ಸಾಂಸ್ಕೃತಿಕ ನಾಯಕ ಬಸವಣ್ಣ, ಹಾವೇರಿಯಲ್ಲಿ ನಾಳೆ ರಾಷ್ಟ್ರೀಯ ವಿಚಾರ ಸಂಕಿರಣ

| Published : Jul 05 2024, 12:54 AM IST

ಸಾಂಸ್ಕೃತಿಕ ನಾಯಕ ಬಸವಣ್ಣ, ಹಾವೇರಿಯಲ್ಲಿ ನಾಳೆ ರಾಷ್ಟ್ರೀಯ ವಿಚಾರ ಸಂಕಿರಣ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರ ವಚನ ಸಾಹಿತ್ಯದಲ್ಲಿನ ಜೀವನ ಮೌಲ್ಯ, ಸಾಮಾಜಿಕ ಮೌಲ್ಯಗಳು, ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ವಿಚಾರಧಾರೆಗಳನ್ನು ಅವಲೋಕಿಸಲು ಒಂದು ದಿನದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ಹಾವೇರಿ: ಹಾವೇರಿ ವಿಶ್ವವಿದ್ಯಾಲಯ ವತಿಯಿಂದ ಸಾಂಸ್ಕೃತಿಕ ನಾಯಕ ಬಸವಣ್ಣ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಜು. 6ರಂದು ನಗರದ ಜಿ.ಎಚ್. ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿದೆ. ಬಸವಣ್ಣನವರು ಒಬ್ಬ ಕ್ರಾಂತಿಯೋಗಿ ಹಾಗೂ ಮಹಾಮಾನವತಾವಾದಿ, ಮಾನವ ಪ್ರೇಮ, ನೀತಿನಿಷ್ಠೆ, ಸಾಮಾಜಿಕ ಸಮಾನತೆ ಸಾಧಿಸಲು ಪ್ರಯತ್ನಿಸಿದ ಮಹಾನ್ ವಿಚಾರವಾದಿ. ಬಸವಣ್ಣನವರ ವಚನ ಸಾಹಿತ್ಯದಲ್ಲಿನ ಜೀವನ ಮೌಲ್ಯ, ಸಾಮಾಜಿಕ ಮೌಲ್ಯಗಳು, ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ವಿಚಾರಧಾರೆಗಳನ್ನು ಅವಲೋಕಿಸಲು ಒಂದು ದಿನದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅವರು ಬಸವಣ್ಣನವರು ಮತ್ತು ಶರಣ ಚಳವಳಿ ಕುರಿತು, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಆಲೂರ ಬಸವಾದಿ ಶರಣರ ವಚನಗಳಲ್ಲಿ ವೈಜ್ಞಾನಿಕ ಚಿಂತನೆಗಳು ಕುರಿತು, ಬೆಂಗಳೂರು ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ಬಳ್ಳಿ ವಿಶ್ವಶಾಂತಿಗೆ ಬಸವಣ್ಣನವರ ಸಂದೇಶಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ ಕುರಿತು ಹಾಗೂ ಧಾರವಾಡ ಸಾಹಿತಿ ರಂಜಾನ ದರ್ಗಾ ಅವರು ಬಸವ ಧರ್ಮ ವಿಶ್ವ ಸಂದೇಶ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ ಸಂಶೋಧಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪ್ರಬಂಧ ಮಂಡನೆ ಮಾಡಲಿದ್ದಾರೆ. 30 ಜನರಿಗೆ ಅವಕಾಶ ಕಲ್ಪಿಸಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ 300 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಹಾವೇರಿ ವಿಶ್ವವಿದ್ಯಾಲಯವು ನಗರದಿಂದ 10 ಕಿ.ಮೀ. ದೂರ ಇರುವುದರಿಂದ ಕಾರ್ಯಕ್ರಮಕ್ಕೆ ಬರುವವರಿಗೆ ಸಾರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ವಿವಿ ವ್ಯಾಪ್ತಿಗೆ ಬರುವ ಹಾವೇರಿ ನಗರದ ಜಿ.ಎಚ್. ಕಾಲೇಜಿನಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.

ನೂತನವಾಗಿ ಸ್ಥಾಪಿತವಾದ ಹಾವೇರಿ ವಿಶ್ವವಿದ್ಯಾಲಯವು ಒಂದು ವರ್ಷ ಪೂರೈಸಿದ್ದು, ಎರಡನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಈ ಅವಧಿಯಲ್ಲಿ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ಪ್ರಸರಣ ಕಾರ್ಯದಲ್ಲಿ ಹಲವು ಪ್ರಮುಖ ಹೆಜ್ಜೆಗಳನ್ನು ಇರಿಸಿದೆ. ಆರು ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, 350 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಂಟರ್‌ನೆಟ್, ವಿದ್ಯುತ್ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯವಿರುತ್ತದೆ. ಪತ್ರಿಕೋದ್ಯಮ ವಿಭಾಗದಲ್ಲಿ 42 ಕಂಪ್ಯೂಟರ್‌, ಕ್ಯಾಮೆರಾ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ವಿವಿಗೆ ಬರಲು ವಿದ್ಯಾರ್ಥಿಗಳಿಗೆ ಮೊದಲಿಗಿಂದ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ರಸ್ತೆ ದುರಸ್ತಿಗೆ ಜಿಲ್ಲಾಧಿಕಾರಿ ಹಾಗೂ ಹೆಚ್ಚಿನ ಬಸ್ ಸೌಲಭ್ಯಕ್ಕೆ ಕೆಎಸ್‌ಆರ್‌ಟಿಸಿ ಡಿಸಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಹಾಗೂ ಸಂಚಾಲಕರಾದ ಡಾ. ವಿಜಯಲಕ್ಷ್ಮೀ ಎಂ. ತಿರ್ಲಾಪುರ ಮಾತನಾಡಿ, ಬಸವಣ್ಣ ಸಾಮಾಜಿಕ ಸಮಾನತೆಗೆ ಶ್ರಮಿಸಿದವರು, ವರ್ಣ ಭೇದ, ಜಾತಿಭೇದ ಹೋಗಲಾಡಿಸಲು ಹೋರಾಡಿದ ಮಹಾನ್ ವ್ಯಕ್ತಿ. ಅವರ ಮಾನವೀಯ ಮೌಲ್ಯಗಳನ್ನು ತಿಳಿಸಲು ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳುವ ಮೂಲಕ ಉಪನ್ಯಾಸಕರಲ್ಲಿ, ಸಂಶೋಧಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಉಪಕ್ರಮಗಳನ್ನು ವೃದ್ಧಿಸಲು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹಾವೇರಿ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ವಿಭಾಗದಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು 42 ಕಾಲೇಜುಗಳಲ್ಲಿ ಸುವಸ್ಥಿತವಾಗಿ ಪರೀಕ್ಷೆ ನಡೆಸಲಾಗಿದೆ. ಆನ್‌ಲೈನ್ ಮೌಲ್ಯಮಾಪನ ಆರಂಭಿಸಲಾಗಿದೆ. ಹೊಸದಾಗಿ ಸ್ಥಾಪಿತವಾದ ಏಳು ವಿವಿಗಳ ಪೈಕಿ ಪ್ರಥಮ ಫಲಿತಾಂಶ ನೀಡಿದ ಹೆಗ್ಗಳಿಕೆ ಹಾವೇರಿ ವಿವಿಗೆ ಸಲ್ಲುತ್ತದೆ ಎಂದರು.

ಹಾವೇರಿ ವಿವಿಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಐದು ಹೊಸ ಸ್ನಾತಕೋತ್ತರ ಪದವಿಗಳನ್ನು ಆರಂಭಿಸಲಾಗಿದೆ. ಎಂಬಿಎ, ಎಂಸಿಎ, ಎಂಎ ಪಬ್ಲಿಕ್ ಅಡ್ಮಿನಿಸ್ಟ್ರೇಷನ್, ಎಂಎಸ್ಸಿ ಎನರ್ಜಿ ಟೆಕ್ನಾಲಜಿ ಹಾಗೂ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿಗಳನ್ನು ಪ್ರಾರಂಭಿಸಲಾಗಿದೆ. ವಿವಿಯಲ್ಲಿ ಸರ್ಕಾರದ ಆದೇಶದ ಮೇರೆಗೆ ಎರಡು ವರ್ಷ ಧಾರವಾಡ ವಿಶ್ವವಿದ್ಯಾಲಯದ ಮಾದರಿಯಲ್ಲೇ ಶುಲ್ಕ ಪಡೆಯಲಾಗುತ್ತಿದೆ. ಮುಂದಿನ ವರ್ಷ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಶುಲ್ಕದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹಾವೇರಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಚಿದಾನಂದ ಕಮ್ಮಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಪ್ರ) ಸಹಾಯಕ ನಿರ್ದೇಶಕರಾದ ಭಾರತಿ ಎಚ್. ಇದ್ದರು.