ನಾಳೆ ಶೃಂ.ಕೊ.ನ. ನಗರಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

| Published : Jul 05 2024, 12:51 AM IST

ಸಾರಾಂಶ

ಕೊಪ್ಪ, ಅಮ್ಮ ಫೌಂಡೇಶನ್‌ನ ಸಂಸ್ಥಾಪಕ, ಜೆಡಿಎಸ್‌ನ ರಾಜ್ಯ ಹಿರಿಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿಯವರ ಹುಟ್ಟುಹಬ್ಬದ ಪ್ರಯುಕ್ತ ಶನಿವಾರ ಅಮ್ಮ ಫೌಂಡೇಶನ್ ಆಶ್ರಯದಲ್ಲಿ ಶೃಂಗೇರಿ, ಕೊಪ್ಪ, ನ.ರಾ. ಪುರ ತಾಲೂಕುಗಳಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್‌ ಕ್ಷೇತ್ರಾಧ್ಯಕ್ಷ ಬಿ.ಎಚ್.ದಿವಾಕರ್ ಭಟ್ ಭಂಡಿಗಡಿ ತಿಳಿಸಿದ್ದಾರೆ.

ಜೆಡಿಎಸ್‌ ಕ್ಷೇತ್ರಾಧ್ಯಕ್ಷ ಬಿ.ಎಚ್.ದಿವಾಕರ್ ಭಟ್ ಭಂಡಿಗಡಿ ಮಾಹಿತಿ

ಕನ್ನಡಪ್ರಭ ವಾರ್ತೆ, ಕೊಪ್ಪ

ಅಮ್ಮ ಫೌಂಡೇಶನ್‌ನ ಸಂಸ್ಥಾಪಕ, ಜೆಡಿಎಸ್‌ನ ರಾಜ್ಯ ಹಿರಿಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿಯವರ ಹುಟ್ಟುಹಬ್ಬದ ಪ್ರಯುಕ್ತ ಶನಿವಾರ ಅಮ್ಮ ಫೌಂಡೇಶನ್ ಆಶ್ರಯದಲ್ಲಿ ಶೃಂಗೇರಿ, ಕೊಪ್ಪ, ನ.ರಾ. ಪುರ ತಾಲೂಕುಗಳಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್‌ ಕ್ಷೇತ್ರಾಧ್ಯಕ್ಷ ಬಿ.ಎಚ್.ದಿವಾಕರ್ ಭಟ್ ಭಂಡಿಗಡಿ ತಿಳಿಸಿದ್ದಾರೆ. ಬಾಳಗಡಿ ಪಕ್ಷದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಧಾಕರ್ ಶೆಟ್ಟಿಯವರ ತಾಯಿ ಹೆಸರಿನಲ್ಲಿ ಸ್ಥಾಪಿಸಲಾದ ಅಮ್ಮ ಫೌಂಡೇಶನ್ ಸಂಸ್ಥೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು ಕೊರೊನಾ ಸಮಯದಲ್ಲಿ ಫುಡ್‌ಕಿಟ್, ಫೇಸ್ ಮಾಸ್ಕ್, ಅನಾರೋಗ್ಯ ಪೀಡಿತರಿಗೆ ಆರೋಗ್ಯ ಕಿಟ್‌ಗಳು, ಆರ್ಥಿಕ ಸಹಾಯ ನೀಡಿದೆ. ಸಂಸ್ಥೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯಧನ, ಕಲಿಕಾ ಸಾಮಾಗ್ರಿಗಳು, ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಬೂಸ್ಟರ್, ಮಾಡೆಮ್, ವಾಟರ್ ಫಿಲ್ಟರ್, ಶಾಲಾ ಕೊಠಡಿ, ಶೌಚಾಲಯ ನಿರ್ಮಾಣ, ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗೆ ಅತಿಥಿ ಶಿಕ್ಷಕರ ನೇಮಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗಮೇಳ ಮುಂತಾದ ಅನೇಕ ಸಮಾಜಮುಖಿ ಕಾರ್ಯಕ್ರಮವನ್ನು ಅಮ್ಮ ಫೌಂಡೇಶನ್ ಮೂಲಕ ನಡೆಸುತ್ತಾ ಬಂದಿದ್ದು ಅಭಿಮಾನಿಗಳು ಆಚರಿಸುವ ತಮ್ಮ ಹುಟ್ಟುಹಬ್ಬವನ್ನು ಸಮಾಜಮುಖಿಯಾಗಿ ನಡೆಸಬೇಕೆನ್ನುವ ಶೆಟ್ಟರ ಉದ್ದೇಶದಂತೆ ಅವರ ಹುಟ್ಟಹಬ್ಬದಂದು ಹಲವಾರು ವರ್ಷಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಅಸಹಾಯಕ ರೋಗಿಗಳನ್ನು ಗುರುತಿಸಿ ಅವರ ಚಿಕಿತ್ಸೆಗೆ ಅಗತ್ಯ ಸಹಕಾರ ನೀಡುತ್ತಿದೆ. ಈ ನಿಟ್ಟಿನಲ್ಲಿ ಶನಿವಾರ ಶೃಂಗೇರಿ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಕೊಪ್ಪ ಪ್ರಶಮನಿ ಆಸ್ಪತ್ರೆಯಿಂದ ಕೀಲು ಮೂಳೆ ತಪಾಸಣೆ, ಮಧುಮೇಹ ತಪಾಸಣೆ ಮತ್ತು ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ತಪಾಸಣೆ ಮತ್ತು ಚಿಕಿತ್ಸೆ ನಡೆಯಲಿದೆ. ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಯಿಂದ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ನ.ರಾ. ಪುರ ಉಮಾಮಹೇಶ್ವರ ದೇವಸ್ಥಾನದ ಆವರಣದಲ್ಲಿ ಶಿವಮೊಗ್ಗದ ನಾರಾಯಣ ಹೃದಯಾಲಯ ತಜ್ಞ ವೈದ್ಯರು ಹೃದಯ, ಸ್ತ್ರೀ ರೋಗ ಚಿಕಿತ್ಸಾ ಶಿಬಿರ ನಡೆಯಲಿದೆ. ಬಸ್ತಿಮಠ ಶ್ರೀಗಳು, ಮಾಜಿ ಸಚಿವ ಡಿ.ಎನ್. ಜೀವರಾಜ್ ಹಿರಿಯ ಮುಖಂಡ ಎಚ್.ಟಿ.ರಾಜೇಂದ್ರ ಕಾರ್ಯಕ್ರಮದಲ್ಲಿ ಇರಲಿದ್ದಾರೆ.ಕೊಪ್ಪ ಪುರಭವನದಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಸರ್ಜಿ ಆಸ್ಪತ್ರೆ ತಜ್ಞ ವೈದ್ಯರಿಂದ ಸ್ತ್ರೀ ರೋಗ, ಪ್ರಸೂತಿ, ಬಂಜೆತನ ನಿರ್ವಹಣ, ಕೀಲು ಮೂಳೆ ಹಾಗೂ ಹೃದಯರೋಗ ತಪಾಸಣಾ ಶಿಬಿರ ನಡೆಯಲಿದೆ. ಜೆಡಿಎಸ್ ಹಿರಿಯ ಮುಖಂಡ ಎಚ್.ಜಿ.ವೆಂಕಟೇಶ್, ಜೆಡಿಎಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಮ್ಮ ಫೌಂಡೇಶನ್‌ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಇರಲಿದ್ದಾರೆ. ಮೂರೂ ತಾಲೂಕಿನ ನಾಗರಿಕರು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕೆಂದು ದಿವಾಕರ್ ಭಟ್ ವಿನಂತಿಸಿದ್ದಾರೆ.