್ದಂತೆ ದ್ವೀಗುಣ ಆಗಿರುವ ಬಳ್ಳೊಳ್ಳಿ ದರ ಕಂಡು ಗ್ರಾಹಕರು ಹೌಹಾರಿದ್ದಾರೆ.

ರೈತರ ಮೊಗದಲ್ಲಿ ನಗು:

ರಾಣಿಬೆನ್ನೂರು, ಹಿರೇಕೆರೂರು, ಬ್ಯಾಡಗಿ ಹಾಗೂ ಗುತ್ತಲ ಭಾಗದ ರೈತರು ಅಲ್ಪಸ್ವಲ್ಪವಾಗಿ ಬೆಳೆದ ಬೆಳ್ಳುಳ್ಳಿ ಬೆಳೆಯನ್ನು ರಕ್ಷಿಸಿ ಗೋದಾಮು, ಮನೆಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಆ ರೈತರು ಸದ್ಯ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ತರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಗೆ ಉತ್ತಮ ದರ ಲಭಿಸುತ್ತಿದೆ. ಮಾರುಕಟ್ಟೆಯಲ್ಲಿ ಗಾತ್ರದ ಆಧಾರದ ಮೇಲೆ ಬೆಲೆ ದರ ನಿಗದಿಯಾಗಿದೆ.

ಮಳೆ ಕೊರತೆ, ಬೆಳೆ ಕುಸಿತ:

ಬೆಳ್ಳುಳ್ಳಿ ಮಳೆಯಾಶ್ರಿತ ಬೆಳೆ. ಮಳೆಯನ್ನು ನಂಬಿ ಬಿತ್ತನೆ ಮಾಡುತ್ತಾರೆ. ಈ ಬಾರಿ ಮಳೆ ಕೊರತೆಯಿಂದ ಬಹುತೇಕ ರೈತರ ಬೆಳ್ಳುಳ್ಳಿ ಸರಿಯಾಗಿ ಬೆಳೆದಿಲ್ಲ. ನೀರಾವರಿ ಹಾಗೂ ಟ್ರ್ಯಾಕ್ಟರ್ ಮೂಲಕ ನೀರು ಹಾಯಿಸಿ ಬೆಳೆಸಿದ ಬೆಳ್ಳುಳ್ಳಿ ಅಲ್ಪಸ್ವಲ್ಪ ರೈತರ ಕೈಗೆ ದೊರೆತಿದೆ. ಅವರು ಅದನ್ನು ಮಾರುಕಟ್ಟೆಗೆ ತರಲು ಶುರು ಮಾಡಿದ್ದಾರೆ. ಅಲ್ಲದೆ ಮಳೆ ಕೊರತೆಯಿಂದ ಈ ಬಾರಿ ಬೆಳ್ಳುಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಅಕ್ಕಪಕ್ಕದ ಹಾಗೂ ಬೇರೆ ಜಿಲ್ಲೆಯಲ್ಲೂ ಮಳೆ ಕೊರತೆ ಪರಿಣಾಮ ಅಲ್ಲಿಯ ರೈತರ ಬಳಿಯೂ ಬೆಳ್ಳುಳ್ಳಿ ಸಿಗುತ್ತಿಲ್ಲ.

ಬೆಳೆಯಿಂದ ವಿಮುಖ:

ತಾಲೂಕಿನಲ್ಲಿ ಕಳೆದ ವರ್ಷ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದ ಬೆಳ್ಳುಳ್ಳಿಯ ಕ್ಷೇತ್ರ ಈ ಬಾರಿ 300 ಹೆಕ್ಟೇರಿಗೆ ಕುಸಿದಿದೆ.

ಹಲಗೇರಿ, ಇಟಗಿ, ಮಾಗೋಡ, ಯರೇಕುಪ್ಪಿ, ಸುಣಕಲ್ಲ ಬಿದರಿ, ಬೆನಕನಕೊಂಡ, ಮುಷ್ಟೂರ, ಮಣಕೂರ ಗ್ರಾಮಗಳು ಬೆಳ್ಳುಳ್ಳಿ ಬೆಳೆಯುವ ಪ್ರಮುಖ ಪ್ರದೇಶ. ಆದರೆ ಹಲವಾರು ಕಾರಣಗಳಿಂದ ರೈತರು ಈ ಬೆಳೆಯಿಂದ ವಿಮುಖರಾಗುತ್ತಿದ್ದಾರೆ.

ನಮ್ಮ ಭಾಗದಲ್ಲಿ ಬೆಳ್ಳುಳ್ಳಿ ಬೆಳೆಯುವುದು ಕಡಿಮೆಯಾಗಿದೆ. ಈ ವರ್ಷ ಬೆಳೆಗಾಗಿ ಸಾಕಷ್ಟು ಖರ್ಚು ಮಾಡಲಾಗಿದೆ. ಆದರೆ ಮಳೆಯಾಗಲಿಲ್ಲ. ನಾವು ಬೋರ್‌ವೆಲ್ ನೀರು ಹಾಯಿಸಿ ಅಲ್ಪ ಬೆಳೆ ತೆಗೆದಿದ್ದು ಉತ್ತಮ ಬೆಲೆ ಲಭಿಸುತ್ತಿರುವುದು ಸಮಾಧಾನ ತಂದಿದೆ ಎನ್ನುತ್ತಾರೆ ಬೆಳ್ಳುಳ್ಳಿ ಬೆಳೆದ ಮಣಕೂರ ಗ್ರಾಮದ ರೈತ ಗೋವಿಂದಪ್ಪ.