ಸಾರಾಂಶ
ತಾಲೂಕಿನ ಹಳೇಕೋಟೆ ಬೆಟ್ಟದ ಶ್ರೀ ರಂಗನಾಥಸ್ವಾಮಿಗೆ ಭಾನುವಾರ ಸಹಸ್ರ ಕುಂಭಾಭಿಷೇಕ ನಡೆಯಲಿದ್ದು ಶುಕ್ರವಾರ ಸಂಜೆಯಿಂದ ಪೂರ್ವ ಸಿದ್ಧತೆಗಳು ಪ್ರಾರಂಭವಾಗಿದೆ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕಿನ ಹಳೇಕೋಟೆ ಬೆಟ್ಟದ ಶ್ರೀ ರಂಗನಾಥಸ್ವಾಮಿಗೆ ಭಾನುವಾರ ಸಹಸ್ರ ಕುಂಭಾಭಿಷೇಕ ನಡೆಯಲಿದ್ದು ಶುಕ್ರವಾರ ಸಂಜೆಯಿಂದ ಪೂರ್ವ ಸಿದ್ಧತೆಗಳು ಪ್ರಾರಂಭವಾಗಿದೆ. ಮುಜರಾಯಿ ಇಲಾಖೆಯ ಅಗಮಿಕ ಪಂಡಿತ್ ವಿಜಯಕುಮಾರ್ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಶ್ರೀ ರಂಗನಾಥಸ್ವಾಮಿಯ ದೇವಾಲಯದ ಜೀರ್ಣೋದ್ಧಾರಗೊಂಡು 15 ವರ್ಷವಾಗಿದೆ. ಯಾವುದೇ ದೇವಾಲಯ ಉದ್ಘಾಟನೆ ಆದ ನಂತರ 12 ನೇ ವರ್ಷಕ್ಕೆ ಕುಂಭಾಭಿಷೇಕ ನಡೆಯುತ್ತದೆ. ಆದರೆ ಕೋವಿಡ್ ಕಾರಣದಿಂದ ಪೂಜಾ ಮಹೋತ್ಸವ ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರ ಮನಸ್ಸಿನಲ್ಲಿ ದುಗುಡ ಉಂಟಾಗಿತ್ತು ಹಾಗೂ ಸಮಾಧಾನ ಇರಲಿಲ್ಲ. ಕುಂಭಾಭಿಷೇಕ ವಿಳಂಭವಾದ್ದರಿಂದ ಭಾನುವಾರ ಸಂಪ್ರೋಕ್ಷಣಾ ಸಹಸ್ರ ಕುಂಭಾಭಿಷೇಕವನ್ನು ಗೌಡರ ಕುಟುಂಬದವರು ಶ್ರದ್ಧಾಭಕ್ತಿಯಿಂದ ನಡೆಸುತ್ತಿದ್ದಾರೆ. ಈ ಅಭಿಷೇಕಕ್ಕೆ 7 ಪರ್ವತಗಳ ಮಣ್ಣು, 7 ಸಮುದ್ರಗಳ ನೀರು, ಅಯೋಧ್ಯೆ, ತಿರುಪತಿ, ಗಂಗಾ, ಯಮುನಾ, ನಮ್ರದಾ, ಕಾಶಿ ಸೇರಿದಂತೆ ಹಲವು ನದಿಗಳ ನೀರು 108 ಬಗೆಯ ಹೂವುಗಳು, ಹಲವಾರು ಬಗೆಯ ಮರದ ಚೆಕ್ಕೆಗಳು, ಹಲವಾರು ಬಗೆಯ ಹಣ್ಣುಗಳನ್ನು ಬಳಸಿ ಕಳಶ ಸಿದ್ಧಪಡಿಸಿದ್ದು 60 ಕ್ಕೂ ಹೆಚ್ಚು ಪಂಡಿತರು ಈ ಕುಂಭಾಭಿಷೇಕ ನಡೆಸಿಕೊಡಲಿದ್ದಾರೆ. ಈ ಕುಂಭಾಭಿಷೇಕ ನಡೆಸುವುದರಿಂದ ನಾಡಿನ ಜನರಿಗೆ, ರೈತರಿಗೆ ಒಳ್ಳೆಯದಾಗುತ್ತದೆ. ದೇವೇಗೌಡರ ಕುಟುಂಬದರು ಹಾಗೂ ಸಹಸ್ರಾರು ಸಂಖ್ಯೆಯ ಭಕ್ತರು ಈ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಪೂಜಾವಿಧಿ ವಿಧಾನಗಳು ಶುಕ್ರವಾರ ಸಂಜೆಯಿಂದ ನಡೆಯಲಿದ್ದು, ಭಾನುವಾರ ಮಧ್ಯಾಹ್ನದ ವೇಳೆಗೆ ಪೂಜಾ ವಿಧಿವಿಧಾನಗಳು, ಸಹಸ್ರ ಕುಂಭಾಭಿಷೇಕ ಮುಕ್ತಾಯ ಆಗಲಿದ್ದು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಸಹಸ್ರಾರು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದ್ದಾರೆ. ಸಮಾ ಜ ಸೇವಕ ನ್ಯಾಮನಹಳ್ಳಿ ಎನ್.ಆರ್. ಅನಂತ್ ಕುಮಾರ್ ಹಾಗೂ ಸುತ್ತಲ ಗ್ರಾಮಸ್ಥರು ಪೂಜಾ ಸಿದ್ಧತೆಗೆ ಸಹಕಾರ ನೀಡುತ್ತಿದ್ದಾರೆ.