ರೈಲು ತಡೆ ನಡೆಸಲು ಯತ್ನಿಸಿದ ರೈತರ ಬಂಧನ; ಬಿಡುಗಡೆ

| Published : Mar 02 2024, 01:45 AM IST

ರೈಲು ತಡೆ ನಡೆಸಲು ಯತ್ನಿಸಿದ ರೈತರ ಬಂಧನ; ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಲು ನಾವು ರೈಲು ತಡೆ ನಡೆಸಲು ಬಂದಿದ್ದೇವೆ. ನಾವು ಗೂಂಡಾಗಳು, ದೇಶ ದ್ರೋಹಿಗಳಲ್ಲ. ನಾವು ಲೂಟಿ ಮಾಡಲು ಬಂದಿಲ್ಲ. ನಮ್ಮನ್ನು ಏಕೆ ತಡೆದಿದ್ದೀರಿ? ರೈಲು ನಿಲ್ದಾಣಕ್ಕೆ ಹೋಗಲು ನಮಗೆ ಹಕ್ಕಿಲ್ಲವೇ ಎಂದು ರೈಲ್ವೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರೈಲು ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ರೈತರನ್ನು ಬಂಧಿಸಿ ಸಿಎಆರ್ ಮೈದಾನಕ್ಕೆ ಕರೆದೊಯ್ದು ಸಂಜೆ ವೇಳೆಗೆ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರುಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ, ರೈತರ ಮೇಲಿನ ಗೂಂಡಾಗಿರಿ ಖಂಡಿಸಿ ರೈಲು ತಡೆಗೆ ಮುಂದಾದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರನ್ನು ಶುಕ್ರವಾರ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ನೂರಾರು ರೈತರು ರೈಲು ತಡೆಯಲು ಮೈಸೂರು ರೈಲು ನಿಲ್ದಾಣಕ್ಕೆ ತೆರಳಿದರು. ಈ ವೇಳೆ ರೈಲು ನಿಲ್ದಾಣ ಪ್ರವೇಶ ದ್ವಾರದಲ್ಲೇ ಇದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಇದರಿಂದ ರೈತರು ಮತ್ತು ಪೊಲೀಸರ ನಡುವೆ ನೂಕಾಟ ತಳ್ಳಾಟ ನಡೆದು ಮಾತಿನ ಚಕಮಕಿ ನಡೆಯಿತು.

ನಂತರ ಪೊಲೀಸರು ಬಂಧಿಸಲು ಯತ್ನಿಸಿದಾಗ ದ್ವಾರದ ಬಳಿ ಕುಳಿತ ರೈತರು, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಲು ನಾವು ರೈಲು ತಡೆ ನಡೆಸಲು ಬಂದಿದ್ದೇವೆ. ನಾವು ಗೂಂಡಾಗಳು, ದೇಶ ದ್ರೋಹಿಗಳಲ್ಲ. ನಾವು ಲೂಟಿ ಮಾಡಲು ಬಂದಿಲ್ಲ. ನಮ್ಮನ್ನು ಏಕೆ ತಡೆದಿದ್ದೀರಿ? ರೈಲು ನಿಲ್ದಾಣಕ್ಕೆ ಹೋಗಲು ನಮಗೆ ಹಕ್ಕಿಲ್ಲವೇ ಎಂದು ರೈಲ್ವೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರೈಲು ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ರೈತರನ್ನು ಬಂಧಿಸಿ ಸಿಎಆರ್ ಮೈದಾನಕ್ಕೆ ಕರೆದೊಯ್ದು ಸಂಜೆ ವೇಳೆಗೆ ಬಿಡುಗಡೆಗೊಳಿಸಿದರು.

ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಮಾಡದಿದ್ದರೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಮರಣ ಶಾಸನವನ್ನು ರೈತರು ಬರೆಯುತ್ತೇವೆ. ಕೇಂದ್ರ ಸರ್ಕಾರಕ್ಕೆ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಲು ಹೆಚ್ಚಿನ ಕಾಳಜಿ ಇರುತ್ತದೆ. ಆದರೆ, ರೈತರ ಸಾಲ ಮನ್ನಾ ವಿಚಾರ, ಎಂ.ಎಸ್. ಸ್ವಾಮಿನಾಥನ್ ವರದಿ ಬೆಂಬಲ ಬೆಲೆ, ಡಬ್ಲ್ಯೂಟಿಓ ಒಪ್ಪಂದ, ರೈತರಿಗೆ ಪಿಂಚಣಿ ನೀಡುವ ಯೋಜನೆ, ಬೆಳೆ ವಿಮೆ ಪದ್ಧತಿ, ಕಳೆದ ವರ್ಷ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 750 ರೈತ ಕುಟುಂಬಕ್ಕೆ ನೆರವು ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ಕಿಡಿಕಾರಿದರು.

ರೈತರು ನ್ಯಾಯ ಕೇಳಿದರೆ ಗೋಲಿಬಾರ್ ಮಾಡುತ್ತಾರೆ. ಇದು ದೇಶದ ರೈತರಿಗೆ ಮಾಡುವ ಅಪಮಾನ. ರೈತರು ಗುಲಾಮರು, ಭಿಕ್ಷುಕರಲ್ಲ. ಕೂಡಲೇ ಸಮಸ್ಯೆ ಬಗೆಹರಿಸಿ ಅನ್ನದಾತನ ಋಣ ತೀರಿಸಿ. ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರು ಯಾರೂ ದೇಶದ್ರೋಹಿಗಳಲ್ಲ. ನಾವು ದೆಹಲಿಗೆ ಹೋಗುವಾಗ ಮಾರ್ಗ ಮಧ್ಯದಲ್ಲೇ ತಡೆದು ವಾಪಸ್ ಕಳುಹಿಸುತ್ತಾರೆ. ದೆಹಲಿಯಲ್ಲಿ ಹೋರಾಟ ಮಾಡುವ ಪಂಜಾಬ್, ಹರಿಯಾಣ ರೈತರನ್ನು ದೇಶ ವಿರೋಧಿಗಳು ಎನ್ನುತ್ತಾರೆ. ಇದರ ಅರ್ಥ ಏನು? ರೈತರ ಸಮಸ್ಯೆ ಬಗೆಹರಿಯುವವರೆಗೂ ಚಳವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಎಚ್ಚರಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಮುಖಂಡರಾದ ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ಹೆಗ್ಗೂರು ರಂಗರಾಜು, ಬನ್ನೂರು ಸೂರಿ, ಬಿ.ಪಿ. ಪರಶಿವಮೂರ್ತಿ, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಕುರುಬೂರು ಪ್ರದೀಪ್, ಕಿರಗಸೂರು ಪ್ರಸಾದ್ ನಾಯಕ್, ಉಮೇಶ್, ಕಾಟೂರು ಮಹಾದೇವಸ್ವಾಮಿ, ನಾಗೇಶ್, ಶ್ರೀಕಂಠ, ನಂಜುಂಡಸ್ವಾಮಿ, ವರಕೋಡು ನಾಗೇಶ್, ಪಿ. ರಾಜು, ಅಂಬಳೆ ಮಂಜುನಾಥ್, ಕೋಟೆ ಸುನಿಲ್, ಕೊಡನಹಳ್ಳಿ ಪ್ರಕಾಶ್, ಸೋಮಶೇಖರ್, ಚೇತನ್, ಶಂಭು, ಶಾಂತರಾಜ್, ಶಿವಮೂರ್ತಿ, ಮಂಜುನಾಥ್, ಶಿವಕುಮಾರ್ ಮೊದಲಾದವರು ಇದ್ದರು.