ನಾಳೆ ಅಹಲ್ಯಾಬಾಯಿ ಹೋಳ್ಕರ್ ಜನ್ಮದಿನ

| Published : Sep 22 2024, 01:48 AM IST

ಸಾರಾಂಶ

ದೇಶದಲ್ಲಿ ಹಿಂದೂ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಸನಾತನ ಸಂಸ್ಕೃತಿ ಎತ್ತಿ ಹಿಡಿದ ರಾಜಮಾತಾ ಅಹಲ್ಯಾಬಾಯಿ ಹೋಳ್ಕರ್ ತ್ರಿಶತಾಬ್ದಿ(300ನೇ) ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿದೆ

ಕನ್ನಡಪ್ರಭ ವಾರ್ತೆ ಬೀದರ್

ಕೇಶವ ಕಾರ್ಯ ಸಂವರ್ಧನ ಸಮಿತಿಯು ಹಿಂದೂ ಜೀವನ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬರುತ್ತಿದ್ದು, ಸೆ. 23ರಂದು ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ದೇಶದಲ್ಲಿ ಹಿಂದೂ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಸನಾತನ ಸಂಸ್ಕೃತಿ ಎತ್ತಿ ಹಿಡಿದ ರಾಜಮಾತಾ ಅಹಲ್ಯಾಬಾಯಿ ಹೋಳ್ಕರ್ ತ್ರಿಶತಾಬ್ದಿ(300ನೇ) ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಕೇಶವ ಕಾರ್ಯ ಸಂವರ್ಧನ ಸಮಿತಿ ಉಪಾಧ್ಯಕ್ಷ ನಾಗೇಶ ಚಿನ್ನಾರೆಡ್ಡಿ ತಿಳಿಸಿದರು.

ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಶವ ಕಾರ್ಯ ಸಂವರ್ಧನ ಸಮಿತಿಯು 12 ಕಡೆಗಳಲ್ಲಿ ಸಂಸ್ಕಾರ ವಂಚಿತ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ಕಾರ್ಯ ಮಾಡುತ್ತಲಿದೆ. ಇದು ಸಮಾಜದಲ್ಲಿ ಉತ್ತಮ ಪರಿವರ್ತನೆ ತರುವ ಕಾರ್ಯ ಮಾಡುತ್ತಿದೆ. ದೇಶಭಕ್ತಿಯ ಭಾವ ಎಲ್ಲರಲ್ಲಿ ಒಡಮೂಡಿ ದೇಶ ಮೊದಲು ಎಂಬ ಭಾವ ಜಾಗೃತವಾಗಿಸಲು ಪ್ರಯತ್ನ ನಡೆಯುತ್ತಿದೆ ಎಂದರು.

ಸೆ.23ರಂದು ಸಾಯಂಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖರಾದ ಪ್ರದೀಪ.ಜಿ ಜೋಷಿ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಆಗಮಿಸುವ ಖ್ಯಾತ ಸಂಗೀತಗಾರ್ತಿ ರೇಖಾ ಅಪ್ಪಾರಾವ ಸೌದಿ ಅವರು ಮಾತೃ ಶಕ್ತಿಯ ಜಾಗೃತಿ ಬಗ್ಗೆ ಮಾತನಾಡುವರು.

ಈ ಕಾರ್ಯಕ್ರಮಕ್ಕೆ ಜಿಲ್ಲೆಯ ವ್ಯಾಪಾರಸ್ಥರು, ಬುದ್ಧಿಜೀವಿಗಳು, ವಕೀಲರು, ಎಂಜಿನಿಯರಗಳು ಪಾಲ್ಗೊಳ್ಳುವವರಿದ್ದಾರೆ. ಒಟ್ಟಾರೆ ಈ ಕಾರ್ಯಕ್ರಮದಲ್ಲಿ 1500ಕ್ಕೂ ಅಧಿಕ ಜನರು ಸಾಕ್ಷಿಯಾಗಲಿದ್ದಾರೆ ಎಂದು ತಿಳಿಸಿದರು. ಅಧ್ಯಾತ್ಮಿಕವಾಗಿ ಭಾರತವನ್ನು ಕಟ್ಟಬೇಕೆಂಬುದು ಅಹಲ್ಯಾಬಾಯಿ ಅವರ ಸಂದೇಶವಾಗಿತ್ತು. ಮಹಿಳೆ ಅಬಲೆಯಿಲ್ಲ, ಸಬಲೆ ಎಂಬುದನ್ನು ಸ್ವತಃ ಅಹಲ್ಯಾಬಾಯಿ ಹೋಳ್ಕರ್ ಅವರೇ ದೊಡ್ಡ ಉದಾಹರಣೆ. ಸ್ವತಃ ವಿಧವೆಯಾದರೂ ಸಮಾಜದ ಬೆಂಬಲ ಪಡೆದುಕೊಂಡು ದೊಡ್ಡ ಸಾಮ್ರಾಜ್ಯ ಕಟ್ಟಿದ್ದರು. ಎಲ್ಲೆಲ್ಲಿ ರಾಜ್ಯಗಳನ್ನು ಗೆದ್ದಿದ್ದರೋ ಅಲ್ಲಿ ಮಂದಿರಗಳನ್ನು ಜೀಣೋದ್ಧಾರ ಮಾಡಿ ಸನಾತನ ಸಂಸ್ಕೃತಿ ಜೀವಂತವಾಗಿಡಲು ಕಾರಣೀಭೂತರಾಗಿರುವರು.

ಸೌರಾಷ್ಟ್ರ ಸೋಮನಾಥ ಆದಿಯಾಗಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಅನೇಕ ಜ್ಯೋತಿರ್ಲಿಂಗಗಳನ್ನು ನಿರ್ಮಾಣ ಮಾಡುವಲ್ಲಿ ಇವರು ಎತ್ತಿದ ಕೈ. ದಕ್ಷಿಣ ಕಾಶಿ ಎಂದೇ ಬಿಂಬಿತವಾದ ನಮ್ಮ ಮೈಲಾರ ಮಲ್ಲಣ್ಣನ ದೇವಸ್ಥಾನದ ಜೋಡಿ ಕಂಬಗಳನ್ನು ಅಹಲ್ಯಾಬಾಯಿ ಅವರು ನಿರ್ಮಿಸಿದ್ದರು ಎಂದು ನಾಗೇಶ ರೆಡ್ಡಿ ಹೇಳಿದರು.

ಸಮಿತಿ ಜಿಲ್ಲಾಧ್ಯಕ್ಷ ಮಾರೂತಿ ಪಂಚಭಾಯಿ ಮಾತನಾಡಿ, ಅಹಲ್ಯಾಬಾಯಿ ತಮ್ಮ ಸಾಕು ಮಗ ಒಮ್ಮೆ ವ್ಯಭಿಚಾರಕ್ಕೆ ಕೈ ಹಾಕಿದಾಗ ಆನೆ ಕಾಲಿಗೆ ಕಟ್ಟಿ ಶಿಕ್ಷೆ ನೀಡಿದ ಧೀರ ಮಹಿಳೆ ಅವರು. ಅವರ ಜಯಂತಿ ಆಚರಿಸುತ್ತಿರುವುದು ನಮ್ಮೇಲ್ಲ ಸನಾತನಿಗಳ ಸೌಭಾಗ್ಯ ಎಂದು ತಿಳಿಸಿದರು.

ಸಮಿತಿ ಖಜಾಂಚಿ ಹಣಮಂತರಾವ ಪಾಟೀಲ ಮಾತನಾಡಿ, ಮಹಾರಾಷ್ಟ್ರದ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿ ಮಲ್ಲಾರಿರಾವ ಅವರ ಸೋಸೆಯಾದ ಅವರು ಮಾವನ ಪ್ರೇರಣೆ ಪಡೆದು ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿದ್ದರು. ಅವರ 300ನೇ ಜಯಂತಿ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕೆಂದು ಹೇಳಿದರು. ಕಾರ್ಯದರ್ಶಿ ಕೃಷ್ಣಾರೆಡ್ಡಿ ಮಾತನಾಡಿದರು. ಸಮಿತಿಯ ಸದಸ್ಯ ಪೀರಪ್ಪ ಯರನಳ್ಳಿ, ಶಿವಶರಣಪ್ಪ ಪಾಟೀಲ ಪತ್ರಿಕಾಗೋಷ್ಠಿಯಲ್ಲಿದ್ದರು.