ನಾಳೆ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಅದ್ಧೂರಿ ರಾಜ್ಯೋತ್ಸವ

| Published : Oct 31 2025, 02:30 AM IST

ನಾಳೆ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಅದ್ಧೂರಿ ರಾಜ್ಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸ್ವಾಭಿಮಾನ ಮತ್ತು ಕನ್ನಡ ಅರಿವು ಮೂಡಿಸಲು ಪಟ್ಟಣದ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನ. 1ರಂದು ಪಟ್ಟಣದಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ.

ಅಣ್ಣಿಗೇರಿ: ಕನ್ನಡ ಸ್ವಾಭಿಮಾನ ಮತ್ತು ಕನ್ನಡ ಅರಿವು ಮೂಡಿಸಲು ಪಟ್ಟಣದ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನ. 1ರಂದು ಪಟ್ಟಣದಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ನಿರ್ಧರಿಸಿದ್ದು, ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಒಕ್ಕೂಟದಿಂದ ಸಭೆ ನಡೆಸಿ ತೀರ್ಮಾನಿಸಲಾಯಿತು.

ಕನ್ನಡದ ಆದಿಕವಿ ಪಂಪನ ಜನ್ಮಸ್ಥಳವಾಗಿರುವ ಪಟ್ಟಣದಲ್ಲಿ ಆದಿಕವಿ ಪಂಪ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದು, 20ಕ್ಕೂ ಅಧಿಕ ವಿವಿಧ ಕನ್ನಡಪರ ಸಂಘಟನೆಗಳು ಪಾಲ್ಗೊಳ್ಳಲಿವೆ. ದಾಸೋಹ ಮಠದ ಡಾ. ಶಿವಕುಮಾರ ಸ್ವಾಮೀಜಿ, ಕಮತಾಪುರ ಪೀರಾ ದರ್ಗಾದ ಸೈಯ್ಯದ್ ಸಜ್ಜಾದ ಖಾದ್ರಿ ಪೀರಾ ಚಾಲನೆ ನೀಡುವರು.

ಅಂದು ಬೆಳಗ್ಗೆ 9.30 ಗಂಟೆಗೆ ಪಟ್ಟಣದ ಶ್ರೀ ಅಮೃತೇಶ್ವರ ದೇವಸ್ಥಾನ ಬಯಲಿನಿಂದ ಪ್ರಾರಂಭವಾಗುವ ಮೆರವಣಿಗೆಯು ಜಾಡಗೇರಿ ಅಗಸಿ ಓಣಿ ಮೂಲಕ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಬಸ್ ನಿಲ್ದಾಣದ ಹತ್ತಿರದ ಸ್ವಾಮಿ ವಿವೇಕಾನಂದ ವೃತ್ತದ ಮೂಲಕ ಆದಿಕವಿ ಪಂಪ ಸ್ಮಾರಕ ಭವನದ ವರೆಗೆ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ.

ಮೆರವಣಿಗೆಯಲ್ಲಿ ಅಣ್ಣಿಗೇರಿ ತಾಲೂಕು ಕಸಾಪ, ಕನ್ನಡ ಮಕ್ಕಳ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್, ಪಕ್ಷಾತೀತ ರೈತ ಹೋರಾಟ ಸಮಿತಿ, ಕನ್ನಡ ಜಾನಪದ ಸಾಹಿತ್ಯ ಪರಿಷತ್, ಆದಿಕವಿ ಪಂಪ ಕನ್ನಡ ಬಳಗ, ಅಮೃತ ಕಲಾ ಕುಂಜ, ಅಮೃತಶ್ರೀ ಕನ್ನಡ ಬಳಗ, ನೇತಾಜಿ ಸ್ಪೋರ್ಟ್ಸ್ ಕ್ಲಬ್, ಪಂಪಕವಿ ಸಾಹಿತ್ಯ ವೇದಿಕೆ, ಕನ್ನಡ ಬರಹಗಾರರ ಬಳಗ, ರನ್ನ ಕವಿ ಸಾಹಿತ್ಯ ಕಲಾ ಬಳಗ, ಹವ್ಯಾಸಿ ವಾಲಿಬಾಲ್ ಅಸೋಶಿಯೇಶನ್ ಸಂಸ್ಥೆ, ಕನ್ನಡ ಡಾ, ರಾಜಕುಮಾರ ಅಭಿಮಾನ ಬಳಗ, ಬಸವೇಶ್ವರ ಕಣಿ ವಾದನ ಸಂಘ, ಜೈ ಕರ್ನಾಟಕ ಸಂಘಟನೆ, ಶ್ರೀ ಅಮೃತೇಶ್ವರ ಆಟೋ ಅಸೋಸಿಯೇಶನ್, ಕನ್ನಡ ಕಲಾ ವೇದಿಕೆ, ಮಹಾಕವಿ ಕುಮಾರವ್ಯಾಸ ಸಾಹಿತ್ಯ ಕಲಾ ವೇದಿಕೆ, ಅಹಿಂದ ಸಂಘಟನೆ ತಾಲೂಕು ಘಟಕ ಹಾಗೂ ಅಣ್ಣಿಗೇರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಪಟ್ಟಣದ ಕನ್ನಡಪರ ಚಿಂತಕರು, ಸಾಹಿತಿಗಳು, ಹಿರಿಯರು ಪಾಲ್ಗೊಳ್ಳಲಿದ್ದಾರೆ.

ಪಂಪ ಜನ್ಮಸ್ಥಳ ಅಣ್ಣಿಗೇರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಕನ್ನಡಪರ ಸಂಘಟನೆಗಳು ಸೇರಿ ಮೆರವಣಿಗೆ ಮೂಲಕ ಅದ್ಧೂರಿಯಾಗಿ ಆಚರಿಸುತ್ತಿರುವುದು ಅತ್ಯಂತ ಶ್ರೇಷ್ಠವಾಗಿದೆ, ಅದೇ ರೀತಿ ಕನ್ನಡದ ಪಂಪ ಅಧ್ಯಯನ ಕೇಂದ್ರ, ಪಂಪ ಮೂರ್ತಿ ಪ್ರತಿಷ್ಠಾಪಿಸಿದರೆ ಪಂಪ ಜನಿಸಿದ ಪಟ್ಟಣ ಅಭಿವೃದ್ಧಿ ಪಡಿಸಿದಂತಾಗುತ್ತದೆ ಎಂದು

ಹಿರಿಯ ಸಾಹಿತಿ ಅಮೃತೇಶ ತಂಡರ್ ತಿಳಿಸಿದ್ದಾರೆ.

ಈ ಬಾರಿ ವಿಶೇಷವಾಗಿ ಕರ್ನಾಟಕ ರಾಜ್ಯೋತ್ಸವ ಎಲ್ಲ ಕನ್ನಡಪರ ಸಂಘಟನೆಗಳು ಆಚರಿಸುತ್ತಿರುವುದು ಸಂತಸದ ವಿಷಯ. ಇದೊಂದು ಮಾದರಿ ಕಾರ್ಯಕ್ರಮವಾಗಲಿದೆ. ಇದಕ್ಕೆ ತಾಲೂಕು ಆಡಳಿತವೂ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಹಸೀಲ್ದಾರ್ ಮಂಜುನಾಥ ದಾಸಪ್ಪನವರ ಹೇಳಿದ್ದಾರೆ.