ಸಾರಾಂಶ
ದೀಪಕ್ ಅಳದಂಗಡಿ
ಕನ್ನಡಪ್ರಭ ವಾರ್ತೆ ವೇಣೂರು
ಬಾಹುಬಲಿ ಬೆಟ್ಟಮುಗಿಲು ಮುಟ್ಟುವ ಜಯಕಾರಗಳ ನಡುವೆ, ಫಲ್ಗುಣಿ ನದಿ ತೀರದ ಬಾಹುಬಲಿ ಬೆಟ್ಟದಲ್ಲಿ 421 ವರ್ಷಗಳಿಂದ ೩೫ ಅಡಿ ಎತ್ತರಕ್ಕೆ ಸಾಕಾರಗೊಂಡಿರುವ ಪಾವನ ಮೂರ್ತಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ವೈಭವದ ಮಸ್ತಕಾಭಿಷೇಕ, ೨೧ನೇ ಶತಮಾನದ ಮೂರನೇ ಮಹಾಜಳಕ, ಪ್ರತಿಷ್ಠಾಪನೆಯ ನಂತರದ ನಾಲ್ಕನೇ ಮಹಾಮಜ್ಜನ ಶುಕ್ರವಾರ ಸಂಪನ್ನಗೊಂಡಿತು.
ಮಾಘ ಬಹುಳ ಷಷ್ಠಿಯ ಶುಕ್ರವಾರ ೨೦೨೪ರ ಮಾ. ೧ರಂದು ಬೆಳಗ್ಗೆ ಶ್ರೀ ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ ವೇಣೂರು ಇವರ ವತಿಯಿಂದ ನಿತ್ಯವಿಧಿ ಸಹಿತ, ಸಿದ್ಧ ಚಕ್ರಯಂತ್ರರಾಧನಾ ವಿಧಾನ, ಪೂರ್ವಾಹ್ನ ಅಗ್ನಿತ್ರಯಾರ್ಚನಾ ಪೂರ್ವಕ ನಿರ್ವಾಣ ಕಲ್ಯಾಣ ನೆರವೇರಿತು. ಅಗ್ರೋದಕವನ್ನು ಸಂಜೆ ೪ ಗಂಟೆಯ ಶುಭ ಮುಹೂರ್ತದಲ್ಲಿ ಮೆರವಣಿಗೆಯಲ್ಲಿ ಬೆಟ್ಟಕ್ಕೆ ತರಲಾಯಿತು.
ವೇಣೂರುಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭೀಷೇಕ ಸಮಿತಿಗೆ ಕೊನೆಯ ಕಲಶಾಭಿಷೇಕದ ಸೌಭಾಗ್ಯ ಪ್ರಾಪ್ತವಾಯಿತು. ಮೊದಲ ಜಲದ ಹನಿಗಳು ಬಾಹುಬಲಿ ಶಿರದ ಸುರುಳಿ ಕೂದಲಿನ ಎಡೆಗಳಲ್ಲಿ ಮುತ್ತುಗಳಂತೆ ಜಾರಿ ಮುಖದ ಮೇಲುರುಳಿ, ಭುಜಗಳಿಂದಾಗಿ ಹೊರಗೆ ಸಿಂಚನವಾದಾಗ ಮೊದಲ ಜಯಕಾರ ಭಕ್ತರಿಂದ ಉದ್ಗಾರವಾಯಿತು.
ಎಳನೀರು, ಕಬ್ಬಿನ ರಸ ಕ್ಷೀರದಲ್ಲಿ ಮಿಂದ ಮಂದಸ್ಮಿತ: ಭವದ ತಾಪ ನಿವಾರಣೆಗಾಗಿ ನಿರ್ಮಲಜಲದ ಅಭಿಷೇಕ ನಿನಗೆ ಮಾಡುತ್ತಿರುವೆ ಎನ್ನುತ್ತಾ ೧೦೦೮ ಕಲಶಗಳಿಂದ ಅಭಿಷೇಕ ನಡೆಯುತ್ತಿದ್ದಂತೆ ಸಂಜೆಯ ವೇಳೆ ಎಲ್ಲೆಡೆ ತಂಪಿನ ವಾತಾವರಣ ಪಸರಿಸಿತ್ತು. ನಾರಿಕೇಳ ಅಭೀಷೇಕದ ಬಳಿಕ ಕಬ್ಬಿನ ರಸ ಧಾರೆಯಾಗಿ ಮಸ್ತಕದ ಮೇಲಿನಿಂದ ಹರಿದಿತ್ತು.
ಹಾಲಿನಂತಹ ಮನದ ಮೂರ್ತಿಯ ಮೇಲೆ ಸಮಿತಿ ಸದಸ್ಯರು ಕ್ಷೀರಾಭೀಷೇಕ ಶುರುವಿಟ್ಟಾಗ ಮೂಡಿದ ಚಳಿಯ ವಾತಾವರಣ ಹಿತವನ್ನುಂಟು ಮಾಡಿತು. ಭಾವುಕರ ಕರತಾಡನ, ‘ಜೈ ಬೋಲೋ.....’ ಘೋಷಣೆಯ ಜೊತೆ ಜೊತೆಗೆ ಕ್ಷೀರವು ಸ್ವಾಮಿಯ ಗುಂಗುರು ಕೂದಲು, ವಿಶಾಲವಾದ ಹುಬ್ಬು, ನಾಸಿಕ, ಮಂದಸ್ಮಿತನ ತುಟಿ, ನೀಳನೆ ಕೊರಳು, ಹರವಾದ ಎದೆಯ ಮೂಲಕ ಹರಿದು ಬಳಿಕ ಒಂದೇ ಸಾರಿ ವೇಗವಾಗಿ ಪಾದ ಸೇರಿ ಮೋಕ್ಷ ಪಡೆದಂತೆ ವಿರಮಿಸಿತು. ಇಲ್ಲಿಂದ ಪ್ರಾರಂಭವಾಯಿತು ಮೊಹಕ ಮೂರುತಿಯ ಓಕುಳಿಯಾಟ.
ಕಲ್ಕಚೂರ್ಣ(ಅಕ್ಕಿ ಹಿಟ್ಟು) ಅಟ್ಟಳಿಗೆಯಿಂದ ಸುರಿದಾಗ ಅಂಬರದಲ್ಲಿ ಮೂರ್ತಿ ತೇಲುತ್ತಿರುವಂತೆ ಭಾಸವಾಯಿತು. ಭಕ್ತ ಸಮೂಹ ಆನಂದದಲ್ಲಿ ತೇಲಾಡಿತ್ತು.ಅಭಿಷೇಕ ಸಂದರ್ಭದ ಜಿನ ಭಕ್ತಿಗೀತೆ ಸುಧೆ ಪರಿಸರವೀಡೀ ವ್ಯಾಪಿಸಿ ಭಕ್ತಿಯ ಸಿಂಚನವನ್ನು ಮಾಡುತ್ತಿದ್ದಂತೆಯೇ ಅರಶಿನ ಅಭಿಷೇಕ ಸರದಿ. ಸಮಚಿತ್ತನ ಮೈಯತುಂಬ ಚಿನ್ನದ ಕವಚ ತೊಡಿಸಿದಂತಾಗಿತ್ತು ಅರಶಿನದ ಅಭಿಷೇಕದಿಂದ.
ಸವೋಪೌಷಧಿಯೆಂದು ಕರೆಯಲ್ಪಡುವ ಕಷಾಯದ ಅಭೀಷೇಕದಿಂದ ಹೊರಹೊಮ್ಮಿದ ಸುಗಂಧ ಭಕ್ತರಿಗೆ ವಿಶಿಷ್ಟ ಆಹ್ಲಾದವನ್ನುಂಟು ಮಾಡಿತು. ಬಳಿಕ ಚತುಷ್ಕೋನ ಕಲಶಾಭಿಷೇಕ ನೆರವೇರಿತು. ಇದಾದನಂತರ ಕೇಸರಿ ಮಿಶ್ರಿತ ಜಲದ ಅಭಿಷೇಕವು ಕಣ್ಮನಸೆಳೆಯಿತು.
ನೋಡುನೋಡುತ್ತಿದ್ದಂತೆಯೇ ಶ್ರೀಗಂಧ ಶಿರದಿಂದ ಕೆಳಗೆ ಹರಿಯುತ್ತಿದ್ದಂತೆ ಮೈಮಾಟದಲ್ಲಿ ವರ್ಣ ವಿಕಸನಗೊಳ್ಳುತ್ತಿದ್ದ ಅಪೂರ್ವ ದೃಶ್ಯ ವೈಭವ, ಬಾಹುಬಲಿ ಸ್ವಾಮಿ ಜಗಕ್ಕೆಲ್ಲಾ ಸ್ವಾಮಿ ಎಂಬ ಭಾವಕ್ಕೆ ಕಾರಣವಾಯಿತು. ಕೊನೆಯಲ್ಲಿ ವಿರಾಟ್ ವಿರಾಗಿಯು ಕುಂಕುಮಧಾರಿಯಾಗಿ ಕಂಗೊಳಿಸಿದಾಗ ಜಯಕಾರ ಅಷ್ಟದಿಕ್ಕುಗಳಲ್ಲಿ ಅನುರಣಿಸಿತು.
ಕೀರಿಟಧಾರಿಗೆ ಕನಕ ಪುಷ್ಪವೃಷ್ಟಿ: ಪಂಚದ್ರವ್ಯಗಳಲ್ಲಿ ಮಿಂದೆದ್ದ ಮೂರ್ತಿಗೆ ಕನಕಪುಷ್ಪ ವೃಷ್ಟಿಯ ಸೇವೆ. ಬಳಿಕ ರಂಗು ರಂಗಿನ ಪುಷ್ಪಾರ್ಚನೆ. ಪುಷ್ಪವೃಷ್ಟಿಯಾಗುತ್ತಿದ್ದಂತೆ ಭಕ್ತ ಸಂದೋಹದವರ ದೇಹ, ಮನಸ್ಸಿನಲ್ಲಿ ವೀಶಿಷ್ಟವಾದ ಹಗುರಭಾವ, ಧನ್ಯತೆಯ ಭಾವ ಮೂಡಿಸಿದುದರಲ್ಲಿ ಅನುಮಾನವೇ ಇಲ್ಲ. ಪುಷ್ಪರಾಶಿಯು ಸದ್ಗುಣ ಮೋಹನನ ಶಿರದ ಮೇಲೆ ಹರಡಿದಾಗ ಬಾಹುಬಲಿ ಕಿರೀಟಧಾರಿಯಂತೆ ಗೋಚರಿಸಿದರು.
ಕೊನೆಯಲ್ಲಿ ಬೃಹತ್ ಪುಷ್ಪಮಾಲೆಯನ್ನು ಪರಮಜಿನದೇವನಿಗೆ ತೊಡಿಸಿ, ಸುಮಾರು ೪೦ ಅಡಿ ಉದ್ದದ ದಾರಕ್ಕೆ ಆರತಿಯನ್ನು ಕಟ್ಟಿ ಜಯಘೋಷಗಳ ನಡುವೆ ಸಂಘ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಕುಂಕುಮೋತ್ಸವದಲ್ಲಿ ಭಕ್ತರು ಪಾಲ್ಗೊಂಡರು.
ಸೇರಿದ್ದ ಭಕ್ತಸಮೂಹಕ್ಕೆ ಗಂಧೋದಕ ಪ್ರಸಾದ ವಿತರಣೆಯಾಯಿತು. ಅವಭೃತ ಸ್ನಾನದಲ್ಲಿ ಜನರು ಸಂಭ್ರಮದಿಂದ ನರ್ತಿಸಿ ಮಹಮಸ್ತಕಾಭಿಷೇಕಕ್ಕೆ ವಿದಾಯ ಬರೆದರು. ಧ್ವಜಾವರೋಹಣ, ತೋರಣ ವಿಸರ್ಜನೆ ಮತ್ತು ಕಂಕಣ ವಿಸರ್ಜನೆಯೊಂದಿಗೆ ೯ ದಿನಗಳ ಮಹಾನ್ ಕಾರ್ಯಕ್ಕೆ ಮಂಗಳಹಾಡಲಾಯಿತು.
ದಶದಿಕ್ಕುಗಳಿಗೆ ಪಸರಿಸಿದ ಕೇಸರಿಯಾ, ಕೇಸರಿಯಾ…
ಕೇಸರ ವರ್ಣವನ್ನು ವಿರಾಗಿಯ ಶರೀರದ ಮೇಲೆ ಹರಡಿದಾಗ ಕೇಸರಿಯಾ, ಕೇಸರಿಯಾ ಎಂಬ ಹಾಡು ದಶದಿಕ್ಕುಗಳಿಗೆ ಹರಡಿತು. ಸೇರಿದವರೆಲ್ಲರೂ ಭಕ್ತಿಭಾವದಿಂದ ದನಿಗೂಡಿಸಿದರು.
ವಾದ್ಯವೃಂದಗಳವರ ಮೇಳ, ಸ್ತುತಿ ಮಂತ್ರಗಳ ಘೋಷ ಮುಗಿಲುಮುಟ್ಟಿತು. ಅಷ್ಟಗಂಧವನ್ನು ಸ್ವಾಮಿಯ ಕಾಯದ ಮೇಲೆ ಸಿಂಪಡಿಸಿದಾಗ ವಾತಾವರಣದಲ್ಲಿ ಪಾವನತೆಯ ಪುನೀತತೆ ಸೃಷ್ಟಿಯಾಯಿತು. ಚಂದನವು ವೀತರಾಗಿಯ ಶರೀರವಿಡೀ ಪೂಸಿತಗೊಂಡಾಗ ಅನುಪಮ ಭವ್ಯ ಶರೀರದ ಲೀಲಾವಿನೋದ ಏನೆಂಬುದು ಜಗಕೆ ಗೋಚರಿಸಿತು. ಬಾಹಬಲಿಯ ಸುತ್ತ ವಿಶೇಷ ಪ್ರಭಾವಳಿ ಮೂಡಿ ಬಣ್ಣಗಳ ಅಭ್ಯಂಜನ ಮುಕ್ತಾಯಕಂಡಿತು.