ಸಾರಾಂಶ
ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಮೇ 20ಕ್ಕೆ 2 ವರ್ಷ ತುಂಬಲಿದ್ದು, ಈ ನಿಮಿತ್ತ ಹೊಸಪೇಟೆಯಲ್ಲಿ ಮೇ 20ರಂದು ‘ಸಮರ್ಪಣೆ ಸಂಕಲ್ಪ ಸಮಾವೇಶ’ ನಡೆಯಲಿದೆ.
ಹೊಸಪೇಟೆ : ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಮೇ 20ಕ್ಕೆ 2 ವರ್ಷ ತುಂಬಲಿದ್ದು, ಈ ನಿಮಿತ್ತ ಹೊಸಪೇಟೆಯಲ್ಲಿ ಮೇ 20ರಂದು ‘ಸಮರ್ಪಣೆ ಸಂಕಲ್ಪ ಸಮಾವೇಶ’ ನಡೆಯಲಿದೆ.
ಬ್ರಿಟಿಷ್ ಕಾಲಾವಧಿಯಿಂದ ದಾಖಲೆ ಇಲ್ಲದೆ ಬದುಕುತ್ತಿರುವ ತಾಂಡಾ, ಹಟ್ಟಿ, ಹಾಡಿ, ಕ್ಯಾಂಪ್, ಕಾಲನಿ, ಮಜಿರೆಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಸಮಾವೇಶದಲ್ಲಿ 1,11,111 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ರಾಜ್ಯ ಸರ್ಕಾರ ಯೋಜಿಸಿದೆ. ಈ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾವೇಶಕ್ಕಾಗಿ ಭವ್ಯ ವೇದಿಕೆ ನಿರ್ಮಿಸಲಾಗಿದ್ದು, ಸಮಾವೇಶದ ಯಶಸ್ಸಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ರಾಜ್ಯದ 31 ಜಿಲ್ಲೆಗಳ 1,11,111 ಫಲಾನುಭವಿಗಳಿಗೆ ಹಕ್ಕುಪತ್ರ ನೀಡುತ್ತಿರುವ ಹಿನ್ನೆಲೆಯಲ್ಲಿ ತಾಂಡಾ, ಹಟ್ಟಿ, ಹಾಡಿ, ತಾಂಡಾ, ಕ್ಯಾಂಪ್, ಕಾಲನಿ, ಮಜಿರೆಗಳಲ್ಲೂ ಸಂಭ್ರಮ ಮನೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಹೊಣೆಯನ್ನು ಸಚಿವರಾದ ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್‌ಗೆ ವಹಿಸಿದ್ದಾರೆ. ಈಗಾಗಲೇ ಉಭಯ ಸಚಿವರು ಹೊಸಪೇಟೆಯಲ್ಲಿ ಬೀಡು ಬಿಟ್ಟಿದ್ದು, ವೇದಿಕೆ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕಾರ್ಯಕ್ರಮಕ್ಕೆ 4 ಲಕ್ಷ ಜನರು ಬರುವ ನಿರೀಕ್ಷೆ ಇದ್ದು, 10 ಸಾವಿರ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಉಭಯ ಸಚಿವರು ತಿಳಿಸಿದ್ದಾರೆ.
200 ಅಡಿ ಅಗಲ, 70 ಅಡಿ ಉದ್ದದ ಪ್ರಧಾನ ವೇದಿಕೆ ನಿರ್ಮಿಸಲಾಗುತ್ತಿದೆ. ಇನ್ನೂ ಎರಡು ಕಿರು ವೇದಿಕೆಗಳು ನಿರ್ಮಾಣವಾಗುತ್ತಿವೆ. ವೇದಿಕೆಯ ಅಕ್ಕಪಕ್ಕ ಹಾಗೂ ಹೊರಗಡೆ ಹಂಪಿ ಸ್ಮಾರಕಗಳ ಕಂಬಗಳನ್ನು ಬಳಕೆ ಮಾಡಲಾಗುತ್ತಿದೆ. 1 ಲಕ್ಷ 50 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ 50 ಸಾವಿರ ಕುರ್ಚಿಗಳನ್ನು ತರಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಸಂಪುಟದ ಸಚಿವರು, ಶಾಸಕರು, ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಜಮೀರ್ ತಿಳಿಸಿದ್ದಾರೆ.
ಏನಿದು ಕಂದಾಯ ಗ್ರಾಮ?
ಈ ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿರುವ ತಾಂಡಾ, ಹಟ್ಟಿ, ಹಾಡಿ, ಕ್ಯಾಂಪ್, ಕಾಲನಿ, ಮಜಿರೆಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಆಗಿನ ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ ಸದನದಲ್ಲಿ ಹೋರಾಟ ನಡೆಸಿದ್ದರು. ಆ ಬಳಿಕ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ಆಗಿನ ಸಿದ್ದರಾಮಯ್ಯ ಸರ್ಕಾರವೇ ಇದಕ್ಕಾಗಿ ವಿಶೇಷ ಕಾಯ್ದೆ (94ಸಿ ಹಾಗೂ 94 ಸಿಸಿ ) ರೂಪಿಸಿತ್ತು. ಆಗಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಈ ಕಾಯ್ದೆಯ ಅನುಷ್ಠಾನಕ್ಕೆ ವಿಶೇಷ ಒತ್ತು ನೀಡಿದ್ದರು. ಬಳಿಕ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲೂ ಕಂದಾಯ ಗ್ರಾಮಗಳನ್ನಾಗಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿತ್ತು. ಈಗ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಈ ಕಾರ್ಯಕ್ರಮಕ್ಕೆ ವಿಶೇಷ ಒತ್ತು ನೀಡಿದ್ದರಿಂದ ವಿಜಯನಗರ ಜಿಲ್ಲೆಯೊಂದರಲ್ಲೇ 20 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ರಾಜ್ಯದ 31 ಜಿಲ್ಲೆಗಳ 1,11,111 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ.
ತಾಂಡಾ, ಹಟ್ಟಿ, ಹಾಡಿ, ಕ್ಯಾಂಪ್, ಕಾಲನಿ, ಮಜಿರೆಗಳಲ್ಲಿ ವಾಸಿಸುತ್ತಿರುವ ಜನರ ಮನೆಗಳು ಅವರ ಹೆಸರಿನಲ್ಲಿ ಇಲ್ಲದ್ದರಿಂದ ಬ್ಯಾಂಕ್ ಸಾಲ ಸೌಲಭ್ಯ ಸೇರಿದಂತೆ ಇತರ ಸೌಲಭ್ಯಗಳಿಂದ ಅವರು ವಂಚಿತರಾಗುತ್ತಿದ್ದರು. ಸರ್ಕಾರಿ ಹಾಗೂ ಖಾಸಗಿಯವರ ಹೆಸರಿನಲ್ಲೇ ಇವರ ಮನೆಗಳು ಇರುತ್ತಿದ್ದವು. ಈಗ ಅವರ ಹೆಸರಿಗೆ ಈ ಮನೆಗಳನ್ನು ಮಾಡಿಕೊಡಲಾಗುತ್ತಿದೆ. ಇದರಿಂದಾಗಿ ಈಗ ತಾಂಡಾ, ಹಟ್ಟಿ, ಹಾಡಿ, ತಾಂಡಾ, ಕ್ಯಾಂಪ್, ಕಾಲನಿ, ಮಜಿರೆಗಳಲ್ಲೂ ಸಂಭ್ರಮ ಮನೆ ಮಾಡಿದೆ.
ಸರ್ಕಾರ ನೀಡುವ ದಾಖಲೆಗಳು:
ವಿಜಯನಗರ ಜಿಲ್ಲೆಯಲ್ಲೇ 349 ತಾಂಡಾ, ಹಟ್ಟಿ, ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, ಈ ಜಿಲ್ಲೆಯವರೇ 20 ಸಾವಿರ ಫಲಾನುಭವಿಗಳಿದ್ದಾರೆ. ಸರ್ಕಾರದಿಂದ ಫಲಾನುಭವಿಗಳಿಗೆ ನೋಂದಣಿ ಕರಾರುಪತ್ರ, ಹಕ್ಕುಪತ್ರ, ಇ-ಸ್ವತ್ತು ನೀಡಲಾಗುತ್ತದೆ. ರಾಜ್ಯದ ಇತರ ಜಿಲ್ಲೆಗಳ ಫಲಾನುಭವಿಗಳಿಗೂ ಇದೇ ದಾಖಲೆ ನೀಡಲು ಸರ್ಕಾರ ಯೋಜಿಸಿದೆ. ಇದರಿಂದ ತಾಂಡಾ, ಹಟ್ಟಿ, ಹಾಡಿ, ಕ್ಯಾಂಪ್, ಕಾಲನಿ, ಮಜಿರೆಗಳ ನಿವಾಸಿಗಳು ಮನೆ ಮಾಲೀಕರಾಗಲಿದ್ದಾರೆ. ಇದರಿಂದಾಗಿ ಅವರಿಗೆ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಸೇರಿದಂತೆ ಇತರ ಸೌಲಭ್ಯವೂ ದೊರೆಯಲಿದೆ. ಇದೊಂದು ಕ್ರಾಂತಿಕಾರಕ ಹೆಜ್ಜೆ ಎನ್ನುತ್ತಾರೆ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಶಾಂತಿನಗರ ತಾಂಡಾದ ಬಂಜಾರ ಸಮಾಜದ ಮುಖಂಡ ಅನಂತ ನಾಯ್ಕ.
ತಾಂಡಾ, ಹಟ್ಟಿ, ಹಾಡಿ, ಕ್ಯಾಂಪ್, ಕಾಲನಿ, ಮಜಿರೆಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ 1,11,111 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕಾರ್ಯಕ್ರಮ ಸಾಕಾರಗೊಳ್ಳುತ್ತಿದೆ.
- ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್, ಸಚಿವರು
ಕಡುಬಡವರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಅದರಲ್ಲೂ ವಿಜಯನಗರ ಜಿಲ್ಲೆಯಲ್ಲೇ 20 ಸಾವಿರ ಫಲಾನುಭವಿಗಳಿದ್ದಾರೆ. ಈ ಫಲಾನುಭವಿಗಳಿಗೆ ಹಕ್ಕುಪತ್ರದ ಗೌರವ ದೊರಕಿಸುವ ಅವಕಾಶ ಲಭಿಸಿರುವುದು ನನ್ನ ಸೌಭಾಗ್ಯ.
- ಎಂ.ಎಸ್. ದಿವಾಕರ, ಜಿಲ್ಲಾಧಿಕಾರಿ ವಿಜಯನಗರ.
- ಬ್ರಿಟಿಷರ ಕಾಲಾವಧಿಯಿಂದ ದಾಖಲೆ ಇಲ್ಲದೆ ಬದುಕುತ್ತಿರುವ ತಾಂಡಾ, ಹಟ್ಟಿ, ಹಾಡಿ, ಕ್ಯಾಂಪ್, ಕಾಲನಿ ಜನ- ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿ ನಾಳೆ 1,11,111 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಸಿದ್ಧತೆ- ಸರ್ಕಾರದ 2ನೇ ವರ್ಷಾಚರಣೆ ದಿನವಾದ ಮೇ 20ರಂದು ಹೊಸಪೇಟೆಯಲ್ಲಿ ಸಮಾವೇಶ ಆಯೋಜಿಸಿ ವಿತರಣೆ
ಕೃಷ್ಣ ಲಮಾಣಿ