ನಾಳೆ ಧಾರವಾಡ ಆಕಾಶವಾಣಿ ಕೇಂದ್ರದ ಅಮೃತ ಮಹೋತ್ಸವ

| Published : Jan 12 2025, 01:19 AM IST

ಸಾರಾಂಶ

ಬೆಳಗಾವಿ ಜಿಲ್ಲೆ ಬೈಲಹೊಂಗಲದ ಮಲ್ಲಮ್ಮ ಮೇಗೇರಿ ಹಾಗೂ ತಂಡ ಶ್ರೀ ಕೃಷ್ಣ ಪಾರಿಜಾತದ ಗೀತೆ, ಹುಬ್ಬಳ್ಳಿ ಗಣೇಶ ಶಿಂಧೆ ಹಾಗೂ ತಂಡ ಗೋಂಧಳಿ ಹಾಗೂ ತುಮ್ಮರಗುದ್ದಿಯ ಮರೆಪ್ಪಾ ದಾಸರ ಹಾಗೂ ತಂಡ ತತ್ವ ಪದಗಳ ಗಾಯನ ಕಛೇರಿ ನಡೆಸಿಕೊಡಲಿದ್ದಾರೆ.

ಧಾರವಾಡ:

ಆಕಾಶವಾಣಿಯ ಧಾರವಾಡ ಕೇಂದ್ರ ಜ. 8ರಂದು ತನ್ನ ಸಾರ್ವಜನಿಕ ಪ್ರಸಾರ ಸೇವೆಯ ಸಾರ್ಥಕ 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಜ. 13ರಂದು ಸಂಜೆ 5.30ಕ್ಕೆ ನಗರದ ಸೃಜನಾ ಅಣ್ಣಾಜಿರಾವ್ ಸಿರೂರ ರಂಗಮಂದಿರದಲ್ಲಿ ವೇದಿಕೆ ವಿಶೇಷ ಅಮೃತ ಮಹೋತ್ಸವ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ.

ಈ ಕುರಿತು ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಶರಣಬಸವ ಚೋಳಿನ ಪ್ರಕಟಣೆಯಲ್ಲಿ ತಿಳಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾಲ್ಗೊಂಡು, ಅಮೃತ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.

ಅಥಿತಿಗಳಾಗಿ ಕೆಎಲ್‌ಇ ಸೊಸೈಟಿ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಕೃಷಿ ವಿವಿ ಉಪ ಕುಲಪತಿ ಡಾ. ಪಿ.ಎಲ್. ಪಾಟೀಲ ಪಾಲ್ಗೊಳ್ಳಲಿದ್ದಾರೆ. ನಿಲಯದ ಮುಖ್ಯಸ್ಥ ಕೆ. ಅರುಣ ಪ್ರಭಾಕರ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲದ ಮಲ್ಲಮ್ಮ ಮೇಗೇರಿ ಹಾಗೂ ತಂಡ ಶ್ರೀ ಕೃಷ್ಣ ಪಾರಿಜಾತದ ಗೀತೆ, ಹುಬ್ಬಳ್ಳಿ ಗಣೇಶ ಶಿಂಧೆ ಹಾಗೂ ತಂಡ ಗೋಂಧಳಿ ಹಾಗೂ ತುಮ್ಮರಗುದ್ದಿಯ ಮರೆಪ್ಪಾ ದಾಸರ ಹಾಗೂ ತಂಡ ತತ್ವ ಪದಗಳ ಗಾಯನ ಕಛೇರಿ ನಡೆಸಿಕೊಡಲಿದ್ದಾರೆ.

ಪಿಟೀಲು ಕಲಾವಿದ ಪಂ. ಬಿ.ಎಸ್. ಮಠ, ವಿದುಷಿ ಅಕ್ಕಮಹಾದೇವಿ ಹಿರೇಮಠ ವಾಯೋಲಿನ್ ಜುಗಲ್‌ಬಂದಿ ಪ್ರಸ್ತುತಪಡಿಸಲಿದ್ದಾರೆ. ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ ತಬಲಾ ಸಾಥ್ ನೀಡಲಿದ್ದಾರೆ. ಅಮೃತ ಮಹೋತ್ಸವದ ಗೀತೆಗಳನ್ನು ಸದಾಶಿವ ಪಾಟೀಲ, ಡಾ. ಶ್ರೀರಾಮ ಕಾಸರ, ರೇಖಾ ದಿನೇಶ ಹೆಗಡೆ ಹಾಗೂ ಶ್ರುತಿ ಭಟ್ ಪ್ರಸ್ತುತಪಡಿಸಲಿದ್ದಾರೆ. ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದ್ದು, ಶ್ರೀಧರ ಮಾಂಡ್ರೆ ತಬಲಾ ಸಾಥ್, ಸಾರಂಗ ಕುಲಕರ್ಣಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.